ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Saturday, November 19, 2016

ಕನಕಪುರ ಅಲ್ಲ 'ಕಾನ್-ಕಾನಳ್ಳಿ'

ಬೆಂಗಳೂರಿನಿಂದ ಸುಮಾರು ೧೨ ಹರದಾರಿ (೬೦ ಕಿ.ಮೀ) ದೂರ ಇರುವ ಊರಿಗೆ ಈಗ 'ಕನಕಪುರ' ಎಂದು ಹೇಳಲಾಗುತ್ತದೆ. ಆದರೆ ಕನ್ನಡ ವಿಕಿಪಿಡಿಯಾದಲ್ಲಿ ಹೀಗೆ ಹೇಳಲಾಗಿದೆ.
1974ರ ವರೆಗೂ ಇದಕ್ಕೆ ಕಾನಕಾನಹಳ್ಳಿ ಎಂಬ ಹೆಸರಿತ್ತು.
 ಕನ್ನಡದಲ್ಲಿ 'ಕಾಣಿ' ಎಂಬ ಪದವಿದೆ. 'ಕಾಣಿ' kāṇi property, possession, hereditary right; [DED1444].

'ಕಾನ್-ಕಾನಳ್ಳಿ' ಎಂದೇ ಮಂದಿಯ ಬಾಯಲ್ಲಿ ಇರುವ ಹೆಸರು. ಕಾಣಿಕಾರನ ಹಳ್ಳಿ ಎಂಬುದು ಇದರ ಮೊದಲ ಹೆಸರೆಂದು ಕಾಣಿಕಾರ್ (ನೆಲದೊಡೆಯ) ಎಂಬುದರಿಂದ ಈ ಹೆಸರು ಬಂತೆಂದೂ ಇಲ್ಲಿಯ ಜನ ತಿಳಿದು ಕೊಂಡಿದ್ದಾರೆಂದೂ ಆದರೆ ಇದು ಸಂಸ್ಕ್ರುತದ ಕನ್ಯಾ-ಕರ್ಣ('ಭವಾನಿ'ಯ ಕಿವಿ) ಪದವಾಗಿದ್ದಿರಬಹುದೆಂದು ೧೮೦೦ ರಲ್ಲಿ ಪ್ರಾನ್ಸಿಸ್ ಬುಕನನ್ ಎಂಬ ಸ್ಕಾಟಿಶ್ ಮಾಂಜುಗ ಮದರಾಸು, ಮಯ್ಸೂರು, ಮಲಬಾರ್ ಮತ್ತು ಕೆನರ ಕಡೆಗಳಲ್ಲೆಲ್ಲಾ ಸುತ್ತಾಡಿ 'A Journey from Madras through the Countries of Mysore, Canara and Malabar (1807)' ಎಂಬ ಹೊತ್ತಗೆನ್ನು ಬರೆದು, ಅದರಲ್ಲಿ ಹೀಗೆ ಹೇಳಿದ್ದಾನೆ:-

ಕಾಣಿಕಾರನ ಹಳ್ಳಿ: ಕಾಣಿಕಾರರಿಗೋಸ್ಕರವೇ ಯಾಕೆ ಹಳ್ಳಿಯನ್ನು ಕಟ್ಟಲಾಯಿತು ಇಲ್ಲವೆ ಇಲ್ಲಿದ್ದವರೆಲ್ಲ ಕಾಣಿಕಾರರೇ? ಈ ಕೇಳ್ವಿಗಳಿಗೆ ಉತ್ತರ ದೊರೆಯುವುದು ಕಶ್ಟ. ಹೀಗೆ ಕಾಣಿಕಾರರಿಗೆ ಹಳ್ಳಿಯನ್ನು ಕಟ್ಟುವ ಪರಿಪಾಟ ಇದ್ದರೆ ಇದೇ ಹೆಸರಿನ ಊರಿನ ಹೆಸರುಗಳು ನಮಗೆ ಬೇರೆ ಕಡೆಗಳಲ್ಲಿಯೂ ಕಾಣಸಿಗಬೇಕಿತ್ತು. ಆದರೆ ಬೇರೆ ಕಡೆ ಕಾಣಸಿಗುವುದಿಲ್ಲ.

ಕನ್ಯಾ-ಕರ್ಣ ಹಳ್ಳಿ: ಹೆಚ್ಚಿನ ಮಂದಿಗೆ ತಿಳಿಯದ ಸಂಸ್ಕ್ರುತದ ಪದಗಳನ್ನು ಬಳಸಿ ಊರಿಗೆ ಹೆಸರು ಕೊಡುವುದಕ್ಕೆ ಯಾವುದೇ ತೆರಹು ಇಲ್ಲ ಯಾಕಂದರೆ ಕನ್ನಡ ನಾಡಿನ ಊರುಗಳ ಹೆಸರುಗಳೆಲ್ಲ ಹೆಚ್ಚಾಗಿ ಕನ್ನಡದ್ದೇ ಆದ ಪದಗಳನ್ನು ಬಳಸಿರುತ್ತಾರೆ.

ಇವೆರಡೂ ಬಿಡಿಸಿಕೆಗಳ ಆಚೆ ನೋಡಿದರೆ ಮಯ್ಸೂರು ಸೀಮೆಯಲ್ಲಿ (ಬೆಂಗಳೂರು ಮತ್ತು ಮಯ್ಸೂರಿನ ಸುತ್ತಮುತ್ತ) 'ಕನ್ನ' ಎಂಬ ಪದವಿರುವ ಹಲವು ಊರುಗಳ ಹೆಸರು ಸಿಗುತ್ತವೆ. ಅಲ್ಲದೆ ಕೊಲ್ಲಾಪುರ, ಊಟಿಯಲ್ಲೂ ಕೂಡ ಕಾಣಸಿಗುತ್ತವೆ.

ಕನ್ನಂಬಾಡಿ (ಕೆ.ಅರ್.ಎಸ್)
ಕನ್ನಳ್ಳಿ, ಕನ್ನಹಳ್ಳಿ(ಮಳವಳ್ಳಿ ಮತ್ತು ಬೆಂಗಳೂರ ಹತ್ತಿರ)
ಚಿಕ್ಕಕನ್ನಹಳ್ಳಿ, ದೊಡ್ಡಕನ್ನಹಳ್ಳಿ (ಬೆಂಗಳೂರಿನ ಸರ್ಜಾಪುರದ ದಾರಿಯಲ್ಲಿ)
ಕನ್ನಮಂಗಲ (ಬೆಂಗಳೂರು)
ಕನ್ನೇಗವ್ಡನ ಕೊಪ್ಪಲು(ಮಯ್ಸೂರು)
ಕನ್ನೇನಹಳ್ಳಿ (ತುಮಕೂರು)
ಕಾನೇರಿ(ಕೊಲ್ಲಾಪುರ)
ಕನ್ನೇರಿ (ಊಟಿ)

ಆದ್ದರಿಂದ 'ಕನಕಪುರ'ದ ದಿಟವಾದ ಹೆಸರು 'ಕನ್ನಹಳ್ಳಿ' ಎಂದು ಎಣಿಸಬಹುದು. ಈ ಕನ್ನಹಳ್ಳಿಯನ್ನು ಬೇರೆ ಕನ್ನಹಳ್ಳಿಗಳಿಂದ ಬೇರೆಯಾಗಿಸಲು ಬಹುಶಹ 'ಕನ್ನಕನ್ನ' ಎಂದು ಎರಡು ಸಲ ಸೇರಿಸಿ 'ಕನ್ನಕನ್ನಹಳ್ಳಿ' ಎಂದು ಹೇಳಹೊರಟಾಗ
'ಕನ್-ಕನ್ನಳ್ಳಿ' ಆಗಿ, ಅದನ್ನೇ ದಿನಬಳಕೆಯ ನೆಲೆಯಲ್ಲಿ ಬೇಗ ಹೇಳುವಾಗ ಕಾನ್-ಕಾನಳ್ಳಿ ಎಂದಾಗಿರಬೇಕು ಎಂದು ಎಣಿಸುವುದಕ್ಕೆ ಎಡೆಯಿದೆ.

ಹಾಗಾದರೆ, ಈ 'ಕನ್ನ'ರು ಯಾರು ಎಂಬುದನ್ನು ಮುಂದಿನ ಪದಗುಟ್ಟಿನಲ್ಲಿ ತಿಳಿಯೋಣ

Saturday, November 12, 2016

ಗಗನ ಚುಕ್ಕಿ ಅಲ್ಲ 'ಗಂಗನ ಚುಕ್ಕಿ'

ಮಳವಳ್ಳಿಯಿಂದ ಸತ್ತೇಗಾಲಕ್ಕೆ ಹೋಗುವಾಗ ಸಿಗುವ ಶಿವನ ಸಮುದ್ರದಲ್ಲಿ ಇರುವ ಅಬ್ಬಿಗೆ 'ಗಗನ ಚುಕ್ಕಿ' ಎಂಬ ಹೆಸರು ಈಗ ಬಳಕೆಯಲ್ಲಿದೆ. ಇಲ್ಲಿ 'ಗಗನ'(ಕನ್ನಡದ ಬಾನು) ಎಂಬುದು ಸಂಸ್ಕ್ರುತ ಪದ ಎಂಬುದಾಗಿ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ 'ಗಗನ' ಎಂಬುದು 'ಗಂಗನ'(of Ganga) ಎಂಬುದರ ಮಾರ್ಪಾಟು ಎಂಬುದಕ್ಕೆ ದೂಸರಿದೆ.

ವಿಜಯನಗರದ ಕಾಲದಲ್ಲಿ ಆಗಿನ ಅರಸರು ಆನೆಗುಂದಿ ಅರಸುಮನೆತನಕ್ಕೆ ಸೇರಿದ 'ಗಂಗರಾಜ'ನೆಂಬುವನನ್ನು ಶಿವನಸಮುದ್ರವೆಂಬ ನಡುಗಡ್ಡೆಯನ್ನು ಆಳಲು ಕಳಿಸಿದರು. ಗಂಗರಾಜನು ಇಲ್ಲೇ ಒಂದು ಪಟ್ಟಣವನ್ನು ಕಟ್ಟಿ ಇಲ್ಲೇ ಆಳುತ್ತಿದ್ದನು. ಹಾಗಾಗಿ ಇದಕ್ಕೆ 'ಗಂಗನ ಚುಕ್ಕಿ' ಎಂಬ ಹೆಸರು ಬಂದಿತು.

೧೮೦೦ ರಲ್ಲಿ ಪ್ರಾನ್ಸಿಸ್ ಬುಕನನ್  ಎಂಬ ಸ್ಕಾಟಿಶ್ ಮಾಂಜುಗ ಮದರಾಸು, ಮಯ್ಸೂರು, ಮಲಬಾರ್ ಮತ್ತು ಕೆನರ ಕಡೆಗಳಲ್ಲೆಲ್ಲಾ ಸುತ್ತಾಡಿ 'A Journey from Madras through the Countries of Mysore, Canara and Malabar (1807)' ಎಂಬ ಹೊತ್ತಗೆಯನ್ನು ಬರೆದಿದ್ದಾನೆ. ಅದರಲ್ಲಿ ಹೀಗೆ ಹೇಳಲಾಗಿದೆ:-

Monday, October 24, 2016

ಬಿಡದಿ ಅಲ್ಲ ಬಿರಡಿ

ಬೆಂಗಳೂರಿನಿಂದ ಮಯ್ಸೂರಿಗೆ ಹೋಗುವಾಗ, ಕೆಂಗೇರಿ ಆದ ಮೇಲೆ ಸಿಗುವ ಊರೇ 'ಬಿಡದಿ'. ಮಯ್ಸೂರಿನಿಂದ ಬೆಂಗಳೂರಿಗೆ ಬರುವವರು ಇಲ್ಲಿ 'ಬೀಡು' ಬಿಟ್ಟು ಪಯಣದ ದಣಿವನ್ನು ಆರಿಸಿಕೊಂಡು ಮುಂದೆ ಬೆಂಗಳೂರಿನ ಕಡೆಗೆ ಹೋಗುತ್ತಿದ್ದರು ಎಂಬ ಮಾತಿದೆ. ಹಾಗಾಗಿ ಇದಕ್ಕೆ 'ಬಿಡದಿ' ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.

ಬಿಡದಿ biḍadi lodgings provided for visitors [DED 5393]

ಆದರೆ, ಇದರ ಮೊದಲ ಹೆಸರು ಬಿಡದಿಯಾಗಿರಲಿಲ್ಲ; 'ಬಿರಡೆ'ಯಾಗಿತ್ತು. ೧೮೦೦ ರಲ್ಲಿ ಪ್ರಾನ್ಸಿಸ್ ಬುಕನನ್  ಎಂಬ ಸ್ಕಾಟಿಶ್ ಮಾಂಜುಗ ಮದರಾಸು, ಮಯ್ಸೂರು, ಮಲಬಾರ್ ಮತ್ತು ಕೆನರ ಕಡೆಗಳಲ್ಲೆಲ್ಲಾ ಸುತ್ತಾಡಿ 'A Journey from Madras through the Countries of Mysore, Canara and Malabar (1807)' ಎಂಬ ಹೊತ್ತಗೆಯನ್ನು ಬರೆದಿದ್ದಾನೆ. ಅದರಲ್ಲಿ ಹೀಗೆ ಹೇಳಲಾಗಿದೆ:-

 ೧೩ ಮೇ, ೧೮೦೦:  ನಾನು 'ಬಿರಡೆ'(ಬಿರಡಿ) ಎಂಬ ಊರಿಗೆ ಹೋದೆ. ಬಿರಡೆ ಎಂಬ ಮರದ ಹೆಸರಿಂದನೇ ಈ ಊರಿಗೆ 'ಬಿರಡೆ' ಎಂಬ ಹೆಸರು ಬಂದಿದೆ.  ಅದನ್ನು Pterocarpus Sissoo ಎಂಬ ಗಿಡದರಿಮೆಯ ಹೆಸರಿನಿಂದ ಗುರುತಿಸಲಾಗಿದೆ. 
ಇದನ್ನೇ ಕನ್ನಡ ಸಾಹಿತ್ಯ ಪರಿಶತ್ತಿನ ನಿಗಂಟಿನಲ್ಲಿ ಹೀಗೆ ಕೊಡಲಾಗಿದೆ. ಬೇವು ತಾಳೆ ಮರಗಳ ಹಾಗೆ ಈ ಮರವೂ ಎತ್ತರಕ್ಕೆ ಬೆಳೆಯುವ ಮರವೆಂದು ಇದರಲ್ಲಿ ವಿವರಸಲಾಗಿದೆ.


ಅಂದರೆ ೧೮೦೦ ರಲ್ಲಿ ಬಿಡದಿಯ ಹೆಸರು ಬಿರಡಿ/ಬಿರಡೆ ಎಂದೇ ಇತ್ತು. ಆಮೇಲೆ, ಹೆಚ್ಚಾಗಿ ಪಯಣಿಗರು ಅಲ್ಲಿ ಬಂದು ಬಿಡಾರ/ಬಿಡದಿ ಹೂಡಲು ಶುರು ಮಾಡಿದ ಮೇಲೆ 'ಬಿರಡಿ' ಎಂಬುದೇ ಮೆಲ್ಲಗೆ 'ಬಿಡದಿ' ಎಂದು ಮಾರ್ಪಾಟಾಗಿರಬಹುದು.

ಬೆಂಗಳೂರಿನ ಸುತ್ತಮುತ್ತ ಮರದ ಹೆಸರಿರುವ ಊರುಗಳು ಕಾಣ ಸಿಗುತ್ತವೆ.
ಎತ್ತುಗೆಗೆ, ಹುಳಿಮಾವು, ಹಲಸೂರು, ಕಗ್ಗಲೀಪುರ

Wednesday, August 10, 2016

ಅಣ್ಣ

ಅಣ್ಣ ಎಂಬ ಪದವನ್ನು ಹಲವು ತೆರದಲ್ಲಿ ಬಳಸುವುದುಂಟು:-
೧. ತನಗಿಂತ ಮೊದಲೇ, ಒಡ ಹುಟ್ಟಿದವನನ್ನು ಕರೆಯಲು 'ಅಣ್ಣ' ಹೆಚ್ಚು ಬಳಕೆಯಲ್ಲಿದೆ. ಅಂದರೆ ಹರೆಯದಲ್ಲಿ ದೊಡ್ಡವನು.  ಅವಳಿ-ಜವಳಿ ಮಕ್ಕಳಲ್ಲೂ ಒಂದೆರಡು ನಿಮಿಶ ಮುಂಚೆ ಹುಟ್ಟಿದವನೇ ಅಣ್ಣನಾಗುತ್ತಾನೆ.
೨. ತನಗಿಂತ ದೊಡ್ಡವರಾದ ಗಂಡಸರಲ್ಲಿ ಹೆಚ್ಚಿನವರನ್ನು 'ಅಣ್ಣ' ಎಂದು ಕರೆಯುವುದುಂಟು. ಅಲ್ಲದೆ ಅವರಿಗೆ ಮದಿಪು ಕೊಟ್ಟು ಮಾತಾಡಿಸುವ ದಾರಿಯೂ ಹವ್ದು.

ಅಣ್ಣ, ಅಣ Ka. aṇṇa, aṇa elder brother; respectful address to an older male, affectionate mode of addressing boys; ಅಣ್ಣಿ aṇṇi affectionate mode of addressing females [DED 131]

ಹಾಗಾದರೆ 'ಅಣ್ಣ' ಎಂಬ ಪದದ ಹಿಂದಿರುವ ಗುಟ್ಟೇನು? ಅಣ್ಣ ಎಂಬುದಕ್ಕೆ ಬೇರೊಂದು ಹುರುಳು ಸಿಗುತ್ತದೆ.
ಅಣ್ಣೆ, ಅಣ್ಣ, ಅಣ Ka. aṇṇe, aṇṇa, aṇa excellence, purity  [DED 110]
ಅಂದರೆ 'ಅಣ್ಣ' ಎಂಬುದು ಮೇಲ್ಮಟ್ಟದ ಒಂದು ಪರಿಚೆಯನ್ನು ತಿಳಿಸುತ್ತದೆ.

ಅಣ್ಣಾಲಿಗೆ (ಅಣ್ಣ+ನಾಲಿಗೆ) aṇṇālige uvula [DED 110]
ಬಾಯಿ ಒಳಗೆ ಮೇಲಿನಿಂದ ಜೋತು ಬಿದ್ದ ನಾಲಿಗೆಗೆ ಅಣ್ಣಾಲಿಗೆ ಎನ್ನುತ್ತಾರೆ. ಇಲ್ಲೂ 'ಮೇಲೆ' ಎಂಬ ಹುರುಳನ್ನು ಇದು ಸೂಚಿಸುತ್ತಿರುವುದನ್ನು ಗಮನಿಸಬಹುದು.

ಇನ್ನು ನಮ್ಮದೇ ಆದ ತುಳುವಿನಲ್ಲಿ ಈ ಕೆಳಕಂಡ ಪದಗಳು ಈ ಹುರುಳನ್ನೇ ತೋರಿಸುತ್ತದೆ.
ಅಣಾವುನಿ, ಅಣ್ಣಾವುನಿ Tu. aṇāvuni, aṇṇāvuni to look up, lift up the face, gaze [DED 110]

ಇದಲ್ಲದೆ ಮಯ್ಸೂರು ಕಡೆ ಆಡುನುಡಿಯಲ್ಲಿರುವ ಬಳಕೆಯಿದೆ
೧. ವಸಿ ಅನ್-ತ್-ಕೊ, ಮುಕ ಸರಿಯಾಗ್ ನೋಡಂವ್ [ಕೊಂಚ ಮೇಲೆ ಮಾಡು, ಮುಕವನ್ನು ಸರಿಯಾಗಿ ನೋಡೋಣ]
೨. ಅನ್-ತ್-ಕೊಂಡ್ ನೋಡು..ಆವಾಗ್ ಕಾಣುತ್ತೆ

'ಅಣ' ಎಂಬ ಪದಕ್ಕೆ 'ತ್' ಎಂಬ ಒಟ್ಟು( ಹಿಂಬೊತ್ತಿನ) ಸೇರಿದ್ದರಿಂದ ಅಲ್ಲಿ ಉಲಿ ಮಾರ್ಪಾಟಾಗಿ 'ಅನ್' (ಅನ್-ತ್) ಎಂದಾಗಿದೆ ಯಾಕಂದರೆ ಮುಂದೆ 'ತ' ಇದ್ದರೆ 'ಣ'ಕಾರ ಉಲಿಯಲು ಬರುವುದಿಲ್ಲ, ಅದು ತಾನಾಗಿಯೇ 'ನ್'ಕಾರವಾಗುತ್ತದೆ.

ಅಣ್ಣನಾದವನು (ಬೆಳೆಯುವಾಗ) ತಮ್ಮನಿಗಿಂತ ಎತ್ತರವಾಗಿರುತ್ತಾನೆ. ಅಣ್ಣನು ಅವನ ತಮ್ಮನಿಗಶ್ಟೆ 'ಅಣ್ಣ', ಯಾಕಂದರೆ ತಮ್ಮನು ಯಾವಾಗಲೂ ಮೇಲೆ (ತಲೆ ಎತ್ತಿ) ನೋಡಬೇಕಾಗುತ್ತದೆ. ಇಲ್ಲೂ 'ಮೇಲೆ' ಎಂಬ ಹುರುಳಿಗೆ ನಂಟಿರುವುದನ್ನು ಗಮನಿಸಬಹುದು. ಬರೀ ಎತ್ತರದಲ್ಲಲ್ಲದೆ ಹಲವು ಬೇರೆ ವಿಶಯಗಳಲ್ಲೂ ಅಣ್ಣನು ತಮ್ಮನಿಗೆ 'ಮೇಲ್ಪಂಕ್ತಿ'ಯನ್ನು ತನಗೆ ಅರಿವಿಲ್ಲದೆಯೇ ಹಾಕಿಕೊಡುತ್ತಾನೆ.

Saturday, April 2, 2016

ಸುಂಟಿ/ಶುಂಟಿ ಪೆಪ್ಪರ‍್ಮೆಂಟ್

ಚಿಕ್ಕವರಿದ್ದಾಗ ಅಯ್ದು ಪಯ್ಸೆಗೆ ಸಿಗುತ್ತಿದ್ದ ಸುಂಟಿ ಪೆಪ್ಪರ‍್ಮೆಂಟನ್ನು ನಾವೆಲ್ಲರೂ ತಿಂದಿರುತ್ತೇವೆ. ಆದರೆ ಅದರಲ್ಲಿ ’ಶುಂಟಿ’(ginger) ಇರುವುದಿಲ್ಲ ಬದಲಾಗಿ ಪುದೀನ(mint) ಇರುತ್ತದೆ. ಆದರೂ ಅದಕ್ಕೆ ಸುಂಟಿ ಪೆಪ್ಪರ‍್ಮೆಂಟ್ ಎಂದು ಹೇಳುವುದು ಏತಕ್ಕೆ? ನೋಡೋಣ

ಯಾವುದೇ ತಿನಿಸನ್ನು ತಿನ್ನುವ ಮೊದಲು ಅದು ನಮ್ಮ ಕಣ್ಣಿಗೆ ಬೀಳುತ್ತದೆ. ಎಶ್ಟೊ ವಸ್ತುಗಳಿಗೆ ಕೊಟ್ಟ ಹೆಸರುಗಳು ಅವುಗಳ ನಮ್ಮ ಕಣ್ಣಿಗೆ ಹೇಗೆ ಕಾಣಿಸುತ್ತವೆ ಎಂಬುದರ ಮೇಲೆ ನಿಂತಿದೆ. ಯಾವುದೇ ತಿಂಡಿ-ತಿನಿಸನ್ನು ತಿನ್ನುವ ಮೊದಲು, ಅದು ಯಾವ ಆಕಾರ ಇಲ್ಲವೆ ಬಣ್ಣ ಇಲ್ಲವೆ ಅದರ ಮತ್ಯಾವುದೋ ಗುಣದ ಮೇಲೆ ನಾವು ವಸ್ತುವನ್ನು ಗುರುತಿಸುತ್ತೇವೆ. ಇಲ್ಲವೆ ಅದರ ಕಂಪಿನಿಂದ ಗುರುತಿಸುತ್ತೇವೆ.

ಹಾಗೆಯೇ, ಸುಂಟಿ ಪೆಪ್ಪರ‍್ಮೆಂಟಿಗೆ ಆ ಹೆಸರು ಬಂದಿರಲು ಅದರ ಆಕಾರವೇ ಮುಕ್ಯ ಕಾರಣ ಎಂದು ಹೇಳಬಹುದು. ಯಾಕಂದರೆ
ಸುರುಟು, ಸುರುಂಟು Ka. suruu, suruṇṭu to coil, roll up [DED - 2684] ಎಂಬ ಹುರುಳುಗಳಿವೆ.

ಸುತ್ತುವ ಇಲ್ಲವೆ ದುಂಡನೆ ಇಲ್ಲವೆ ತಿರುಗಿರುವ ಆಕಾರದ ಕಲ್ಪನೆಗೂ ಸುರುಟು/ಸುರುಂಟು ಎಂಬ ಪದಗಳಿಗೂ ನಂಟಿರುವುದನ್ನು ಗುರುತಿಸಬಹುದು. ಇಲ್ಲಿ ಸುರುಂಟು ಎಂಬುದು ಎಸಕ ಪದವಾಗಿರುವುದರಿಂದ ಸುರುಂಟಿ ಎಂಬ ಪದವು ಅದಕ್ಕೆ ಸಂಬಂದಿಸಿದ ಹೆಸರು ಪದವಾಗುತ್ತದೆ. ಅಂದರೆ ದುಂಡು ಮಾಡುವ ಕೆಲಸಕ್ಕೊ ಇಲ್ಲವೆ ಆ ಕೆಲಸ ಯಾವುದರ ಮೇಲೆ ನಡೆದಿದೆ ಎಂಬುದನ್ನು ಸೂಚಿಸುವುದಕ್ಕೆ ಬಳಸಬಹುದು.
ಎತ್ತುಗೆಗೆ: ’ನಾಟು’ ಎಂಬ ಪದಕ್ಕೆ ’to plant’ ಎಂಬ ಹುರುಳಿದ್ದರೆ ’ನಾಟಿ’ ಎಂಬ ಪದಕ್ಕೆ ಎರಡು ಹುರುಳುಗಳಿವೆ. ಒಂದು ’ನಾಟಿ’ ಮಾಡುವ ಕೆಲಸವಾದರೆ ಇನ್ನೊಂದು ನಾಟಿ ಮಾಡುತ್ತಿರುವ ಸಸಿ ಇಲ್ಲವೆ ಪಯಿರಿಗೂ ಹೊಂದುತ್ತದೆ. ಅದೇ ತೆರನಾಗಿ ’ಸುರುಂಟಿ’ ಎಂಬುದು ದುಂಡಾಗಿರುವ ವಸ್ತುವನ್ನು ಸೂಚಿಸುತ್ತದೆ.

ಇದಲ್ಲದೆ ಕನ್ನಡದಲ್ಲಿ  ಸುಟ್ಟರೆ suṭṭare a whirlwind [DED -2715] ಎಂಬು ಹುರುಳಿದೆ. ಅಂದರೆ ತಿರುಗುತ್ತಾ ತಿರುಗುತ್ತಾ ಬರುತ್ತಿರುವ ಗಾಳಿ. ಇದೇ ಪದದ ಇನ್ನು ಹಲವು ರೂಪಗಳಿವೆ – ಸುಣ್ಟರ, ಸುಣ್ಟ್ರು. ಇದರಲ್ಲೂ ’ಸುರುಂಟು’ ಪದದ ಹಾಗೆ ದುಂಡನೆ ಇಲ್ಲವೆ ತಿರುಗುಗಿರುವ ಇಲ್ಲವೆ ಸುತ್ತುವ ಆಕಾರದ ಕಲ್ಪನೆಯನ್ನು ಗುರುತಿಸಬಹುದು.  ಸುಣ್ಟರ ಎಂಬುದು ಸುರುಂಟಿ ಎಂಬುದರ ಇನ್ನೊಂದು ರೂಪವೆಂದು ಇದರಿಂದ ತಿಳಿಯುತ್ತದೆ. ಈ  ’ಸುಂಟಿ’ ಎಂಬ ಪದ, ಮಯ್ಸೂರಿನಲ್ಲಿ ಇನ್ನೊಂದು ಸಂದರ್ಬದಲ್ಲಿ ಬಳಕೆಯಲ್ಲಿದೆ. ಅದೇ ಒಳಸುಂಟಿ, ಅಂದರೆ ಬೆರಳುಗಳಿಂದ ತೊಡೆಯ ಮೇಲೆ ಗಿಂಡಿ ತಿರುವುವುದು. ’ಸುಂಟಿ’ ಎಂಬುದರ ಹಿಂದೆ ’ತಿರುವು’ವುದರ ಕಲ್ಪನೆಯಿದೆ ಎಂಬುದಕ್ಕ ಇದು ಮತ್ತೊಂದು ನಿಂದರಿಕೆ.

Wednesday, March 9, 2016

ಮಕ್ಕಳು

’ಮಕ್ಕಳಿರಲವ್ವ ಮನೆ ತುಂಬ’ ಎಂಬ ಗಾದೆಯನ್ನು ನಾವು ಕೇಳಿದ್ದೇವೆ. ಈ ಗಾದೆಯ ಹಿಂದೆ ಹಿರೀಕರು ಒಂದು ಗುಟ್ಟನ್ನು ಅಡಗಿಸಿಟ್ಟಿದ್ದಾರೆ. ಅಂದರೆ ಮಕ್ಕಳಿಲ್ಲದೆ ಯಾವುದೇ ಬಳಿ/ವಂಶ ಮುಂದುವರೆಯುವುದಿಲ್ಲ. ಒಟ್ಟಂದದಲ್ಲಿ ಮನುಕುಲದ ಇರುವಿಕೆ ಮತ್ತು ಮುಂದುವರೆಯುವಿಕೆಯ ಕೇಳ್ವಿ ಬಂದಾಗ, ಈ ಗಾದೆ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಮಾರುಲಿಯನ್ನು ಈಯುತ್ತದೆ.
’ಮಕ್ಕಳು’ ಎಂಬ ಪದದ ಹಿನ್ನೆಲೆ ತಿಳಿದ ಮೇಲಂತೂ ಇದು ಇನ್ನು ಹೆಚ್ಚು ಮನವರಿಕೆಯಾಗುತ್ತದೆ. ಅದನ್ನು ಹೀಗೆ ಬಿಡಿಸಬಹುದು:-
ಱು+ಕಳ್ -> ಮರ‍್ಕಳ್ -> ಮಕ್ಕಳ್

ಮಱು Ka. maṟu other, next, following, second; again; opposite [DED 4766]
ಮಕ್ಕಳ್ Ka. makkaḷ, markaḷ, makkaḷir children [DED 4616]

’ಮಕ್ಕಳ್’ ಎಂಬ ಹಳಗನ್ನಡದ ಪದವೇ ಹೊಸಗನ್ನಡದಲ್ಲಿ ’ಮಕ್ಕಳು’ ಎಂದಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವಂತಹುದ್ದೇ.
ಮೇಲೆ ತೋರಿಸಿದಂತೆ ’ಮರು’ ಎಂಬ ಪರಿಚೆಪದವು, ’ಕಳ್’ ಎಂಬ ಹಲವೆಣಿಕೆಯನ್ನು ತೋರುವ ಒಟ್ಟಿನ ಜೊತೆ ಸೇರಿ ’ಮರ್ಕಳ್’ ಎಂಬ ಪದವನ್ನು ಪಡೆಯಲಾಗಿದೆ. ಇದರ ಹುರುಳು ’ಮುಂದಿನ ಗಳು’ ಇಲ್ಲವೆ ’ಮುಂದಿನವು’ ಎಂದಾಗುತ್ತದೆ. ಇದನ್ನು ಇನ್ನು ಬಿಡಿಸಿ ಹೇಳಬೇಕೆಂದರೆ ’ಮುಂದಿನ ತಲೆಮಾರು’ (Next Ones) ಎಂದಾಗುತ್ತದೆ. ಮಕ್ಕಳು ಯಾವಾಗಲು ಹೆತ್ತವರಿಗೆ ಮುಂದಿನ ತಲೆಮಾರೇ ಅಲ್ಲವೆ?  ’ತಲೆಮಾರು’ ಎನ್ನುವ ಕೂಡುಪದದಲ್ಲಿಯೂ ’ಮಾರು’ (next) ಎಂಬ ಹೆಸರುಪದವನ್ನು ಕಾಣಬಹುದು. ಮಾರು ಎಂಬುದು ’ಮುಂದಿನ’ (next) ಎಂಬ ಹುರುಳನ್ನೇ ಹೊಂದಿದೆ.

ಮಾಱು Ka. māṟu state of being other, different or next [DED 4834]

ಕನ್ನಡದಲ್ಲಿ ’ಮರ್ಕಳ್’ ಮತ್ತು ’ಮಕ್ಕಳ್’ ಎಂಬ ಎರಡೂ ಬಳಕೆಗಳನ್ನು ಕಾಣಬಹುದು. ಕನ್ನಡದ ನುಡಿ ಹಿನ್ನಡವಳಿಯಲ್ಲಿ ’ರ್[ಮುಚ್ಚುಲಿ]’ ಎಂಬ ಪದಗಳಲ್ಲಿ ’ರ್’ ಕಾರ ಬಿದ್ದುಹೋಗುವುದನ್ನು ನಾವು ಕಾಣುತ್ತೇವೆ. ಅಲ್ಲದೆ ’ರ್’ ಬಿದ್ದುಹೋಗುವಾಗ ಅದರ ಮುಂದೆ ಬರುವ ಮುಚ್ಚುಲಿಯು ಇಮ್ಮಡಿಯಾಗುವುದನ್ನು ನಾವು ಕಾಣಬಹುದು.

ಸುರ್‍ಕು
ಸುಕ್ಕು
ರ್‍ಕು
ಇಕ್ಕು
ರ್‍ಗಳ
ಅಗ್ಗಳ
ಬೆರ್‍ಚು
ಬೆಚ್ಚು
ರ್‍ಚು
ಮಚ್ಚು
ರ್‍ತಲೆ
ಕತ್ತಲೆ
ರ್‍ದು
ಉದ್ದು
ರ್‍ದು
ಮದ್ದು

ಇನ್ನು ಮಗು(child) ಮತ್ತು ಕಳ್ ಸೇರಿ ಮಗುಕಳ್ -> ಮಕ್ಕಳ್ ಆಗಿರಬಹುದೆಂದು ಮಾತೆತ್ತಬಹುದು. ಆದರೆ ಆಗ ’ಮರ‍್ಕಳ್’ ಪದವನ್ನು ಬಿಡಿಸಲು ಬರುವುದಿಲ್ಲ. ಹಾಗಾಗಿ, ಈಗಾಗಲೆ ತಿಳಿಸರುವ ಬಿಡಿಸುವಿಕೆ ಹೆಚ್ಚು ಒಪ್ಪುತ್ತದೆ ಎಂದು ಹೇಳಬಹುದು.