ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Friday, August 31, 2012

ದೋಸೆ

ದೋಸೆ ಎಂದೊಡನೆ ಬಾಯಲ್ಲಿ ನೀರೂರುವುದರೊಂದಿಗೆ ಕೆಲವು ಗಾದೆಗಳು ನೆನಪಿಗೆ ಬರುತ್ತವೆ.
೧. ಎಲ್ಲರ ಮನೆ ದೋಸೆನೂ ತೂತೆ
೨. ಎಲ್ಲರ್ ಮನೆ ದೋಸೆ ತೂತಾದರೆ ನಮ್ಮನೆ ಕಾವಲಿನೇ ತೂತು.

ಹಾಗಾದರೆ ತೂತಿಗೂ , ದೋಸೆ ನಂಟಿರಬಹುದೆಂದು ಉಂಕಿಸಿದಾಗ ...

ತೂತು
Ka. tūtu, tūntu hole;[DED 3399(b)]
ದೊಗೆ, ಡೊಗೆ Ka. ḍoge, doge to make a hole with the hand [DED 2990]
ಡೊಗರು, ಡೋರು, ದೊಗರು, ದೋರುKa. ḍogaṟu, ḍōṟu, dogaṟu, dōṟu hollow, hole in a wall, in a tree, in the ground [ DED 2990]
ತುರುವು Ka. turi, turuvu to hollow, bore, drill, make a hole [ DED 3339]
ತೋಡುKa. tōḍu dig, excavate a hole [DED 3549]
ತೊಳೆ Ka. toḷe hole, bored hole [ DED 3528]

ಒಟ್ಟಿನಲ್ಲಿ ತು, ತೋ, ದೊ, ದೋ ಎಂಬ ಉಲಿಕಂತೆಗಳಿಂದ ಸುರುವಾಗುವ ಹಲವು ಪದಗಳು ತೂತು, ರಂದ್ರ ಇಲ್ಲವೆ ಹೋಲ್ ಎಂಬ ಹುರುಳನ್ನು ಕೊಡುತ್ತದೆ.
ಇದಲ್ಲದೆ ಕನ್ನಡದಲ್ಲಿ ’ಚೆ’ ಎಂಬ ಒಟ್ಟಿನಿಂದಾದ ಹಲವು ಹೆಸರುಪದಗಳು ಸಿಗುತ್ತವೆ.
ಎತ್ತುಗೆಗೆ: ಅಂಚೆ, ಬೆಂಚೆ( ಸಣ್ಣ ಕೊಳ), ಕಚ್-ಚೆ, ಮಿಡಿಚೆ.

ಇನ್ನು, ’ಸೆ’ ಇಂದ ಕೊನೆಯಾಗುವ ಹಲವು ಹೆಸರು ಪದಗಳಿವೆ
ಎತ್ತುಗೆಗೆ: ಅಗಸೆ, ಬೊಗಸೆ, ವಲಸೆ, ವರಸೆ


ಹಾಗಾಗಿ, ದೋ+ಚೆ = ದೋಚೆ ಇಲ್ಲವೆ ದೋ+ಸೆ = ದೋಸೆ ಎಂದು ಆಗಿರಬಹುದು. ಅಂದರೆ ’ಹಲವು ತೂತುಗಳನ್ನು ಒಳಗೊಂಡ ತಿನಿಸೇ ದೋಸೆ’ ಎಂದು ಹೇಳಲಡ್ಡಿಯಿಲ್ಲ. Ka. dōse a holed, i.e. spongy, cake of rice-flour, uddu, etc., baked on a potsherd or iron plate [DED - 3542]
ಅಲ್ಲದೆ, ಕಿಟ್ಟೆಲ್ ಅವರ ಪದನೆರಕೆಯಲ್ಲಿ ತೂತಪ್ಪಚ್ಚಿ(ತೂತು+ಅಪ್ಪಚ್ಚಿ)= A rice cake with whole ಎಂದು ಕೊಡಲಾಗಿದೆ

Wednesday, August 29, 2012

ಸಲ್ಮೊರೆ

ಮಯ್ಸೂರು, ಮಂಡ್ಯ ಮತ್ತು ಚಾಮರಾಜನಗರದ ಕಡೆ ಪದ ಬಳಕೆಯಲ್ಲಿದೆ. ಹಿಂದಿನಿಂದಲೂ, ಹೆಣ್ಣು ಇಲ್ಲವೆ ಗಂಡು ಮದುವೆಯಾಗುವಾಗ ಈಗಿರುವ ನಂಟಿನ ಒಳಗೆ ಅಂದರೆ ಸೋದರ ಮಾವನನ್ನೊ ಇಲ್ಲವೆ ಸೋದರಮಾವನ/ಸೋದರತ್ತೆ ಮಗನನ್ನೊ ಮದುಯಾಗುವುದುಂಟು. ಇದಕ್ಕೆಸಲ್ಮೊರೆ ಸರಿಯಾಗಿದೆ’ ಅಂತ ಹೇಳ್ತಾರೆ ಅಂದರೆ ಅವರಲ್ಲಿ ಅಣ್ಣ-ತಂಗಿಯ ಸಂಬಂಧವಿಲ್ಲ ಗಂಡ-ಹೆಂಡಿರಾಗಬಹುದು ಅಂತ ಅರ್ಥ. ಆದರೆ ಹೆಣ್ಣಿಗೆ/ಗಂಡಿಗೆ ದೂರದ ನಂಟಿನ ಕಡೆಯುವರ ಜೊತೆ ಮದುವೆಯಾಗುವ ಕುಳ್ಳಿಹ(ಸಂದರ್ಬ) ಒದಗಿ ಬಂದಾಗ ಇದು ಗೋಜಲಾಗುವುದರಿಂದ ಇದನ್ನ ದೊಡ್ಡವರು ಸರಿಯಾಗಿ ಹೊಂದಿಸಿ/ಲೆಕ್ಕಚಾರ ನೋಡಿ ಆಮೇಲೆಸಲ್ಮೊರೆ’ ಸರಿಯಾಗಿದಿಯೊ ಇಲ್ಲವೊ ಅಂತ ಹೇಳ್ತಾರೆ.

ಬಿಡಿಸುವಿಕೆ:
ಸಲ್ಮೊಱೆ = ಸಲ್+ಮೊಱೆ = ಸಲ್ಮೊರೆ

ಸಲ್ಲುವಮೊಱೆ’ಯೇ ಸಲ್ಮೊಱೆ. ಅಂದರೆಸಲ್ಲುವ ನಂಟು’/ಸಲ್ಲುವ ಸಂಬಂದ/ಒಪ್ಪತಕ್ಕ ಸಂಬಂದ ಅಂತ ಹುರುಳು ಬರುತ್ತದೆ.
Ka. sal (sand-) to enter, engage in, associate oneself to, agree to, accrue, arise, enter upon a course, pass, be current, be in use, pass by general consent, be valid, proper or fit, become agreeable [DED 2781 ]
Ka. moṟe a turn, time, (K.2) propriety, virtue; relationship; (Hav.) mare relationship
[DED 5015 ]

ಬಳಕೆಗಳು:-
. ಅವನು ಮೊಱೆಯಲ್ಲಿ ನನಗೆ ಮೊಮ್ಮಗನಾದರೂ ನನಗಿಂತ ಹೆಚ್ಚು ಬುದ್ದಿವಂತ.
. ನಮ್ಮ ಮೊಱೆಯವರಲ್ಲೇ ನಮ್ಮನ್ನು ಕಂಡರೆ ಹೆಚ್ಚು ಹೊಟ್ಟೆಕಿಚ್ಚು.

Tuesday, August 28, 2012

ಗೆದ್ದಲು

ನಾವು ಮರದಿಂದ ಮಾಡಿದ ಇರ್ಕೆ( ವಸ್ತು) ಗಳನ್ನು ಕೊಳ್ಳುವಾಗ ’ಕುಟ್ಟು’ ಹಿಡಿಯುತ್ತದೆಯೆ? ಇಲ್ಲವೆ ಗೆದ್ದಲು ಹತ್ತಿ ಹಾಳಾಗಬಹುದೇ ಎಂದು ಕೇಳಿ ತಿಳಿದುಕೊಂಡು ತೆಗೆದುಕೊಳ್ಳುತೇವೆ. ಹಾಗಾದರೆ ಈ ಮರವನ್ನು(ಮರದಿಂದ ಮಾಡಿದ ಇರ್ಕೆಗಳನ್ನು) ಹಾಳು ಮಾಡುವ ಕೆಲಸದ ಮೇಲೆ ಗೆದ್ದಲಿಗೆ ಆ ಹೆಸರು ಬಂದಿರಬಹುದೇ? ಅಹುದು. ಇಲ್ಲಿ ಕುಟ್ಟು ಅಂದರೆ ಹಾಳಗುವುದು, ಸವೆದು ಹೋಗುವುದು(diminish) ಎಂಬ ಹುರುಳು ಬರುತ್ತದೆ

 ಗೊದ್ದ, ಕೊರಲೆ  Ka. godda a kind of black ant, the bite of which is painful; ? koṟale a kind of ant - [DED 2096 ]
ಕೊರೆ ಎನ್ನುವುದಕ್ಕೆ ಈ ಹುರುಳುಗಳಿವೆ:- Ka. kore bore, excavate -  [DED 1859 ]

ಗೆದ್ದಲು Ka. gedal, gejjalu, geddali, geddalu white ant, flying white ant - [DED 1548 ]
ಕೆರೆ  Ka. kere to shave, scrape, scratch - [DED 1564]

ಹಾಗಾಗಿ,

’ಕೊರೆ’ಯಿಂದ ಕೊರಲೆ-> ಗೊದ್ದ

’ಕೆರೆ’ಯಿಂದ ಕೆರಲೆ -> ಗೆರಲು -> ಗೆರ್ದ್+ಲ್ => ಗೆರ್ದಲ್ => ಗೆದ್ದಲ್ => ಗೆಜ್ಜಲ್ ಇಲ್ಲಿ ಗೆರ್ದಲ್ = ಗೆದ್ದಲ್ ಅಂದರೆ ಕೆರೆದದ್ದು, ಗೆರೆದದ್ದು ಎಂಬ ಹುರುಳಿದೆ

ಕೊಸರು : ಕಿಟ್ಟೆಲ್ ಅವರು ಕೂಡ ’ಗೆದ್ದಲು’ ಎಂಬುದನ್ನು ’ಕೊರಲೆ’ಗೆ ನಂಟಿಸಿದ್ದಾರೆ.

Monday, August 27, 2012

ರಾಗಿ

ರಾಗಿ ಮೊದ್ದೆ ಉಪ್ಪೆಸರಿನ ಸಾರು ಎಂದರೆ ಬಾಯಲ್ಲಿ ನೀರೂರುತ್ತದೆ. ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ಇನ್ನೊಂದು ತರ ಕಿಕ್ ಕೊಡುತ್ತೆ. ರಾಗಿ ಹುರಿಟ್ಟು ಬಾಯನ್ನು ಸಿಹಿ ಮಾಡುತ್ತೆ. ಇನ್ನು 'ರಾಗಿ ಸರಿ' ಚಿಕ್ಕಮಕ್ಕಳಿಗೆ ಬಲು ತಿನ್ನಲು ಚೆನ್ನ. ಹಾಗಾದರೆ ರಾಗಿ ಎನ್ನುವುದು ಹೇಗೆ ಬಂತು. ಅಲ್ಲದೆ ವಿಕಿಪಿಡಿಯಾದಲ್ಲಿ ಕರ್ನಾಟಕವೇ ಹೆಚ್ಚು ರಾಗಿ ಬೆಳೆಯುವ ರಾಜ್ಯ ಎಂದು ಹೇಳಲಾಗಿದೆ. ಅಂದ ಮೇಲೆ ನಮ್ಮ ರಾಗಿಯ ನಂಟು ಆಳದ್ದೆ ಇರಬೇಕು. ಅಂದರೆ ರಾಗಿಗೆ ಕನ್ನಡದ್ದೇ ಆದ ಪದವುಟ್ಟನ್ನು ಹೇಳಬಹುದೆಂದು ನೋಡಿದಾಗ...

ಬಿಡಿಸುವಿಕೆ: 
  ಇರ್+ ಅಕ್ಕಿ = ಇರಕ್ಕಿ ( metathesis ಆದ ಮೇಲೆ) => ರಾಕಿ
  ರಾಕಿ == ಕೊರಲಿಸಿದ ಇಂದ ಕೊರಲಿಸಿದಕ್ಕೆ ಮಾರ್ಪಾಟದ ಮೇಲೆ ==> ರಾಗಿ  ಆಗುತ್ತದೆ.

ಹಾಗಾದರೆ ಮುಂಪದವಾದ 'ಇರ್' ಅಂದರೇನು ಅನ್ನುವುದಕ್ಕೆ ಮುಂಚೆ ಈ ಪದಗಳನ್ನು ನೋಡೋಣ:-
೧. ಇರುಳು (ರಾತ್ರಿ, night which signifies darkness) - DED 2552 
೨. ಇರುಂಪು=ಇರುವೆ=ಎರ=ಎರುಗು (black ant)       - DED   864
೩. ಇರ್ಪಡಿ= ಇಬ್ಬಡಿ ( ಬೀಟೆ, blackwood)               - DED   483
೪. ಇರುಮೆ=ಇರುಮಯ್=ಇರ್ಮೆ=ಎರ್ಮೆ=ಎಮ್ಮೆ( ಕಪ್ಪುತನ blackness=> female buffalo)- DED 816
ಇಲ್ಲಿ ಇರ್ಮೆ ಎಂಬ ಪದ ಪದನೆರಕೆಯಲ್ಲಿ ಸಿಗದಿದ್ದರು ಕನ್ನಡದ ಉಲಿಕೆಯ ಮಟ್ಟಿಗೆ  ಇ<->ಎ ಬದಲಾಗುವುದು ಕಾಣುತ್ತದೆ.  ಎತ್ತುಗೆಗೆ: ಎದಿರ್<->ಇದಿರ್.

ಈಗಾಗಲೆ ನಮಗೆ ಗೊತ್ತಿರುವ ಹಾಗೆ ಸಾಮಾನ್ಯವಾಗಿ ಅಕ್ಕಿ ಬೆಳ್ಳಗೆ/ಬಿಳಿಯಾಗಿ ಇರುತ್ತದೆ. ಕೆಲವು ಬಗೆಯ ಅಕ್ಕಿ ಕೆಂಪಗೆ ಇದ್ದರೆ ಅದನ್ನ 'ಕೆಂಪಕ್ಕಿ' ಅನ್ನುತ್ತಾರೆ. ಬರೀ ಅಕ್ಕಿ ಅನ್ನುವುದಿಲ್ಲ. ಬಿಳಿ ಬಣ್ಣವನ್ನು ತಿಳಿಬಣ್ಣ(light colour) ಎಂದು ಬಗೆಯಲಾಗುತ್ತೆ. ಅದಕ್ಕೆ ಇದಿರಾಗಿ ಹೇಳಬೇಕಾದಾಗ ಅಂದರೆ ಕಡುಬಣ್ಣ(dark colour) ಎಂದು ಬಳಸಲಾಗುತ್ತದೆ. ಮೇಲೆ ತಿಳಿಸಿದಂತೆ dark/black/ಕಪ್ಪು ಎನ್ನುವುದಕ್ಕೆ 'ಇರ್' ಎಂಬ ಪದ ಬಳಕೆಯಲ್ಲಿದೆ. ಹಾಗಾಗಿ ರಾಗಿ ಎನ್ನುವುದಕ್ಕೆ ಕಪ್ಪಕ್ಕಿ/ಇರಕ್ಕಿ/dark rice ಎಂಬ ಹುರುಳಿದೆ ಎಂದು ಹೇಳಬಹುದು.

ಕೊಸರು : 'ಮೆಟತೀಸಿಸ್' ಎಂದರೆ ಪದಗಳಲ್ಲಿನ ಬರಿಗೆಗಳು/ಉಲಿಕಂತೆಗಳು ತಮ್ಮ ತಾವನ್ನು/ಜಾಗವನ್ನು ಹುರುಳಿನ ವೆತ್ಯಾಸವಾಗದೆ ಬದಲಾಯಿಸುತ್ತವೆ. ಹಾಗೆ ಬದಲಾದಾಗ ಉಲಿಕಂತೆಗಳಲ್ಲಿ ಮಾರ್ಪಾಡಾಗುತ್ತದೆ.
ಎತ್ತುಗೆಗೆ,
      ಇರುಳು(ಕನ್ನಡ) => ರೇಯಿ (ತೆಲುಗು) = night

Saturday, August 25, 2012

ಅಡಿಕೆ

ಬಾರತದಲ್ಲೆ ಅಡಿಕೆ ಹೆಚ್ಚು ಬೆಳೆಯುವುದು ನಮ್ಮ ಶಿವಮೊಗ್ಗ ಜೆಲ್ಲೆಯಲ್ಲಿ. ಅಂದರೆ ಅಡಿಕೆ ಎಂಬುದು ಕನ್ನಡ ನಡವಳಿಯಲ್ಲಿ ಹಾಸುಹೊಕ್ಕಾಗಿದೆ. ಇಶ್ಟು ನಮ್ಮ ನಡವಳಿಯಲ್ಲಿ ಬೆಸೆದುಕೊಂಡಿರುವ ಅಡಿಕೆಗೆ ಹೇಗೆ ಆ ಹೆಸರು ಬಂತು ಎಂಬುದನ್ನು ನೋಡೋಣ.

ಬಳಕೆಗಳು:-
೧. ಅಡಿಕೆಗೆ ಹೋದ ಮಾನೆ ಆನೆ ಕೊಟ್ಟರು ಬಾರದು
೨. ಅಡಿಕೆ ಉಡಿಯಲ್ಲಿ ಹಾಕ ಬಹುದು, ಮರವಾದ ಮೇಲೆ ಕೂಡದು
೩. ಮೊದಲು ಎಲ್ಲರ ಬಳಿಯೂ ಇರುತ್ತಿದ್ದ ಎಲೆ ಅಡಿಕೆ ಚೀಲ ನಿದಾನವಾಗಿ ಕಣ್ಮರೆಯಾಗುತ್ತಿದೆ
೪. ರಾಜ್ಯದ ಅಡಿಕೆ ಬೆಳೆಗಾರರು ಈಗ ಪ್ರತಿಬಟನೆಯ ಹಾದಿ ಹಿಡಿದಿದ್ದಾರೆ

ಬಿಡಿಸುವಿಕೆ:-
ಅಡಗು+ಕಾಯ್ = ಅಡಕ್ಕಾಯ್ = ಅಡಕೆ

ಅಡಕೆ ಎಂಬುದಕ್ಕೆ ಈ ಹುರುಳುಗಳನ್ನು ಕೊಡಲಾಗಿದೆ. Ka. aḍake, aḍa, aḍike areca, areca palm, Areca catechu Lin., and its nut; aḍakottu, aḍagatti, aḍagartti scissors for cutting areca-nut.

ಅಡಗು ಎಂಬುದಕ್ಕೆ ಅವಿತುಕೊಳ್ಳು, ಮರೆಯಾಗಿರುವುದು ಎಂಬ ಹುರುಳುಗಳಿವೆ. Ka. aḍaṅgu, aḍagu to hide, be concealed, disappear, be contained in [DED63]
ಕಾಯ್ ಎಂಬುದಕ್ಕೆ ಹಣ್ಣಾಗದಿರುವುದು ಎಂಬ ಹುರುಳಿದೆ. Ka. kāy (kāyt-, kāt-) fruit to grow or develop; kāy, kāya, kāyi, kāyu fruit in a yet unripe, but pretty full-grown state, nut, pod [DED1459]

ಹಾಗಾದರೆ ಅಡಗಿರುವ ಕಾಯಿಯೇ ಅಡಗುಕಾಯಿ=ಅಡಕ್ಕಾಯಿ => ಅಡಕೆ=> ಅಡಿಕೆ=> ಅಡ್ಕೆ ಎಂದು ಹೇಳಬಹುದು. ಅಡಿಕೆಯ ಹೊರ ಕರಟವನ್ನು ತಿನ್ನಲಾಗುವುದಿಲ್ಲ. ಯಾವುದೇ ತಿನಿಸುಗಳಲ್ಲಿ ಅದನ್ನು ಬಳಸುವುದಿಲ್ಲ. ಅಂದರೆ ಒಳಗೆ ಅಡಗಿರುವ ಕಾಯಿಯೇ ದಿಟವಾದ ಬಳಕೆಗೆ ಬರುವ ವಸ್ತು. ಹಾಗಾಗಿ ಇದಕ್ಕೆ ಅಡಕೆ ಎಂಬ ಹೆಸರು ಬಂದಿದೆ. ಹೀಗೆ ಈ ಪದ ಬಂದಿರುವುದು ಒಂದು ತೆರಹು(chance) ಅಶ್ಟೆ.

ಇದಲ್ಲದೆ, ಅಡರ್ ಎಂಬ ಪದಕ್ಕೆ ಹಲವು ಹುರುಳುಗಳನ್ನು ಕಿಟ್ಟೆಲ್ಲರು ಕೊಟ್ಟಿದ್ದಾರೆ.
೧. to climb, to ascend, to mount, to rise.
೨. appear in numbers, to amass [ಪುಟ ೩೨, A Kannada-English Dictionary, Rev F. Kittel, Basel Mission Books, Mangalore, 1894]

ಎಲ್ಲರಿಗೂ ಗೊತ್ತಿರುವ ಹಾಗೆ ಅಡಿಕೆ ಮರಗಳು ಅಡ್ಡಡ್ಡ ಬೆಳೆಯದೆ ಉದ್ದುದ್ದ ಎತ್ತರೆತ್ತರಕ್ಕೆ ಬೆಳೆಯುತ್ತವೆ. ಹಾಗಾಗಿ ಇವನ್ನು ಒತ್ತೊತ್ತಾಗಿ ಬೆಳೆಸಲಾಗುತ್ತದೆ. ಹಾಗಾಗಿ ಅಡಿಕೆ ತೋಟದಲ್ಲಿ ಹಲವು ಮರಗಳು ಒಮ್ಮೆಗೆ ಕಾಣಸಿಗುತ್ತವೆ. ಮೇಲಿನ ಎರಡು ಹುರುಳುಗಳಾದ ’ಏರು’ ಮತ್ತು " ಹಲವು ಎಣಿಕೆಗಳಲ್ಲಿ ಕಾಣಸಿಗು’ ಎಂಬುದರಿಂದ ಕೂಡ ಅಡಕೆ ಎಂಬುದು ಬಂದಿರಬಹುದು. ಮೇಲ ಮೇಲಕ್ಕೆ ಏರುವ ಮರ ಇಲ್ಲವೆ ಒತ್ತೊತ್ತಾಗಿ ಎಣಿಕೆಯಲ್ಲಿ ಹೆಚ್ಚು ಕಾಣಸಿಗುವ ಮರ ಎಂಬ ಹುರುಳನ್ನು ಇದು ಹೊಂದಿದೆ.

ಅಡರ್ +ಕೆ = ಅಡರ್ಕೆ => ಅಡಕ್ಕೆ => ಅಡಕೆ => ಅಡಕೆ [ಇಲ್ಲಿ ’ಕೆ’ ಎಂಬ ಒಟ್ಟನ್ನು ಅಡರ್ ಎಂಬ ಎಸಕಪದಕ್ಕೆ ಸೇರಿಸಿ ಹೆಸರುಪದವನ್ನಾಗಿ ಮಾಡಲಾಗಿದೆ]

Thursday, August 23, 2012

ಮದುವೆ

ಯಾರದೇ ಬಾಳಿನಲ್ಲಿಯೇ ಆದರೂ ಹೊಸದೊಂದು ನಂಟನ್ನು ಬೆಸೆಯುವ ಒಂದು ಗಟ್ಟವೇ ಇದರಿಂದ ಸುರುವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ’ಮದುವೆ’ ಎನ್ನುವ ಪದದಲ್ಲಿ ಈ ’ಬೆಸೆಯುವ’/ಕೂಡುವ ಹುರುಳನ್ನು ಹುದುಗಿಸಿಟ್ಟರಬೇಕೆನೋ ನೋಡೋಣ.

ಬಳಕೆಗಳು:-
೧. ಮದುವೆಯ ದಿಬ್ಬಣ ಹೊರಟಿತು
೨. ಮದುವೆಮನೆ ಇನ್ನು ದೂರ ಇದೆ
೩. ಮದವಣಿಗ ಬರುವ ಹೊತ್ತಾಯಿತು.
೪. ಮದವಣಿಗಿತ್ತಿಯ ಬಿನ್ನಾಣ ನೋಡಿ
೫. ಮದುವೆಗೆ ಒಂದು ಒಳ್ಳೆ ಮುಹೂರ್ತ ನೋಡಿ

ಬಿಡಿಸುವಿಕೆ:-
ಬೇರಿನ ಪದವೇ ಮದ ಎಂದಿದೆ ..ಇದರಿಂದ ಮದಲ್ ಮದಿವೆ, ಮದುವೆ, ಮದವಣಿಗೆ, ಮದವಣಿಗಿತ್ತಿ, ಮದವನ(ಮಯ್ದುನ- ಗಂಡನ ತಮ್ಮ, ಹೆಂಡತಿಯ ತಮ್ಮ) ಈ ಪದಗಳು ಮೂಡಿ ಬಂದಿವೆ.
Ka. mada joining, wedding, marriage; madal, madive, maduve wedding, marriage; madaliga, madavaṇiga bridegroom; madaligitti, madavaṇigitti, madavaḷige, (K.2) madevaḷ bride; madavana man connected by marriage, husband [DED 4694]

ಕಿಟ್ಟೆಲರವರು ’ಮದ’ ಎಂಬ ಪದವೇ ’ಮಡು’ ಎಂಬುದರಿಂದ ಬಂದಿರಬಹುದೆಂಬ ಸುಳುಹು ಕೊಟ್ಟಿದ್ದಾರೆ. Ka. maḍu to put firmly together, join closely [DED 4681]

ಮಡು ಎಂಬ ಪದಕ್ಕೆ ಕಿಟ್ಟೆಲ್ಲರು ಈ ರೀತಿ ಇಂಗ್ಲಿಶಿನಲ್ಲಿ ಹುರುಳನ್ನು ಕೊಟ್ಟಿದ್ದಾರೆ.

ಪೊಡ+ಮಡು=ಪೊಡಮಡು=ಪೊಡವಡು ( ಕಯ್ಗಳನ್ನು ಜೋಡಿಸಿ ಬೊಗಸೆಯ ತರ ಮಾಡಿಕೊಂಡು ಆಮೇಲೆ ಅದನ್ನು ಹಣೆಯವರೆಗೂ ಎತ್ತಿ ಗೌರವ ತೋರಿಸುವುದು)=ತುೞಿಲ್= ಎಱಗು= ಮಣಿ= ನಮಸ್ಕಾರ

ಇದನ್ನು ಬೇಂದ್ರೆಯವರು ಕೂಡ ತಮ್ಮ ’ಗಂಗಾವತರಣ’ ಎಂಬ ಪದ್ಯದಲ್ಲಿ ಹೀಗೆ ಬಳಸಿದ್ದಾರೆ

       ಇಳಿದು ಬಾ ತಾಯಿ ಇಳಿದು ಬಾ

       ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
       ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ
      ಇಳಿದು ಬಾ ತಾಯಿ ಇಳಿದು ಬಾ

      ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ

ಒಟ್ಟಿನಲ್ಲಿ ’ಮದುವೆ’ಗೂ ’ನಮಸ್ಕಾರ’ಕ್ಕೂ ನಂಟಿದೆ ಎಂದು ತೋರುತ್ತದೆ. ಹಾಗಾಗಿ ಹಿರಿಯರು ಹೇಳುವ ಮಾತು ’ಎರಡು ಕಯ್ ಒಂದಾದ ಹಾಗೆ ಎರಡು ಜೀವಗಳು ಒಂದಾಗಬೇಕು’ ಅಂದರೆ ’ಮದುವೆ’ ಆಗಬೇಕು ಎಂಬುದು ಎಶ್ಟು ಹುರುಳಿರುವ ನುಡಿ ಎಂಬುದು ಇದರಿಂದ ತಿಳಿಯುತ್ತದೆ.

ನೆತ್ತರು

  ಮನುಶ್ಯನ ಬದುಕಿರುವುದಕ್ಕೆ ಮುಕ್ಯವಾಗಿ ಬೇಕಾಗಿರುವುದೇ ಇದು. ಇದರಂದನೇ ಮಯ್ಯಲ್ಲಿರುವ ಹಲವು ಸೀರುಸಿರಿಗಳಿಗೆ(cells) ಹುಳಿವುಟ್ಟುಕ(oxygen) ದೊರೆಯುತ್ತದೆ.

 ಬಳಕೆಗಳು:-
 ೧. ರಕ್ತ ಕುಡಿಯುವ ಬಾವಲಿಗಳದ್ದೂ ಒಂದು ಜಾತಿ ಇದೆ. ‘ನೆತ್ತರು ಬಾವಲಿ’ಗಳೆಂದು ಅವುಗಳ ಹೆಸರು
 ೨. ಹೆಪ್ಪುಗಟ್ಟಿದ ನೆತ್ತರು

ಬಿಡಿಸುವಿಕೆ:
ನೆಯ್ತ್+ತೋರ್(=ಸೋರ್)

ರಕ್ತವು ನೋದುವುದಕ್ಕೆ/ಮುಟ್ಟಿದರೆ 'ಎಣ್ಣೆ'ಯಂತೆಯೂ ಇಲ್ಲ 'ನೀರು'ನಂತಯೂ ಇರುವುದಿಲ್ಲ. ಈಗ ಎರಡು ಪದಗಳಾದ ನೆಯ್ ಮತ್ತು ಸೋರ್ ಎಂಬುದರ ಹುರುಳುಗಳನ್ನು ನೋಡೋಣ
ನೆಯ್ ಅಂದರೆ ತುಪ್ಪ, ಬೆಣ್ಣೆ, ಎಣ್ಣೆ ಎಂಬ ಹುರುಳುಗಳಿವೆ ( ಬೆಣ್ಣೆಯಲ್ಲಿ, ಎಣ್ಣೆಯಲ್ಲಿ ನೆಯ್ ಎಂಬ ಪದವಿದೆ)
ಇದಲ್ಲದೆ ನೆಯ್ತ್ ಎಂಬುದಕ್ಕೆ greasy ಎಂಬ ಹುರುಳು ಕನ್ನಡ ತಮಿಳು ಎರಡರಲ್ಲೂ ಇದೆ.
Ka. Ta. ney butter, ghee, oil, grease, fat, honey; (-pp-, -tt-) to be glossy, polished, be fat, plump, become greasy, unctuous, or sticky [DED 3746]

ಇನ್ನು 'ಸೋರ್' ಎಂಬುದಕ್ಕೆ 'ಹನಿ ಹನಿಯಾಗಿ ಸುರಿ' ಎಂಬ ಹುರುಳುಗಳಿವೆ. Ka. sōr to drop, drip, trickle, ooze, flow as coconut water, water-drops, juice of fruit, etc., come forth as entrails; n. leaking, dropping, etc[DED 2883]

ಹಾಗಾಗಿ ನೆತ್ತರ್ (< ನೆಯ್ತ್+ಸೋರ್) ಎಂಬುದಕ್ಕೆ ಸೋರುವ ಎಣ್ಣೆ, ಚೊಟ್ಟಿಕ್ಕುವ ಎಣ್ಣೆ ('leaking oil'/oil which drops or oozes) ಎಂಬ ಹುರುಳುಗಳು ಅದಕ್ಕೆ ಬಂದೊದಗಿದೆ.  ನೆತ್ತರನ್ನು ಒಂದು ತರದ ಎಣ್ಣೆ ಅಂದರೆ ಈ ಸೋರುವ ಪರಿಚೆ(ಗುಣ) ಹೊಂದಿರುವ ಎಣ್ಣೆ ಎಂದು ಗುರುತಿಸಿ/ಗಮನಿಸಿ ಈ ಪದವನ್ನು ಉಂಟು ಮಾಡಲಾಗಿದೆ ಎಂದು ಎನಿಸುತ್ತದೆ.

Wednesday, August 22, 2012

ಕಡಲು

’ದೀಪವು ನಿನ್ನದೆ .ಗಾಳಿಯು ನಿನ್ನದೆ...ಕಡಲು ನಿನ್ನದೆ, ಹಡಗು ನಿನ್ನದೆ’ ಈ ಹಾಡನ್ನು ಕೇಳದವರುಂಟೆ. ಕನ್ನಡ ನಾಡಿನ ಪಡುಕರಾವಳಿಗೆ ಬರೀ ಕಡಲೇ ಕಡಲು.

ಹಲವು ನಲ್ಸಾಲುಗಳಲ್ಲಿ ಕಡಲನ್ನು ಬಳಸಲಾಗಿದೆ. ಹಾಗಾದರೆ ಕಡಲಿಗೆ ’ಕಡಲು’ ಎನ್ನಲು ಕಾರಣವೇನು?

ಕನ್ನಡದಲ್ಲಿ ’ಕಡೆ’ ಎಂಬ ಪದಕ್ಕೆ ಈ ಹುರುಳುಗಳಿವೆ - Ka. kaḍe, kaḍi to churn, stir [DED1141]. ಕಡಲು(=sea) ಎಂಬುದು ಎಡೆಬಿಡದೆ ನೀರನ್ನು ಕಡೆಯಲಾಗುವ ತಾವು. ಇದಕ್ಕೆ ಹಲವು ಕಾರಣಗಳಿರಬಹುದು, ಅದು ಗಾಳಿಯೊ, ಬೂಮಿಯ ಒಳಗಿನ ಕದಲುವಿಕೆಯೊ...ಮುಂತಾದವು. ಈ ಕಡೆತದಿಂದ ಎಡೆಬಿಡದೆ ಅಲೆಗಳು ಏಳುತ್ತಿರುತ್ತವೆ. ಅಂದಮೇಲೆ ’ಕಡಲು’ ಮತ್ತು ’ಕಡೆ’ ಎಂಬ ಪದಗಳಿಗೆ ನಂಟಿರಬಹುದಲ್ಲವೆ? ಕಡಲು ’ಕಡೆ’ ಯಿಂದ ಹೀಗೆ ಬಂದಿರಬಹುದು.

ಕಡೆ+ಇಲು = ಕಡಿಲು=> ಕಡಲು (ಕಡೆದದ್ದು, ಕಡೆಯಲಾಗುತ್ತಿರುವುದು ಯಾವುದೊ ಅದೇ ಕಡಲು) => ಕಡ್ಲು Ka. kaḍal sea [DED 1118]
ಕನ್ನಡದಲ್ಲಿ ಹಲವು ಕಡೆ ಮೂರು ಬರಿಗೆಗಳ ಪದದಲ್ಲಿ ಎರಡನೇ ಉಲಿಕಂತೆಯ/ಬರಿಗೆಯಲ್ಲಿರುವ ತೆರೆಯುಲಿ(ಸ್ವರ) ನಿಕ್ಕಿಯಾಗಿರುವುದಿಲ್ಲ. ಅದು ಹಲವು ಕಡೆ ಹಲವು ತೆರೆಯುಲಿಯ ರೂಪ ತಾಳುತ್ತದೆ. ಹಲವು ಆಡುನುಡಿಗಳಲ್ಲಿ ಈ ತೆರೆಯುಲಿಯೇ ಬಿದ್ದು ಹೋಗುತ್ತದೆ. ಎತ್ತುಗೆಗೆ

೧. ಬಾಗಿಲು = ಬಾಗಲು=ಬಾಗ್ಲು ೨. ಮೆಟ್ಟಿಲು =ಮೆಟ್ಟಲು=ಮೆಟ್ಲು

ಚೊಚ್ಚಲು

   ಇದರಲ್ಲಿ ಎರಡು ತರದ ಬಳಕೆಗಳಿವೆ. ಒಂದು 'ಮೊದಲ ಬಸುರ್ತನ'ವನ್ನು ಸೂಚಿಸುವುದು. ಇನ್ನೊಂದು 'ಮೊದಲು' ಎಂಬ ಹುರುಳಶ್ಟನ್ನೇ ಕೊಡವುದು
ಬಳಕೆ:
  ೧. ಹೆರಿಗೆಗೆ ಬಂದಿದ್ದ ಐವರು ಚೊಚ್ಚಲು  ಹೆಂಗಸರಿಗೆ ಸೂಕ್ತ ಸೌಲಭ್ಯವಿಲ್ಲ ಎಂದು ಹೇಳಿದರು.
    ೨. ತಮ್ಮ ಚೊಚ್ಚಲು ಚಿತ್ರವನ್ನು ನಿರ್ದೇಶನ ಮಾಡಿರುವ  ಮಧುಚಂದ್ರ..
  
ಬಿಡಿಸುವಿಕೆ:
   ಚೊಚ್ + ಚೂಲ್  = ಚೊಚ್ಚೂಲ್ = ಚೊಚ್ಚಲ್= ಚೊಚ್ಚಿಲ್ = ಚೊಚ್ಲು

ಚೊಚ್ ಎಂಬುದಕ್ಕೆ 'ಮೊದಲು' ಎಂಬ ಹುರುಳಿದೆ. ತಮಿಳಿನ ತೊಲ್ (=ಹಳೆಯ) ಎಂಬ ಪದಕ್ಕೆ ನಂಟಿರುವ ಪದ ಇದು.  ಮೊದಲು ಮತ್ತು ಹಳೆಯ ಎಂಬ ಪದಗಳಿಗೆ ನಂಟಿದೆ. ನಮ್ಮ ಮೊದಲಿಗರು(ಹಿಂದಿನವರು) ನಮ್ಮ ಹಳಬರು/ಮೂಲ ನಿವಾಸಿಗಳು ಆಗುತ್ತಾರೆ.

Ka. coc-, in: coccal first  Ta. tol old, ancient[3516]

ಚೂಲ್ (ಸೂಲ್) ಎಂಬುದಕ್ಕೆ 'ಬಸುರಿಯಾಗು', ಬಸುರ್ತನ ಎಂಬ ಹುರುಳುಗಳಿವೆ.

Ka. cūl, sūl to become pregnant; n. conception, pregnancy, egg, wateriness of clouds[2733]

ಹಾಗಾಗಿ ಚ್ಚೊಚ್ಚಲು ಎಂಬುದಕ್ಕೆ 'ಮೊದಲ ಬಸುರ್ತನ' ಎಂದಾಗಿದೆ. ಆದರೂ ಬಸುರ್ತನಕ್ಕೆ ನಂಟಿರದ ಕುಳ್ಳಿಹ(ಸಂದರ್ಬ)ಗಳಲ್ಲು 'ಚೊಚ್ಚಲು' ಬಳಸುವುದುಂಟು. ಇದು ಹೀಗಿರಬಹುದು
ಚೊಚ್ಚ್+ಇಲು = ಚೊಚ್ಚಿಲು= ಚೊಚ್ಚಲು , ಇದು ಮೊದಲನೆಯದ್ದು ಎಂಬ ಅರ್ತವನ್ನಶ್ಟೇ ಕೊಡುತ್ತದೆ.
ಇದೇ ತರ ಮೆಟ್ಟ್+ ಇಲು= ಮೆಟ್ಟಿಲು
ಇಲ್ಲಿ 'ಇಲ್' ಎಂಬು ಒಂದು ಒಟ್ಟು. ಎತ್ತುಗೆಗೆ: ಮೆಟ್ಟಿಲು=ಮೆಟ್ಟಿದ್ದು=ಮೆಟ್ಟಿದ ತಾವು

Tuesday, August 21, 2012

ಅರಸ


ಅರಸ ಎಂಬ ಪದ ಹಿನ್ನಡವಳಿ ಓದಿದವರಿಗೆ ಪರಿಚಯವಿರುವೇ ಪದವೇ. ಅದರ ಬಳಕೆಗಳು ಹೀಗಿವೆ
೧. ಈ ಗುಡಿಯನ್ನು ಅರಸರ ಆಳ್ವಿಕೆಯಲ್ಲಿ ಕಟ್ಟಲಾಯಿತು
೨. ಆಳಾಗಿ ದುಡಿ. ಅರಸನಂತೆ ಉಣ್ಣು ( ನಾಣ್ಣುಡಿ)
೩. ಮಯ್ಸೂರಿನ ಒಡೆಯರದೇ ಕನ್ನಡದ ಕೊನೆಯ ಅರಸು ಮನೆತನ. .
ಅರಸ ಎಂಬ ಪದಕ್ಕೆ ’ರಾಜ’, ದೊರೆ , ಒಡೆಯ ಎಂಬ ಹುರುಳುಗಳಿವೆ. Ka. arasa (in cpds. ara-), arasu king, lord [DED 201]
ಕನ್ನಡದಲ್ಲಿ ’ಚ’ ಎಂಬ ಒಟ್ಟನ್ನು ಬಳಸಿ ಗಂಗುರುತು( ಪುಲ್ಲಿಂಗ) ಪದಗಳನ್ನು ಮಾಡಬಹುದು...ಎತ್ತುಗೆಗೆ
ಬಲ +ಚ = ಬಲಚ
ಎಡ +ಚ = ಎಡಚ
ಕೋ+ಚ = ಕ್ವಾಚ ( ವಕ್ರಬುದ್ದಿಯುಳ್ಳವನು)
ಕೆಂ+ಚ = ಕೆಂಚ
ಈಗ ’ಅರ’ ಎಂಬ ಪದಕ್ಕೆ ಕನ್ನಡದಲ್ಲಿ ನೀತಿ, ದರ್ಮ, ದಾನ, ಕಟ್ಟಲೆ ಎಂಬ ಹುರುಳುಗಳಿವೆ. Ka. aṟa, aṟu virtue, charity, alms, law, dharma [DED 311]
ಇದಕ್ಕೆ ’ಚ’ ಎಂಬ ಒಟ್ಟನ್ನು ಸೇರಿಸಿದರೆ ಅರ+ಚ => ಅರಚ ಆಗುತ್ತದೆ.
ಆದರೆ ಕನ್ನಡದ ಉಲಿಕೆಯಲ್ಲಿ ’ಚ’ ಮತ್ತು ’ಸ’ ಉಲಿಪುಗಳನ್ನು ಒಂದಕ್ಕೊಂದರ ಬದಲಾಗಿ ಹುರುಳು ಕೆಡದೆ ಬಳಸಬಹುದು ಎತ್ತುಗೆಗೆ: ಚಂದ(=ಸಂದ), ಚಳಿ(=ಸಳಿ),
ಹಾಗಾಗಿ, ಅರಚ => ಅರಸ
ಒಬ್ಬ ಒಳ್ಳೆಯ ರಾಜನಾದವನು ನೀತಿವಂತ, ದರ್ಮಪರ, ದಾನಿಯಾಗಿರುವುದಲ್ಲದೆ ನಾಡಿನ ಒಳಿತಿಗಾಗಿ ಕಟ್ಟಲೆಗಳನ್ನು ಮಾಡಬೇಕಾಗುತ್ತದೆ. ಹಾಗಾಗಿ ’ಅರಸ’ ಎಂಬ ಪದ ಈ ಎಲ್ಲ ಹುರುಳುಗಳನ್ನು ಒಳಗೊಂಡಿದೆ.

Monday, August 20, 2012

ಬೆನ್ನು

  ಬೆನ್ನು ಎಂಬ ಪದ ನಾವು ದಿನಾಲು ಬಳಸುವ ಪದವಾದರೂ ಅದರ ಒಳಹೊಕ್ಕಿ ಅದರ ಹಿನ್ನೆಲೆ ಏನು ಅಂತ ನಾವು ನೋಡಿರುವುದಿಲ್ಲ.
ಬಳಕೆ:
      ೧. ಬೆನ್ನು ತುಂಬ ನೋಯುತ್ತಿದೆ
      ೨. ಅವರು ಬೆನ್ನು ಮೂಳೆ ಮುರಿದು ಹೋಗುವ ಹಾಗೆ ಹೊಡೆದರು
      ೩.  ಬೆನ್ನುಹುರಿ ಸಮಸ್ಯೆ ಇವರ ಮತ್ತು ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡಿದೆ
ಬೆನ್ನು ಅಂದರೆ ದಿಟವಾಗಲು ಮಯ್ಯಿನ ಹಿಂಬಾಗ. ಈ 'ಹಿಂ' ಇಂದಾನೆ 'ಬೆನ್ನು' ಎಂಬ ಪದ ಬಂದಿರುವುದು.
ಪಿನ್ ಪೆರ ಎಂಬ ಪದಬೇರುಗಳಿಗೆ ಈ ಹುರುಳುಗಳಿವೆ.

Ka. pin, pim, him state of being behind,  peṟa hind part, backwards [DED 4205]

ಇಲ್ಲಿರುವ ಪಿನ್ ಮತ್ತು ಪೆರ ಎಂಬ ಪದಗಳನ್ನು ಗಮನಿಸಿದರೆ ಪ್+ಇ ಮತ್ತು ಪ್+ಎ ಎಂಬ ಎರಡು ಉಲಿಕಂತೆಗಳನ್ನು ಒಂದಕ್ಕೊಂದರ ಬದಲಾಗಿ ಬಳಸಿದರೂ ಹುರುಳಿನಲ್ಲಿ ಅಂತ ವೆತ್ಯಾಸವೇನಾಗಿಲ್ಲ ಎಂಬುದು ತಿಳಿಯುತ್ತದೆ.
ಹಾಗಾಗಿ,
   ಪೆನ್(ಹಳೆಗನ್ನಡದ ಪದ) ---ಕೊರಲಿಸದ ಉಲಿ ಕೊರಲಿಸಿದ ಉಲಿಗೆ ಮಾರ್ಪಾದಾಗ--- ಬೆನ್ ಎಂದಾಗುತ್ತದೆ.
Ka. ben, bennu, bem the back [DED 5488]

ಹೊಸಗನ್ನಡದ ಬರಹಗಳಲ್ಲಿ ಬೆನ್ ಎಂಬುದು 'ಬೆನ್ನು' ಎಂದಾಗಿದೆ.

ಕೊಸರು:-
ಕೊರಲಿಸದ ಉಲಿಗಳು: ಕ, ಚ, ಟ, ತ, ಪ
ಕೊರಲಿಸಿದ ಉಲಿಗಳು: ಗ, ಜ, ಡ, ದ, ಬ

ಪೊಂಗಲು


ಸಂಕ್ರಾಂತಿ  ಅಂದರೆ ಪೊಂಗಲು, ಪೊಂಗಲು ಅಂದ್ರೆ ಸಂಕ್ರಾಂತಿ. ಕಾರ ಪೊಂಗಲು ಮತ್ತು ಸಿಹಿ ಪೊಂಗಲು -ಎರಡೂ ನಾಲಿಗೆಗೆ ಅಚ್ಚುಮೆಚ್ಚು. ಹಾಗಾದರೆ ಪೊಂಗಲಿಗೆ ಹಾಗೆ ಹೇಳಲು ಕಾರಣವೇನು?

ಇದು ಕನ್ನಡದ್ದೇ ಆದ ಪದ. ಅದನ್ನು ಹೀಗೆ ಬಿಡಿಸಬಹುದು

ಪೊಂಗು+ಇಲು = ಹಿಗ್ಗಿದ ವಸ್ತು(ಹಿಗ್ಗಿದ್ದು), ಕುದಿದ ವಸ್ತು(ಕುದಿದ್ದು), ಅರಳಿದ ವಸ್ತು(ಅರಳಿದ್ದು)
poṅgu to boil over, burst open, expand, open, blossom, swell, be elated, exult, be overjoyed (DED 4469)

ಪೊಂಗಲು ಮಾಡುವುದಕ್ಕೆ ಬಳಸುವ ಬೇಳೆ ಮತ್ತು ಅಕ್ಕಿಯನ್ನು ನೀರಿನಲ್ಲಿ ಕುದಿಸಲಾಗುತ್ತದೆ. ಹೀಗೆ ಮಾಡುವುದರಿಂದ ಅಕ್ಕಿ ಮತ್ತು ಬೇಳೆ ಊದಿಕೊಳ್ಳುತ್ತವೆ(expand,swell). ಬೇರೆ ಮಾತಿನಲ್ಲಿ ಹೇಳಬೇಕೆಂದರೆ ಅಕ್ಕಿ/ಬೇಳೆ ಅರಳುತ್ತದೆ. ಹಾಗಾಗಿಯೇ ಇದಕ್ಕೆ ಪೊಂಗಲು ಎಂಬ ತಕ್ಕ ಹುರುಳುಳ್ಳ ಪದವನ್ನ ಕೊಡಲಾಗಿದೆ.

ಆಡುಮಾತಿನಲ್ಲಿ ಅದು ಪೊಂಗಿಲು/ಪಂಗಲು/ಪಂಗ್ಲು/ಪೊಂಗ್ಲು ಎಂದೆಲ್ಲಾ ಮಾರ್ಪಾಗಿದೆ.

Wednesday, August 15, 2012

ನೆಲುಲ್ಲು (ನೆಲ್-ಹುಲ್ಲು)


ಇದು ಒಂದು ತರದ ಹುಲ್ಲು. ಇದನ್ನು ಎತ್ತಿನ ಗಾಡಿಯ ಮೇಲೆ ಹಾಕಿ ಕೂತುಕೊಳ್ಳಲು ಮೆತ್ತೆಯನ್ನು ಮಾಡಲಾಗುತ್ತದೆ. ಅಲ್ಲದೆ ಇದನ್ನು ಮೇವಿಗೆ ಬಳಸಲು ಹಳ್ಳಿಗಳಲ್ಲಿ ಮೆದೆ ಮಾಡಿಡಲಾಗುತ್ತದೆ.
ಬಿಡಿಸಿಕೆ:-
ನೆಲ್+ಹುಲ್ಲು = ನೆಲ್-ಹುಲ್ಲು =>(ಹ ಕಾರದ ಬೀಳುವಿಕೆಯಿಂದ) ನೆಲುಲ್ಲು
ಬಳಕೆ:-
ಇಲ್ಲಿ ನೆಲುಲ್ಲು ಆಸ್ಬುಡಂವ್, ಒಳ್ಳಿ ಮೆತ್ಗಿರುತ್ತೆ. (ಇಲ್ಲಿ ನೆಲುಲ್ಲನ್ನು ಹಾಸಿ ಬಿಡುವ, ಒಳ್ಳೆ ಮೆತ್ತಗೆ ಇರುತ್ತೆ)
ನೆಲ್ ಅಂದರೆ ಬತ್ತ ಅಂತ ಹುರುಳಿದೆ.Ka. nel, nellu paddy, rice in its husk, rice as growing, a grain of paddy. (DED 3753)
ನೆಲುಲ್ಲು ಅಂದರೆ ಬತ್ತದ ಹುಲ್ಲು (paddy grass)

ತಳಾರೆ



ಬಿಡಿಸಿಕೆ: ತಳ್ +ಆರೆ = ತಳಾರೆ => ತಳಾರ (ಆಡುನುಡಿಯಲ್ಲಿ)
ಬಳಕೆ: ತಳಾರ್ದಲ್ ನಡಿ. ಕಲ್ಲುಮುಳ್ಳಿನ್ ದಾರಿ
ತಳ್ ಎಂಬುದು ’ತಾಳ್’ ಎಂಬುದರ ತೆಂಕಿನ ಒಳನುಡಿಯ ರೂಪ. ತಾಳ್ ಎಂಬುದಕ್ಕೆ Ka. tāḷ, tāḷu (tāḷd-) to hold, take, assume, get, obtain, receive, have or possess, undergo, experience, suffer patiently or quietly, be patient, endure, wait, last, continue unimpaired, wear well, bear with ( DED 3188)
ಇದರಲ್ಲಿರುವ ’wait' ಎಂಬ ಅರ್ತ ಹೆಚ್ಚು ಹೊಂದಿಕೆಯಾಗುತ್ತದೆ. ’ಆರೆ’ ಎಂಬ ಒಟ್ಟು ಒತ್ತಿ ಹೇಳುವುದಕ್ಕೆ ಬಳಸಲಾಗುತ್ತದೆ.
ಎತ್ತುಗೆ: ಕಣ್ಣಾರೆ, ಕಯ್ಯಾರೆ, ಹೊತ್ತಾರೆ
ಹಾಗಾಗಿ ತಳಾರೆ ಎಂಬುದಕ್ಕೆ ’ನಿದಾನ’, ಮೆಲ್ಲಗೆ, slowly ಎಂಬ ಅರ್ತ ಇದೆ. ತಾಳು ಎಂಬುದನ್ನು ಒತ್ತಿ ಹೇಳುವುದಕ್ಕೆ ’ಆರೆ’
ಎಂಬ ಒಟ್ಟನ್ನು ಸೇರಿಸಲಾಗಿದೆ.

ಹಾಳೊಟ್ಟೆ/ಆಳೊಟ್ಟೆ

ಇದು ಮಯ್ಸೂರು, ಮಂಡ್ಯ ಮತ್ತು ಚಾಮರಾಜನಗರದ ಹಳ್ಳಿಗಳಲ್ಲಿ ಬಳಕೆಯಲ್ಲಿದೆ. ಇದರ ಬಳಕೆ ಈ ತೆರ ಇದೆ
ಕೆಲಸ ಇದೆ...ನಾಳೆ ಆಳೊಟ್ಗೆ ಬನ್ಬುಡು..ಇಲ್ಲೇ ತಿಂಡಿ ಮಾಡುವಿಯಂತೆ.
ಇಲ್ಲಿ ಆಡುಗನು ಕೇಳುಗನಿಗೆ ’ಆದಶ್ಟು ಬೇಗ ಕೇಳುಗನು ಮಾರನೇ ದಿನ ಬೆಳಿಗ್ಗೆಯೇ ಬರಬೇಕು’ ಎಂದು ಹೇಳುತ್ತಿದ್ದಾನೆ. ಹಳ್ಳಿಗಳಲ್ಲಿ ಹೊಲ-ಗದ್ದೆಗಳ ಕೆಲಸ ಇರುವುದರಿಂದ ಮಂದಿ ಬೆಳಿಗ್ಗೆಯೇ ತಮ್ಮ ತಿಂಡಿ(ಹಿಂದೆ ತಂಗಳು ತಿನ್ನುತ್ತಿದ್ದರು) ಯನ್ನು ಮುಗಿಸಿ ಹೊಲ-ಗದ್ದೆ ಕಡೆ ಹೆಜ್ಜೆ ಹಾಕುವರು. ಇಲ್ಲಿ ’ಹಾಳೊಟ್ಟೆ’ ಎಂಬ ಪದವನ್ನು ಹೀಗೆ ಬಿಡಿಸಬಹುದು
ಹಾಳು (< ಪಾೞ್) + ಹೊಟ್ಟೆ= ಹಾಳೊಹೊಟ್ಟೆ=> ಹಾಳೊಟ್ಟೆ( ಹ ಕಾರ ಬೀಳುವಿಕೆಯಿಂದ)=> ಆಳೊಟ್ಟೆ.
ಆದರೆ ಪಾೞ್ ಎಂಬುದಕ್ಕೆ ಈ ಅರ್ತಗಳಿವೆ Ka. pār̤ ruin, desolation, a waste; pār̤tana a ruined state (DED 4110)
ಪಾಳು ಬಿದ್ದ ಜಾಗದಲ್ಲಿ ಮಂದಿ ನೆಲೆಸಿರುವುದಿಲ್ಲ.. ಹಾಗಾಗಿ ಒಂದು ಅರ್ತದಲ್ಲಿ ಜನರೇ ಇಲ್ಲದೆ ಆ ತಾವು ’ಬರಿದು’/ಕಾಲಿಯಾಗಿ ಕಾಣಿಸುತ್ತದೆ. ಅಂದಮೇಲೆ ಮೇಲಿನ ’ಹಾಳುಹೊಟ್ಟೆ’ ಎಂಬುವಲ್ಲಿ ಹಾಳು ಎಂಬುದು ’ಬರಿದು’/ಕಾಲಿ ಎಂಬ ಹುರುಳನ್ನೇ ಹೊಂದಿದೆ. ಇಲ್ಲವೆ ಬೆಳಿಗ್ಗೆ ಹೊತ್ತಿಗೆ ಹಿಂದಿನ ಇರುಳಲ್ಲಿ ಉಂಡ ಊಟವು ಅರಗಿ ಉಳಿದವು ’waste' ಆಗಿ ಮಾರ್ಪಾಟಾಗಿರುತ್ತದೆ. ಹಾಗಾಗಿ ವೇಸ್ಟ್ ಹೊಟ್ಟೆ ಎಂಬ ಹುರುಳು ಕೂಡ ’ಹಾಳೊಟ್ಟೆ’ಗೆ ಹೊಂದುತ್ತದೆ.

ಕೆರೆ-ಸೆರೆ


ಬಯಲು ಸೀಮೆಯಲ್ಲಿ ’ಕೆರೆ’(<ಕೆಱೆ) ಪದವು ಹೆಚ್ಚು ಬಳಕೆಯಲ್ಲಿದೆ ಅಲ್ಲದೆ ಹಲವು ಊರುಗಳ ಹೆಸರುಗಳು ಕೂಡ ಕೆರೆಯಲ್ಲಿ ಕೊನೆಗೊಳ್ಳುತ್ತವೆ, ಎತ್ತುಗೆಗೆ ಹೊಳಲ್ಕೆರೆ, ಚಳ್ಕೆರೆ, ಹೊಸಕೆರೆ. ತರೀಕೆರೆ. ಹಾಗಾದರೆ ’ಕೆರೆ’ಯ ಬೇರೇನು? ಕೆರೆಗೆ ಹಾಗೆ ಕರೆಯಲು ಕಾರಣವೇನು ಎಂದು ಉಂಕಿಸಿದಾಗ ಕನ್ನಡದಲ್ಲಿ ’ಕಿಱ್’ ಎಂಬ ಬೇರುಪದವಿದೆ(ಎಸಕಪದ) ಎಂಬುದು ಗೊತ್ತಾಯಿತು. Ka. kiṟ (kett-) to confine, close, shut, block up, make a fence, cover (DED 1980)
ಅಂದರೆ ಬಂದಿಸು, ಒಂದೆಡೆ ನಿಲ್ಲಿಸು ಎಂಬ ಅರ್ತ ಎಂಬುದು ತಿಳಿಯುತ್ತದೆ. ಈ ಮೇಲಿನ ಎಸಕ ಪದವನ್ನು ಅಂದರೆ ’ಕಿಱ್’ ಹೆಸರುಪದವಾದಾಗ ’ಕೆಱೆ’/ಕೆರೆ ಎಂದು ಮಾರ್ಪಾಟಾಗಿದೆ. ಹಾಗಾಗಿ ಕೆರೆ ಎಂಬುದಕ್ಕೆ ಹೀಗೆ ವಿವರಣೆ ಕೊಡಬಹುದು:-

’ಯಾವುದು ಬಂದಿಸಲ್ಪಟ್ಟಿದಿಯೊ, ಯಾವುದನ್ನು ಒಂದು ಕಡೆ ತಡೆದು ನಿಲ್ಲಿಸಿಲಾಗಿದಿಯೊ ಅದನ್ನು ಕೆರೆ ಎಂದು ಕರೆಯಬಹುದು’. ಆದರೆ ಆಮೇಲೆ ಇದರ ಹುರುಳನ್ನು ಬಳಕೆಯಲ್ಲಿ ಬರೀ ನೀರನ್ನು ತಡೆದು ನಿಲ್ಲಿಸುವ ಜಾಗಕ್ಕೆ ಮೊಟಕುಗೊಳಿಸಲಾಗಿದೆ.
ಹಾಗಾಗಿ ಎಲ್ಲಿ ನೀರನ್ನು ಬಂದಿಸಲ್ಪಟ್ಟಿದಿಯೊ ಇಲ್ಲವೆ ಯಾವ ಜಾಗದಲ್ಲಿ ನೀರನ್ನು ಒಂದು ಕಡೆ ತಡೆದು(ಹರಿದುಹೋಗದಂತೆ) ನಿಲ್ಲಿಸಲಾಗಿದಿಯೊ ಅದನ್ನು ’ಕೆರೆ’ ಎಂದು ಕರೆಯಲಾಗುತ್ತಿದೆ. ಹಾಗಾದರೆ ಈಗ ’ಬಂದನ’ ಎಂಬ ಹುರುಳನ್ನು ಹೊಂದಿರುವ ಪದ ’ಸೆರೆ’ ಗೂ ’ಕೆರೆ’ ಗೂ ಏನಾದರೂ ನಂಟಿದಿಯೇ ಎಂದು ನೋಡಬೇಕಾಗುತ್ತದೆ. ಇದಕ್ಕೆ ತಮಿಳಿನ/ತೆಲುಗಿನ ಪದಗಳ ನೆರವನ್ನು ಪಡೆಯಬಹುದು.
ಕನ್ನಡದಲ್ಲಿ ಕೆರೆ(tank) ಎಂಬುದಕ್ಕೆ ತಮಿಳಿನಲ್ಲಿ ’ಚಿಱೈ’ ಮತ್ತು ತೆಲುಗಿನಲ್ಲಿ ’ಚೆರುವು’ ಎಂಬ ಪದಗಳಿವೆ. ಕನ್ನಡದ ಪದಗಳ ಮೊದಲಲ್ಲಿ ’ಕ’ ಇರುವ ಕಡೆ ತಮಿಳಲ್ಲಿ ಹಲವು ಕಡೆ ’ಚ’ ಆಗಿದೆ. ಎತ್ತುಗೆಗೆ

ಕನ್ನಡ - ತಮಿಳು
ಕೇರಿ - ಚೇರಿ
ಕಿವಿ - ಚೆವಿ(ಸೆವಿ)
ಕೆರ - ಚೆರುಪ್ಪು (ಚಪ್ಪಲಿ)
ಕೆಮ್ - ಚೆಮ್ (red)

ತಮಿಳಿನ ’ಚಿಱೈ’ ಗೆ ಕನ್ನಡದಲ್ಲಿ ಸಾಟಿ ಪದ ’ಚೆರೆ’/ಸೆರೆ ಎಂದೇ ಆಗುತ್ತದೆ ಯಾಕಂದರೆ ಕನ್ನಡದ ಆಡುನುಡಿಗಳಲ್ಲಿ ’ಚ’ ಮತು ’ಸ’ ಅನ್ನು ಒಂದಕ್ಕೊಂದರ ಬದಲಾಗಿ ಹುರುಳಿನ ವೆತ್ಯಾಸವಾಗದೆ ಬಳಸಬಹುದು. ಎತ್ತುಗೆಗೆ: ಚಂದ=ಸಂದ, ಚಳಿ = ಸಳಿ.
ಹಾಗಾಗಿ ’ಕೆರೆ’ ಎಂಬ ಪದಕ್ಕಿದ್ದ ಬೇರುಹುರುಳು(ಬಂದನ) ಬರಿ ನೀರನ್ನು ಬಂದಿಸಿಡುವುದಕ್ಕೆ ಮೊಟಕುಗೊಳಿಸಿದಾಗ, ಹುರುಳಲ್ಲಿ ಹೆಚ್ಚು ಹರಹಿರುವ ’ಸೆರೆ’ ಎಂಬ ಪದ ಬಂದೊದಗಿರಬೇಕು ಎಂದು ತೋರುತ್ತದೆ.

Monday, August 13, 2012

ತೊಟ್ಟಿಲು

ಇದು ತುಂಬ ಬಳಕೆಯಲ್ಲಿದೆ. 'ಪಕ್ಕದ ಮನೆಯಲ್ಲಿ ಕೂಸು ಹುಟ್ಟಿದರೆ ನಮ್ಮ ಮನೆಯಲ್ಲಿ ತೊಟ್ಟಿಲು ತೂಗಬೇಕಾ' ಎಂಬ ನಾಣ್ಣುಡಿಯಲ್ಲೂ ತೊಟ್ಟಿಲು ಬಳಕೆಯಾಗಿದೆ. ತೊಟ್ಟಿಲನ್ನು ಹೀಗೆ ಬಿಡಿಸಬಹುದು
ತೊಟ್/ತೊಟ್ಟು+ಇಲು = ತೊಟ್ಟಿಲು => ತೊಟ್ಲು
( ಎರಡನೇ ಉಲಿಕಂತೆಯಲ್ಲಿ ತೆರೆಯುಲಿಯ ಬೀಳುವಿಕೆ ಕನ್ನಡದ ಉಲಿಯೊಲವು ಅಂದರೆ 'ತೊಟ್ಟಿಲು' ಎಂಬಲ್ಲಿ 'ಟ್ಟ್+ಇ' ಎಂಬ ಉಲಿಕಂತೆಯಲ್ಲಿ ತೆರೆಯುಲಿಯಾದ 'ಇ' ಬಿದ್ದುಹೋಗಿ 'ತೊಟ್ಲು' ಎಂದಾಗಿದೆ.)

ತೊಟ್ಟು ಎನ್ನುವುದಕ್ಕೆ ಈ ಹುರುಳುಗಳಿವೆ:- Ka. toṭṭu, toḍambe foot-stalk of a fruit, flower or leaf. ಅಂದರೆ ಹೂವಿನ ಎಸಳುಗಳನ್ನು ಇಲ್ಲವೆ ಹಣ್ಣುಗಳನ್ನು ಹಿಡಿದಿಟ್ಟುಕೊಳ್ಳುವುದಕ್ಕೆ/ಪೊರೆಯುವುದಕ್ಕೆ ಹಣ್ಣಿನ/ಹೂವಿನ 'ತೊಟ್ಟು' ಎಂದು ಹೇಳುತ್ತಾರೆ. ತೊಟ್ಟಿನ ಮೇಲ್ಬಾಗ ತೆರೆದುಕೊಂಡು ಕೆಳಕ್ಕೆ ಹೋದಂತೆ ಕಿರಿದಾಗುತ್ತದೆ. ಇದರಿಂದ ಅದು ಹೂವು/ಹಣ್ಣುಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ. ಕೊರಗ ನುಡಿಯಲ್ಲಿ 'ತೊಟ್ಟು' ಎನ್ನುವುದಕ್ಕೆ 'ಮಗುವನ್ನು ತತ್ತಿಕೊ' ಎಂದೇ ಹುರುಳಿದೆ. Kor. (O.) toṭṭu to carry a child

'ತತ್ತು' ಮತ್ತು 'ತೊಟ್ಟು' ಬೇರಿನ ಮಟ್ಟದಲ್ಲಿ  ಏನಾದರೂ ನಂಟಿದಿಯೊ ಗೊತ್ತಿಲ್ಲ.. ಆದರೆ ಹುರುಳಿನ ಮಟ್ಟಿಗೆ ನಂಟಿದೆ ಎಂದು ಹೇಳಬಹುದು.  ತತ್ತು ಕ್ರಿಯಾಪದ (ದೇ) ಅಪ್ಪು, ಆಲಂಗಿಸು
ಬಳಕೆ: ನನ್ ಕಯ್ಯಲ್ಲಿ ಆಗಲ್ಲ.. ನೀನೇ ಈ ಕೂಸನು ತತ್ತಿಕೊ.

.

ತಿರುಳು: ತೊಟ್ಟಿಲನಲ್ಲಿರುವ 'ತೊಟ್ಟು' ಎಂಬುದು ಹಿಡಿ/catch/hold/carry ಎಂಬ ಹುರುಳುಗಳನ್ನು ಹೊಂದಿದೆ.ಇನ್ನು 'ಇಲು' ಎಂಬುದಕ್ಕೆ ತಾವು/ಜಾಗ ಎಂಬ ಹುರುಳಿದೆ. ಹಾಗಾಗಿ ತೊಟ್ಟಿಲು ಎಂಬುದು ಮಗುವನ್ನು 'ಹಿಡಿದಿಟ್ಟಿಕೊಳ್ಳುವ ಜಾಗ' ಇಲ್ಲವೆ 'ಹಿಡಿದಿಟ್ಟುಕೊಳ್ಳುವ ವಸ್ತು' ಎಂಬ ಹುರುಳಿನಲ್ಲಿ ಬಳಕೆಗೆ ಬಂದಿದೆ.

Sunday, August 12, 2012

ಆರಂಬ

ಈ ಪದಬಳಕೆ ನಮ್ಮ(ಮಂಡ್ಯ, ಮೈಸೂರು) ಕಡೆ ಇದೆ. ಇದಕ್ಕಿರುವ ಹುರುಳು

ಏರಂಬ =ಆರಂಬ = ಉಳುಮೆ= ಬೇಸಾಯ

ಕನ್ನಡದಲ್ಲಿ *ಆರ್*/ಆರು (ಹಾಸನದ ಕಡೆ) ಮತ್ತು *ಏರ್*(ಮಂಡ್ಯ, ಮೈಸೂರು ಕಡೆ) ಪದಬಳಕೆಯೂ ಕೂಡ ಇನ್ನು ಇದೆ. ಇದಕ್ಕೆ ದ್ರಾವಿಡ ಪದನೆರಕೆಯಲ್ಲಿ ಈ ಹುರುಳು ಕೊಡಲಾಗಿದೆ. Ka. ēru, ār pair of oxen yoked to a plough.

ಇದನ್ನು ಬಿಡಿಸಿದಾಗ
ಏರ್ಂ+ಪು = ಏರಂಪು =ಏರಂಬ
ಆರ್ಂ+ಪು = ಆರಂಪು =ಆರಂಬ

ಯಾಕಂದರೆ, ಈ ತೆರನಾದ ಪದಕಟ್ಟಣೆ ಈಗಾಗಲೆ ಈ ಎತ್ತುಗೆ ಇದೆ. 
ಇಲ್ಲಿ ’ಪು’ ಎನ್ನುವುದು ’ಹೆಸರು ಪದವನ್ನಾಗಿಸಲು’ ಬಳಸುವ ಒಂದು ಒಟ್ಟು. ಎತ್ತುಗೆಗೆ: ನೆನಪು, ಉಡುಪು,

ತೆನ್+ಪು=> ತೆನ್ಪು= ತೆಂಪು

ಕನ್ನಡದಲ್ಲಿರುವ ಒಂದು ಉಲಿಯೊಲವು ಏನೆಂದರೆ
  "ಕೊರಲಿಸಿದ(ಗ, ಜ, ಡ, ದ, ಬ) ಮತ್ತು ಕೊರಲಿಸದ(ಕ, ಚ, ಟ, ತ, ಪ) ಉಲಿಗಳನ್ನು ಒಂದಕ್ಕೆ ಒಂದರ ಬದಲಾಗಿ ಬಳಸುವುದುಂಟು. ಇದರಿಂದ ಹುರುಳಿನಲ್ಲಿ ಅಂತಹ ವೆತ್ಯಾಸವೇನೂ ಆಗುವುದಿಲ್ಲ."

ಹಾಗಾಗಿ,
ತೆಂಪು => ತೆಂಬು( ದಕ್ಷಿಣ)

ತೆಂಬು +ಎಲರ್ = ತೆಂಬೆಲರ್ = ತೆಂಕಣ ಗಾಳಿ ( ಮಲಯ ಮಾರುತ, ದಕ್ಷಿಣದಿಂದ ಬೀಸುವ ಗಾಳಿ)
ತೆಂಬೆಲರ್ ಎಂಬ ಪದ ಬಳಕೆ ಪಂಪನಿಂದ ಹಿಡಿದು ಆಂಡಯ್ಯನವರೆಗೂ ಹಲವು ಹಳಗನ್ನಡದ ಬರಹಗಳಲ್ಲಿ ಬಳಕೆಯಾಗಿದೆ

ಕಬ್ಬಾಳಮ್ಮ

ಎಶ್ಟೊಂದು ಟ್ಯಾಕ್ಸಿಗಳ ಮುಂದೆ ಕಡೆಕಬ್ಬಾಳಮ್ಮನ ಕ್ರುಪೆ’ ಅಂತ ಬರೆಯಿಸಿ ಹಾಕಿಕೊಂಡಿರುತ್ತಾರೆ. ಆದರೆ ಕಬ್ಬಾಳಮ್ಮ ಅಂದರೆ ಯಾರು ? ಇದನ್ನು ಹೇಗೆ ಬಿಡಿಸುವುದು ಎಂದು ಉಂಕಿಸಿದಾಗ ಹೊಳೆದುದು.

ಕಬ್ಬಾಳಮ್ಮ = ಕರು+ಪಾಳಮ್ಮ (ಸೇರಿಕೆಯಾದ ಮೇಲೆ ’ಪ’ ಕಾರ ’ಬ’ಕಾರ ಆಗುತ್ತದೆ)=> ಕರ್ಬಾಳಮ್ಮ( ’ರ’ಕಾರಕ್ಕೆ ಯಾವ ಬರಿಗೆ ಒತ್ತುಬರಿಗೆಯಾಗಿ ಬರುತ್ತದೆಯೋ ಅದೆ ಕೊನೆಗೆ ಉಲಿಕೆಯಲ್ಲಿ ಉಳಿಯುತ್ತದೆ) => ಕಬ್ಬಾಳಮ್ಮ

ಕರು ಮತ್ತು ಪಾಳಮ್ಮ ಎಂಬುದಕ್ಕೆ ಈ ಕೆಳಗೆ ಕೊಟ್ಟಿರುವ ಹುರುಳುಗಳಿವೆ.
ಕರು=ದೊಡ್ಡ, ಮಹಾ (Ka. kara, karu greatness, abundance, power)
ಪಾಳಮ್ಮ = ಪಾಳ್ಯದಮ್ಮ = ಹಳ್ಳಿಯಮ್ಮ = ಗ್ರಾಮದೇವತೆ (Ka. pāḷeya, pāḷya, pāḷye camp, settlement, hamlet)
ಅಂದರೆ,
ಕಬ್ಬಾಳಮ್ಮ ಅಂದರೆ ’ಮಹಾ ಗ್ರಾಮದೇವತೆಎಂಬ ಹುರುಳಿರುವುದು ಇದರಿಂದ ತಿಳಿಯುತ್ತದೆ.

ಬಚ್ಚಲು

ಈ ಪದವನ್ನು ನಾವು ದಿನಾಲು ಸ್ನಾನದ ಮನೆ ಇಲ್ಲವೆ ಮೋರಿ/ಕೊಳೆ ಹೋಗಲು ಮಾಡಿರುವ ಒಂದು ಕೊಳಾಯಿ ಎಂಬ ಹುರುಳಿನಲ್ಲಿ ಬಳಸಿತ್ತಿರುತ್ತೇವೆ. ಆದರೆ ಈ ಪದ ದಿಟವಾಗಲು ಎರಡು ಪದಗಳಿಂದ ಮಾಡಲ್ಪಟ್ಟಿದೆ ಎಂಬುದು ನಮ್ಮ ಅರಿವಿಗೆ ಬಂದಿರುವುದಿಲ್ಲ. ಅದನ್ನು ಈ ತೆರ ಬಿಡಿಸಬಹುದು.

ಬಚ್ಚು + ಇಲು = ಬಚ್ಚಿಲು = ಬಚ್ಚಲು = ಬಚ್ಲು

’ಬಚ್ಚು’ ಎಂಬುದುಕ್ಕೆ ಅಡಗು (hide) ಎಂಬ ಹುರುಳಿದೆ
’ಇಲು’ ಎಂಬುದಕ್ಕೆ ಮನೆ, ಜಾಗ, ತಾವು ಎಂಬ ಹುರುಳಿದೆ.

ಹಾಗಾದರೆ, ’ಅಡಗುವ ಜಾಗ’, ’ಅಡಗುವ ತಾವು’, ’ಅಡಗುವ ಮನೆ’ ಎಂಬುದೇ ಅದಕ್ಕಿರುವ ಹುರುಳು. ಹಾಗಾದರೆ ಅಡಗುವ ತಾವಿಗೂ, ಮೀಯುವ ಮನೆಗೂ ಏನು ನಂಟು ಎಂಬ ಕೇಳ್ವಿ ಮೂಡುತ್ತದೆ. ನಮ್ಮ ನಡವಳಿಯಲ್ಲಿ ಕೆಲವು ಕುರಿಪು(ವಿಶಯ)ಗಳನ್ನು ನೇರವಾಗಿ ಹೇಳುವ ಅಲುವಾಟವಿಲ್ಲ. ಅಂದರೆ ಬೆಳಿಗ್ಗೆ ಎದ್ದು ಯಾರಾದರು ’ತಿಪ್ಪೆಗೆ ಹೋಗ್ತಿನಿ’ ಅಂದರೆ ಕೇಳುಗರಿಗೆ ಗೊತ್ತಾಗುತ್ತದೆ. ಈ ರೀತಿ ಸೂಚ್ಯವಾಗಿ ಹೇಳುವುದು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಹಾಗೆಯೇ ಕೈ ಕಾಲು ತೊಳೆದುಕೊಳ್ಳುವುದಕ್ಕೆ, ಮಯ್ಕಸವನ್ನು ಹೊರಗೆ ಹಾಕಲಿಕ್ಕೆ ಇಲ್ಲವೆ ಬೇರೆ ಯಾವುದಾದರೂ ಎಸಕಗಳಿಗೆ ಒಂದು ’ಅಡಗುತಾಣ’ ಬೇಕಾಗುತ್ತದೆ. ಈ ಅಡಗುತಾಣವೇ ಮೇಲೆ ಹೇಳಿದಂತೆ ’ಬಚ್ಚಿಲು’. ಅದು ಬೇರೆ ಬೇರೆ ಊರುಗಳಲ್ಲಿ ಬಚ್ಚಲು, ಬಚ್ಚಲುಮನೆ ಇಲ್ಲವೆ ಬಚ್ಲು ಎಂಬ ರೂಪದಲ್ಲಿ ಬಳಕೆಯಲ್ಲಿದೆ