ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Wednesday, August 15, 2012

ಕೆರೆ-ಸೆರೆ


ಬಯಲು ಸೀಮೆಯಲ್ಲಿ ’ಕೆರೆ’(<ಕೆಱೆ) ಪದವು ಹೆಚ್ಚು ಬಳಕೆಯಲ್ಲಿದೆ ಅಲ್ಲದೆ ಹಲವು ಊರುಗಳ ಹೆಸರುಗಳು ಕೂಡ ಕೆರೆಯಲ್ಲಿ ಕೊನೆಗೊಳ್ಳುತ್ತವೆ, ಎತ್ತುಗೆಗೆ ಹೊಳಲ್ಕೆರೆ, ಚಳ್ಕೆರೆ, ಹೊಸಕೆರೆ. ತರೀಕೆರೆ. ಹಾಗಾದರೆ ’ಕೆರೆ’ಯ ಬೇರೇನು? ಕೆರೆಗೆ ಹಾಗೆ ಕರೆಯಲು ಕಾರಣವೇನು ಎಂದು ಉಂಕಿಸಿದಾಗ ಕನ್ನಡದಲ್ಲಿ ’ಕಿಱ್’ ಎಂಬ ಬೇರುಪದವಿದೆ(ಎಸಕಪದ) ಎಂಬುದು ಗೊತ್ತಾಯಿತು. Ka. kiṟ (kett-) to confine, close, shut, block up, make a fence, cover (DED 1980)
ಅಂದರೆ ಬಂದಿಸು, ಒಂದೆಡೆ ನಿಲ್ಲಿಸು ಎಂಬ ಅರ್ತ ಎಂಬುದು ತಿಳಿಯುತ್ತದೆ. ಈ ಮೇಲಿನ ಎಸಕ ಪದವನ್ನು ಅಂದರೆ ’ಕಿಱ್’ ಹೆಸರುಪದವಾದಾಗ ’ಕೆಱೆ’/ಕೆರೆ ಎಂದು ಮಾರ್ಪಾಟಾಗಿದೆ. ಹಾಗಾಗಿ ಕೆರೆ ಎಂಬುದಕ್ಕೆ ಹೀಗೆ ವಿವರಣೆ ಕೊಡಬಹುದು:-

’ಯಾವುದು ಬಂದಿಸಲ್ಪಟ್ಟಿದಿಯೊ, ಯಾವುದನ್ನು ಒಂದು ಕಡೆ ತಡೆದು ನಿಲ್ಲಿಸಿಲಾಗಿದಿಯೊ ಅದನ್ನು ಕೆರೆ ಎಂದು ಕರೆಯಬಹುದು’. ಆದರೆ ಆಮೇಲೆ ಇದರ ಹುರುಳನ್ನು ಬಳಕೆಯಲ್ಲಿ ಬರೀ ನೀರನ್ನು ತಡೆದು ನಿಲ್ಲಿಸುವ ಜಾಗಕ್ಕೆ ಮೊಟಕುಗೊಳಿಸಲಾಗಿದೆ.
ಹಾಗಾಗಿ ಎಲ್ಲಿ ನೀರನ್ನು ಬಂದಿಸಲ್ಪಟ್ಟಿದಿಯೊ ಇಲ್ಲವೆ ಯಾವ ಜಾಗದಲ್ಲಿ ನೀರನ್ನು ಒಂದು ಕಡೆ ತಡೆದು(ಹರಿದುಹೋಗದಂತೆ) ನಿಲ್ಲಿಸಲಾಗಿದಿಯೊ ಅದನ್ನು ’ಕೆರೆ’ ಎಂದು ಕರೆಯಲಾಗುತ್ತಿದೆ. ಹಾಗಾದರೆ ಈಗ ’ಬಂದನ’ ಎಂಬ ಹುರುಳನ್ನು ಹೊಂದಿರುವ ಪದ ’ಸೆರೆ’ ಗೂ ’ಕೆರೆ’ ಗೂ ಏನಾದರೂ ನಂಟಿದಿಯೇ ಎಂದು ನೋಡಬೇಕಾಗುತ್ತದೆ. ಇದಕ್ಕೆ ತಮಿಳಿನ/ತೆಲುಗಿನ ಪದಗಳ ನೆರವನ್ನು ಪಡೆಯಬಹುದು.
ಕನ್ನಡದಲ್ಲಿ ಕೆರೆ(tank) ಎಂಬುದಕ್ಕೆ ತಮಿಳಿನಲ್ಲಿ ’ಚಿಱೈ’ ಮತ್ತು ತೆಲುಗಿನಲ್ಲಿ ’ಚೆರುವು’ ಎಂಬ ಪದಗಳಿವೆ. ಕನ್ನಡದ ಪದಗಳ ಮೊದಲಲ್ಲಿ ’ಕ’ ಇರುವ ಕಡೆ ತಮಿಳಲ್ಲಿ ಹಲವು ಕಡೆ ’ಚ’ ಆಗಿದೆ. ಎತ್ತುಗೆಗೆ

ಕನ್ನಡ - ತಮಿಳು
ಕೇರಿ - ಚೇರಿ
ಕಿವಿ - ಚೆವಿ(ಸೆವಿ)
ಕೆರ - ಚೆರುಪ್ಪು (ಚಪ್ಪಲಿ)
ಕೆಮ್ - ಚೆಮ್ (red)

ತಮಿಳಿನ ’ಚಿಱೈ’ ಗೆ ಕನ್ನಡದಲ್ಲಿ ಸಾಟಿ ಪದ ’ಚೆರೆ’/ಸೆರೆ ಎಂದೇ ಆಗುತ್ತದೆ ಯಾಕಂದರೆ ಕನ್ನಡದ ಆಡುನುಡಿಗಳಲ್ಲಿ ’ಚ’ ಮತು ’ಸ’ ಅನ್ನು ಒಂದಕ್ಕೊಂದರ ಬದಲಾಗಿ ಹುರುಳಿನ ವೆತ್ಯಾಸವಾಗದೆ ಬಳಸಬಹುದು. ಎತ್ತುಗೆಗೆ: ಚಂದ=ಸಂದ, ಚಳಿ = ಸಳಿ.
ಹಾಗಾಗಿ ’ಕೆರೆ’ ಎಂಬ ಪದಕ್ಕಿದ್ದ ಬೇರುಹುರುಳು(ಬಂದನ) ಬರಿ ನೀರನ್ನು ಬಂದಿಸಿಡುವುದಕ್ಕೆ ಮೊಟಕುಗೊಳಿಸಿದಾಗ, ಹುರುಳಲ್ಲಿ ಹೆಚ್ಚು ಹರಹಿರುವ ’ಸೆರೆ’ ಎಂಬ ಪದ ಬಂದೊದಗಿರಬೇಕು ಎಂದು ತೋರುತ್ತದೆ.

2 comments:

  1. ಎಷ್ಟೋ ಪದಗಳಲ್ಲಿ ಚ <-> ಸ ಸರಿ ಹೋದರೂ, ತಮಿಳಿನಲ್ಲಿರುವಂತೆ ಸಾರಾಸಗಟಾಗಿ, ಎಲ್ಲಾ ಕಡೆ ಚ ಬದಲಾಗಿ ಸ, ಅಥವಾ ಸ ಬದಲಾಗಿ ಚ ಅನ್ನೋದು ಎಲ್ಲಾ ಕನ್ನಡ ಪದಗಳಲ್ಲೂ ಒಪ್ಪೋದಿಲ್ಲ.

    ಹಾಗಾಗಿ, ಅದಕ್ಕೆ ನೀವು ಹೇಳಿರೋದರ ಜೊತೆಗೆ ಇನ್ನೂ ಒಂದು ಯಾವುದೋ ನಿಯಮವೂ ಇರಬೇಕು ಅನ್ನಿಸ್ತಿದೆ.

    ಚ-ಸ ಗಳಿಂದ ಅರ್ಥ ಬದಲಾಗುವ ಹಲವು ಜೋಡಿಗಳು - ಹುಡುಕಿದರೆ ಇನ್ನಷ್ಟು ಸಿಗಬಹುದು.

    ಚೂರು - ಸೂರು
    ಚಿಗುರು - ಸಿಗುರು
    ಸಾಟಿ - ಚಾಟಿ


    ಮತ್ತೆ ’ಸ’ ದಿಂದ ಮೊದಲಾಗುವಂತಹ ಎಷ್ಟೋ ಅಚ್ಚ ಕನ್ನಡ ಪದಗಳಿಗೆ ಚ ದಿಂದ ಮೊದಲಾಗೋ ರೂಪಗಳು ಇದ್ದಂತಿಲ್ಲ (ನನಗೆ ತಿಳಿದಂತೆ) - ಹಾಗೇ ಚ ದಿಂದ ಮೊದಲಾಗೋ ಪದಗಳಿಗೆ ಸ ದಿಂದ ಮೊದಲಾಗೋ ರೂಪಗಳೂ ಇಲ್ಲ. ಆ ಗುಂಪಿನಲ್ಲಿ ಕೆಲವು ನನಗೆ ನೆನಪಾದ ಪದಗಳು:

    ಚೆಲ್ಲು (ನಾಮಪದ, ಕ್ರಿಯಾಪದ)
    ಚುಚ್ಚು
    ಚಾವಡಿ

    ಸುಳುಹು
    ಸಲುವು
    ಸರಳು
    ಸೈರಣೆ
    ಸೂಡಿ
    ಸಂಚು
    ಸಟ್ಟುಗ
    ಸಿಡಿ
    ಸಿಡಿಲು
    ಸೀಳು

    ReplyDelete
  2. ಸಿಡಿಲು = ಚೆಡ್ಲು
    Ka. siḍil shaft of lightning, thunderbolt; (Hav.) seḍilu thunder; (Kumta; U.P.U.) ceḍlu (DED 2759)

    ಇನ್ನು 'ಸಿಡಿ' ಎಂಬುದಕ್ಕೂ 'ಕಿಡಿ' ಹುರುಳಿನಲ್ಲಿ ಹತ್ತಿರದ ನಂಟಿದೆ.
    ಇನ್ನು 'ಸಿಡಿ' ಎಂಬುದಕ್ಕೂ 'ಕಿಡಿ' ಎಂಬುದಕ್ಕೂ ಹುರುಳಿನಲ್ಲಿ ಹತ್ತಿರದ ನಂಟಿದೆ.

    ಒಟ್ಟಿನಲ್ಲಿ 'ಚ'<->'ಸ' ಆಗೇ ಅಗುತ್ತದೆಂಬ ಕಟ್ಟಲೆಯಿದೆ ಎಂದು ನಾನು ಹೇಳುತ್ತಿಲ್ಲ. ಆದರೆ ಆ ತರದ ಒಲವು(ಉಲಿಯೊಲವು) ಇದೆ.

    ReplyDelete