ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Monday, August 27, 2012

ರಾಗಿ

ರಾಗಿ ಮೊದ್ದೆ ಉಪ್ಪೆಸರಿನ ಸಾರು ಎಂದರೆ ಬಾಯಲ್ಲಿ ನೀರೂರುತ್ತದೆ. ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ಇನ್ನೊಂದು ತರ ಕಿಕ್ ಕೊಡುತ್ತೆ. ರಾಗಿ ಹುರಿಟ್ಟು ಬಾಯನ್ನು ಸಿಹಿ ಮಾಡುತ್ತೆ. ಇನ್ನು 'ರಾಗಿ ಸರಿ' ಚಿಕ್ಕಮಕ್ಕಳಿಗೆ ಬಲು ತಿನ್ನಲು ಚೆನ್ನ. ಹಾಗಾದರೆ ರಾಗಿ ಎನ್ನುವುದು ಹೇಗೆ ಬಂತು. ಅಲ್ಲದೆ ವಿಕಿಪಿಡಿಯಾದಲ್ಲಿ ಕರ್ನಾಟಕವೇ ಹೆಚ್ಚು ರಾಗಿ ಬೆಳೆಯುವ ರಾಜ್ಯ ಎಂದು ಹೇಳಲಾಗಿದೆ. ಅಂದ ಮೇಲೆ ನಮ್ಮ ರಾಗಿಯ ನಂಟು ಆಳದ್ದೆ ಇರಬೇಕು. ಅಂದರೆ ರಾಗಿಗೆ ಕನ್ನಡದ್ದೇ ಆದ ಪದವುಟ್ಟನ್ನು ಹೇಳಬಹುದೆಂದು ನೋಡಿದಾಗ...

ಬಿಡಿಸುವಿಕೆ: 
  ಇರ್+ ಅಕ್ಕಿ = ಇರಕ್ಕಿ ( metathesis ಆದ ಮೇಲೆ) => ರಾಕಿ
  ರಾಕಿ == ಕೊರಲಿಸಿದ ಇಂದ ಕೊರಲಿಸಿದಕ್ಕೆ ಮಾರ್ಪಾಟದ ಮೇಲೆ ==> ರಾಗಿ  ಆಗುತ್ತದೆ.

ಹಾಗಾದರೆ ಮುಂಪದವಾದ 'ಇರ್' ಅಂದರೇನು ಅನ್ನುವುದಕ್ಕೆ ಮುಂಚೆ ಈ ಪದಗಳನ್ನು ನೋಡೋಣ:-
೧. ಇರುಳು (ರಾತ್ರಿ, night which signifies darkness) - DED 2552 
೨. ಇರುಂಪು=ಇರುವೆ=ಎರ=ಎರುಗು (black ant)       - DED   864
೩. ಇರ್ಪಡಿ= ಇಬ್ಬಡಿ ( ಬೀಟೆ, blackwood)               - DED   483
೪. ಇರುಮೆ=ಇರುಮಯ್=ಇರ್ಮೆ=ಎರ್ಮೆ=ಎಮ್ಮೆ( ಕಪ್ಪುತನ blackness=> female buffalo)- DED 816
ಇಲ್ಲಿ ಇರ್ಮೆ ಎಂಬ ಪದ ಪದನೆರಕೆಯಲ್ಲಿ ಸಿಗದಿದ್ದರು ಕನ್ನಡದ ಉಲಿಕೆಯ ಮಟ್ಟಿಗೆ  ಇ<->ಎ ಬದಲಾಗುವುದು ಕಾಣುತ್ತದೆ.  ಎತ್ತುಗೆಗೆ: ಎದಿರ್<->ಇದಿರ್.

ಈಗಾಗಲೆ ನಮಗೆ ಗೊತ್ತಿರುವ ಹಾಗೆ ಸಾಮಾನ್ಯವಾಗಿ ಅಕ್ಕಿ ಬೆಳ್ಳಗೆ/ಬಿಳಿಯಾಗಿ ಇರುತ್ತದೆ. ಕೆಲವು ಬಗೆಯ ಅಕ್ಕಿ ಕೆಂಪಗೆ ಇದ್ದರೆ ಅದನ್ನ 'ಕೆಂಪಕ್ಕಿ' ಅನ್ನುತ್ತಾರೆ. ಬರೀ ಅಕ್ಕಿ ಅನ್ನುವುದಿಲ್ಲ. ಬಿಳಿ ಬಣ್ಣವನ್ನು ತಿಳಿಬಣ್ಣ(light colour) ಎಂದು ಬಗೆಯಲಾಗುತ್ತೆ. ಅದಕ್ಕೆ ಇದಿರಾಗಿ ಹೇಳಬೇಕಾದಾಗ ಅಂದರೆ ಕಡುಬಣ್ಣ(dark colour) ಎಂದು ಬಳಸಲಾಗುತ್ತದೆ. ಮೇಲೆ ತಿಳಿಸಿದಂತೆ dark/black/ಕಪ್ಪು ಎನ್ನುವುದಕ್ಕೆ 'ಇರ್' ಎಂಬ ಪದ ಬಳಕೆಯಲ್ಲಿದೆ. ಹಾಗಾಗಿ ರಾಗಿ ಎನ್ನುವುದಕ್ಕೆ ಕಪ್ಪಕ್ಕಿ/ಇರಕ್ಕಿ/dark rice ಎಂಬ ಹುರುಳಿದೆ ಎಂದು ಹೇಳಬಹುದು.

ಕೊಸರು : 'ಮೆಟತೀಸಿಸ್' ಎಂದರೆ ಪದಗಳಲ್ಲಿನ ಬರಿಗೆಗಳು/ಉಲಿಕಂತೆಗಳು ತಮ್ಮ ತಾವನ್ನು/ಜಾಗವನ್ನು ಹುರುಳಿನ ವೆತ್ಯಾಸವಾಗದೆ ಬದಲಾಯಿಸುತ್ತವೆ. ಹಾಗೆ ಬದಲಾದಾಗ ಉಲಿಕಂತೆಗಳಲ್ಲಿ ಮಾರ್ಪಾಡಾಗುತ್ತದೆ.
ಎತ್ತುಗೆಗೆ,
      ಇರುಳು(ಕನ್ನಡ) => ರೇಯಿ (ತೆಲುಗು) = night

No comments:

Post a Comment