ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Thursday, September 27, 2012

ಕೋಟೆ

ಬಹಳ ಹಿಂದಿನ ಕಾಲದಿಂದಲೂ ಕೋಟೆ ಕಟ್ಟುವುದು ಎಲ್ಲ ನಡವಳಿಗಳಲ್ಲೂ ಇದೆ. ಕೋಟೆ ಕಟ್ಟುವುದರಿಂದ ಹಗೆಗಳಿಂದ ದಿಡೀರನೆ ಆಗುವ ದಾಳಿಯನ್ನು ತಪ್ಪಿಸಬಹುದು ಎಂಬುದೇ ಇಲ್ಲಿ ಮುಕ್ಯ ಕಾರಣ. ಲ್ಯಾಟಿನ್ನಿನ fortis ಎಂಬ ಪದದಿಂದ ಇಂಗ್ಲಿಶಿನ fort ಪದ ಬಂದಿದೆ. ಲ್ಯಾಟಿನ್ನಿನಲ್ಲಿ fortis ಎಂದರೆ ಬಲಶಾಲಿ, ಗಟ್ಟಿ ಎಂಬ ಹುರುಳು ಹೊಂದಿದೆ. ಆಗಿನ ಮಂದಿ ಇಲ್ಲವೆ ಅರಸರು ಕೋಟೆ ಎಂದರೆ ಬಲ ಎನ್ನುವಶ್ಟರ ಮಟ್ಟಿಗೆ ಅವರ ಅರಿವು ಇತ್ತು ಎಂಬುದು ಇದರಿಂದ ತಿಳಿಯುತ್ತದೆ. ಆದರೆ ಕನ್ನಡದಲ್ಲಿ ಕೋಟೆ ಎಂಬ ಪದ ಬರುವುದಕ್ಕೆ ಬೇರೆ ದೂಸರುಗಳು ಕಾಣುತ್ತವೆ.

ಕನ್ನಡದಲ್ಲಿ ಕುಡು, ಕುಡ, ಕುಡಿ ಎಂಬ ಪದಗಳು ಮತ್ತು ಇವುಗಳು ಉಲಿಕದಲಿನ(metathesis) ರೂಪಗಳು ಡೊಂಕ, ಡೊಂಕು ಇವೆಲ್ಲವು ವಕ್ರತನವನ್ನು ಕುರಿತಾದ ಪದಗಳಾಗಿವೆ. ಕುಡು, ಕುಡ, ಕುಡಿ Ka. kuḍu, kuḍa, kuḍi state of being crooked, bent, hooked, or tortuous; ḍoṅku to bend, be crooked; ಡೊಂಕು ḍoṅku, ಡೊಂಕ ḍoṅka state of being bent, curved, crooked; crookedness, a bend, a curve [DED 2054]

ಎಲ್ಲಿ ಡೊಂಕುತನ/ವಕ್ರತನವಿರುತ್ತದೆಯೊ ಅಲ್ಲಿ ’ಮೂಲೆ’ಗಳು ಉಂಟಾಗಲು ಸಾದ್ಯವಿದೆ. ಈ ’ಮೂಲೆ’ಗಳಿಗೆ ಇರುವ ಇನ್ನೊಂದು ಪದವೇ ’ಕೋಣ’, ಕೋನ. ಇನ್ನು ಕುಡು=>ಕೋಣ=>ಕೋನ ಆಗಿರುವುದರಲ್ಲಿ ಅಂತಹ ಅಚ್ಚರಿಯೇನಿಲ್ಲ. ’ಕುಡು’ ಯಲ್ಲಿರುವ ’ಉ’ಕಾರವು ’ಕೋಣ’ದ ಕೋ ಎನ್ನುವಲ್ಲಿ ’ಓ’ ಕಾರವಾಗಿದೆ. ಉಕಾರ ಮತ್ತು ಓಕಾರವಾಗುವುದು ಕನ್ನಡದ ಉಲಿಯೊಲವಿನಲ್ಲಿ ಸಹಜವೇ ಆಗಿದೆ. ಇನ್ನು ಡ ಮತ್ತು ಣ ಒಂದೇ ಗುಂಪಿಗೆ/ವರ್ಗಕ್ಕೆ ಅಂದರೆ ’ಟ’ ಗುಂಪಿಗೆ ಸೇರಿದ ಉಲಿಗಳು/ಬರಿಗೆಗಳು. ಕೋಣ್, ಕೋಣ, ಕೋನ Ka. kōṇ, kōṇa, kōṇe, kōna angle, corner Ta. kōṇ crookedness, angle, crossness of disposition [DED 2209]

ಕೋಟೆ ಅಂದರೆ ಹಲವು ಗೋಡೆಗಳನ್ನು ಕೂಡಿಸಿ ಕಟ್ಟಿದ ಒಂದು ಕಟ್ಟೋಣ. ಒಂದೇ ಒಂದು ಗೋಡೆ ಕಟ್ಟಿದರೆ ಅದು ಕೋಟೆಯಾಗುವುದಿಲ್ಲ. ಅದು ಒಂದು ಗೊತ್ತಾದ ಪ್ರದೇಶದ ಸುತ್ತಲೂ ತಲೆಯೆತ್ತಿರಬೇಕು ಆಗಲೆ ಅದು ಕೋಟೆ ಎನಿಸಿಕೊಳ್ಳುವುದು. ಹಾಗಾದರೆ ಸುತ್ತಲಿರುವ ಈ ಗೋಡೆಗಳು ಕೂಡುವ ಜಾಗ ’ಮೂಲೆ’ಗಳನ್ನು ಇಲ್ಲವೆ ’ಕೋನ’ಗಳನ್ನು ಉಂಟುಮಾಡುತ್ತವೆ. ವಿಕಿಪಿಡಿಯಾದಲ್ಲಿ ಕೊಟ್ಟಿರುವ ಕೋಟೆಗಳ ತಿಟ್ಟಗಳನ್ನು ನೋಡಿದರೆ ಗೊತ್ತಾಗುವುದು ಎಲ್ಲಾ ಕೋಟೆಗಳಲ್ಲಿ ಎದ್ದು ಕಾಣುವುದು ಈ ಮೂಲೆಗಳೇ ಅಂದರೆ ಕೋನಗಳೇ/ಕೋಣಗಳೇ.

ಕನ್ನಡದಲ್ಲಿ ’ಕೋ’/ಕು ಎಂಬ ಉಲಿಗಳೇ ಡೊಂಕು/ವಕ್ರ ಎಂಬ ಹುರುಳಗಳನ್ನು ಹೊಂದಿದೆ. ಆದರೆ ಬಳಕೆಯ ನೆಲೆಯಲ್ಲಿ ಇದಕ್ಕೆ
ಹಲವು ರೂಪಗಳಿವೆ. ಹಲವು ರೂಪಗಳಿಗೆ ಹಲವು ಹುರುಳುಗಳನ್ನು ತಳಕು ಹಾಕಲಾಗಿದೆ. ಈ ಹಲವು ಹುರುಳುಗಳನ್ನು ಕಿಟ್ಟೆಲ್ ಅವರ Kannada-English Dictionary F.Kittel, 1894 ಇದರಿಂದ ಎತ್ತಿ ಇಲ್ಲಿ ಕೊಡಲಾಗಿದೆ

ಕೊಂಕು(ಕೊಂಕುನುಡಿ, ಅಡ್ದ ಮಾತು, ವಕ್ರ ಮಾತು)

ಕೊಂಕುಳ್(ಕಂಕುಳು, ಅಂದರೆ ಮೂಲೆ - ಹೆಗಲಿನ ಬಾಗವು ಬಾಗಿ ತೋಳುಗಳಾಗಿ ಮಾರ್ಪಡುವ ಜಾಗ).

ಕುಡುಗೋಲು/ಕುಡುಗ್ಲು ( ಒಂದು ಬಗೆಯ್ ಆಯುದ , ಇದರಲ್ಲಿ ಕುಯ್ಯುವ/ಹರಿತವಾಗಿರುವ ಬಾಗ ಡೊಂಕಾಗಿರುತ್ತದೆ, ಬೆಳೆಗಳನ್ನು ಇಲ್ಲವೆ ಹುಲ್ಲನ್ನು ಕುಯ್ಯಲು ಬಳಸುವ ಸಾದನ)

ಕೊಂಕಿ, ಕೊಕ್ಕೆ (hook, ಏನನ್ನಾದರು ನೇತು ಹಾಕಲು ಈ ಕೊಕ್ಕೆಗಳು ಬೇಕು)

ಕೊಂಗು(ಅಂಕುಡೊಂಕಾದ ಬಂಡೆ/ಬೆಟ್ಟಗಳನ್ನು ಹೊಂದಿರುವ ನಾಡು),

ಕೊಡಗು( ಅಂಕು ಡೊಂಕಾದ ಬೆಟ್ಟಗುಡ್ಡಗಳನಾಡು),

ಕೋಡು/ಕೊಂಬು (ಹಸುವಿನ ಕೊಂಬು),

ಕೋಡಿ(ಅಂಕು ಡೊಂಕಾಗಿ ಹರಿಯುವಿಕೆ),

ಕೊಮೆ/ಕೊಂಬೆ ( ಮರದ ಕಾಂಡದ ಕವಲುಗಳು, branch of a tree)

ಕೊಕ್ಕು (beak, ಹಕ್ಕಿಗಳ ಬಾಗಿರುವ/ಡೊಂಕಾಗಿರುವ ಮೂತಿಯ ತುದಿ)

ಕೊಗ್ಗ ( ಡೊಂಕು, ಡೊಂಕು ದನಿಯ ಮನುಶ್ಯ)

ಕೊಂಚೆ ( a rampart, an enclosure - ಇದು ಕೋಟೆಯ ಹುರುಳನ್ನೇ ಹೊಂದಿದೆ)

ಕೊಡಕು (crookedness, ಡೊಂಕು)

ಕೊಣ್ಡ/ಕೊಂಡ( ಬೆಟ್ಟ, ಪರ್ವತ, mountain ಅಂದರೆ ಅಂಕು ಡೊಂಕಾಗಿರುವುದು), ಕೋತ ( ನೀಲಗಿರಿ ಬೆಟ್ಟದಲ್ಲಿ ವಾಸಿಸುವ)

ಕೊಂಡಿ/ಕೊಣ್ಡಿ(A hook projecting from a awall, a semicircular link ofa padlock ಅಂದರೆ ಡೊಂಕುತನವೇ)

ಕೊನೆ (extremity, point, tip, end, corner ಅಂದರೆ ಮೂಲೆ ಅಂದರೆ ಡೊಂಕುತನವೆ) [DED 2174]

ಕೊಪ್ಪು ( The notched extremity or horn of a bow ಅಂದರೆ ಇದರಲ್ಲು ಡೊಂಕುತನವನ್ನೇ ತೋರುವುದು)

ಕೋಚು/ಕೋಸು( deviation from squarness, as of an awning, wall, road etc ಅಂದರೆ ಡೊಂಕುತನವೆ)

ಕೋಚ/ಕ್ವಾಚ (ವಕ್ರಬುದ್ದಿಯುಳ್ಳವನು), ಕೋಡಂಗಿ, ಕೋತಿ ಇವೆಲ್ಲ ಬುದ್ದಿ/ನಡವಳಿಕೆ ನೆಟ್ಟಗಿಲ್ಲದಿರುವಿಕೆಯನ್ನೇ ಅಂದರೆ ಡೊಂಕನ್ನೇ ತೋರುತ್ತದೆ)

ಕೋಮಟಿತನ ( covetousness - ಇದು ಕೂಡ ಬುದ್ದಿ ನೆಟ್ಟಗಿಲ್ಲದಿರುವುದನ್ನ ತೋರುತ್ತದೆ)

ಕೋರೆ ( crookedness ಅಂದರೆ ಡೊಂಕುತನ)

ಗೋಣ್ಟು ( ಮೂಲೆ, a piont of compass)

ಇಶ್ಟೆಲ್ಲ ಪದಗಳನ್ನು ಕೊಟ್ಟ ಮೇಲೆ ಕೋಟೆ ಎಂಬ ಪದ ಅಂಕುಡೊಂಕಾಗಿ ಕಟ್ಟಿರುವ ಒಂದು ಕಟ್ಟೋಣ ಎಂಬು ತಿಳಿಯದೇ ಇರದು. ಕೋಟೆ(a) Ka. kōṭe fort, rampart; (PBh.)ಕೋಂಟೆ kōṇṭe fort.
ಗೋಡೆ(b) Ka. gōḍe wall. [DED 2207]

ಕೋಟೆಯಲ್ಲಿರುವುದು ’ಕ’ ಮತ್ತು ’ಟ’ ಎಂಬ ಕೊರಲಿಸದ ಮುಚ್ಚುಲಿಗಳು. ಇದೆ ಕೊರಲಿಸಿದ ಮುಚ್ಚುಲಿಗಳಾಗಿ ಮಾರ್ಪಾಟುಗೊಂಡಾಗ ಕ->ಗ ಆಗುತ್ತದೆ, ಟ ->ಡ ಆಗುತ್ತದೆ. ಹಾಗಾಗಿ ಕೋಟೆ ಗೋಡೆಯಾಗಿದೆ. ಬಳಕೆಯ ನೆಲೆಯಲ್ಲಿ ಕೋಟೆ ಎಂಬುದು ಹಲವು ಗೋಡೆಗಳಿಂದಾದ ಒಂದು ಕಟ್ಟೋಣ.

ಮನೆಯ ಒಂದು ಮೂಲೆಯೇ ಕೋಣೆ. ಹಾಗಾಗಿ ಕೋಣೆ ಎಂಬುದು ಇಲ್ಲಿ ಮೂಲೆಯ ಹುರುಳನ್ನೇ ಎತ್ತಿ ತೋರುತ್ತದೆ.
ಕೋಣೆ Ka. kōṇe an inner apartment or chamber, a kitchen. [DED 2211]

Tuesday, September 25, 2012

ನಂಟು, ನಂಬು, ನನ್ನಿ

ಈ ಮೂರು ಪದಗಳನ್ನು ಒಟ್ಟಿಗೆ ನೋಡಿದಾಗ ಇವಲ್ಲಿ ಕೆಲವು ಹೋಲಿಕೆಗಳನ್ನು ಗಮನಿಸಬಹುದು. ಅದೇನೆಂದರೆ ಅವೆಲ್ಲವೂ
  * 'ನ' ಎಂಬ ಉಲಿಯಿಂದ/ಬರಿಗೆಯಿಂದ ಸುರುವಾಗುತ್ತವೆ
  *  ಈ ಪದಗಳಲ್ಲಿರುವ ಎರಡನೆ ಉಲಿಯು ಮೂಗುಲಿಯಾಗಿದೆ

ಈ ಪದಗಳನ್ನೇ ಹೀಗೆ ಬಿಡಿಸಿ ಬರೆಯಬಹುದು:-
   ನಣ್-ಟು
   ನಮ್-ಬು
   ನನ್-ನಿ

'ನಣ್'(ನಣ್ಣು) ಎಂಬ ಈ ಬೇರುಪದವೇ ಎಲ್ಲ ಪದಗಳಲ್ಲಿ ಕಾಣುವುದು. ಹಾಗಾದರೆ ಈ ಎಲ್ಲ ಪದಗಳು 'ನಣ್ಣು' ಎಂಬ ಬೇರಿನಿಂದ ಬಂದಿದೆಯೇ ಎಂಬುದನ್ನು ನೋಡೋಣ.

ತಮಿಳಿನಲ್ಲಿ ನಣ್ಣು ಎಂಬುದಕ್ಕೆ ಈ ಹುರುಳನ್ನು ಕೊಡಲಾಗಿದೆ.

ನಣ್ಣು Ta. naṇṇu (naṇṇi-) to draw near, approach, reach, be attached to [DED 3588]
ಅಂದರೆ  ಹತ್ತಿರ ತರು, ಹತ್ತಿರ ಬರು, ಅಂಟಿಕೊಂಡಿರು ಎಂಬ ಹುರುಳುಗಳಿವೆ. ಅದೇ ಹುರುಳು ಕನ್ನಡದಲ್ಲೇ ಇದೆ ಎಂದು ಈ ಕೆಳಗಿನ ಪದಗಳನ್ನು ಮತ್ತು ಹುರುಳುಗಳನ್ನು ನೋಡಿದಾಗ ಅನ್ನಿಸದೇ ಇರದು.
ನಣ್ಟು, ನೆಣ್ಟು Ka. naṇṭu, neṇṭu relationship, friendship; ನಣ್ಟ naṇṭa, ನೆಣ್ಟ neṇṭa relative, kinsman, friend; ನಣ್ಟತನ naṇṭatana, ನೆಣ್ಟತನ neṇṭatana, ನೆಣ್ಟರ್ತನ naṇṭartana, ನಣ್ಟಸ್ತಿಕೆ naṇṭastike, ನಣ್ಟಿಕೆ naṇṭike relationship; ನಣ್ಪುnaṇpu, ನೆಣ್ಪು neṇpu friendship, affection, love, favour, confidential relationship, familiarity, intimacy, relationship, delightfulness, charm, pleasantness, agreeability [DED 3588]

ಹಾಗಾದರೆ ನಣ್ಟ(ನಣ್+ಟ) ಅಂದರೆ 'ಹತ್ತಿರದವರು'. ಅದು ನೆತ್ತರಿನ ಮೂಲಕ ಹತ್ತಿರವಾದವರು (ಅಂದರೆ ಅಣ್ಣ, ತಮ್ಮ, ಅಕ್ಕ, ತಂಗಿ, ಅಮ್ಮ, ಅಪ್ಪ, ಚಿಕ್ಕಪ್ಪ, ಚಿಕ್ಕಮ್ಮ, ಸೋದರತ್ತೆ, ಸೋದರಮಾವ ಎಂಬ ರಕ್ತ ಸಂಬಂದಿಗಳು) ಇಲ್ಲವೆ ಗೆಳೆತನದ ಮೂಲಕ ಹತ್ತಿರವಾದವರು, ಹತ್ತಿರಬಂದವರು. ಯಾವಾಗಲೂ ದೂರದಲ್ಲಿರುವ ಆಳಿನ(ವ್ಯಕ್ತಿಯ)  ಬಗ್ಗೆ ಅಶ್ಟು ಒಲವು, ಅಕ್ಕರೆ ಮತ್ತು ನಂಬಿಕೆ ಬರುವುದಿಲ್ಲ. ಹತ್ತಿರದಲ್ಲಿರುವವರ ಮೇಲೆಯೇ ಒಲವು, ಗೆಳೆತನ, ನಂಬಿಕೆ ಹೆಚ್ಚು. ಹಾಗಾಗಿ ಹತ್ತಿರವಾಗುವುದನ್ನೇ 'ನಣ್-ಟು' ಎಂದು ಹುರುಳಾರೆ ಕರೆಯಲಾಗಿದೆ. ಹತ್ತಿರವಾಗುವವರನ್ನು 'ನಂಟರು' ಎಂದು ಕರೆಯಲಾಗಿದೆ.

ಮನುಶ್ಯನಿಗೆ ಕಶ್ಟ ಬಂದಾಗ ನೆರವಾಗುವವರು ಇಲ್ಲವೆ ನೆರವು ಕೇಳುವುದು ಈ ನಂಟರನ್ನೇ. ನಲಿವಿನ ಹೊತ್ತಿನಲ್ಲೂ ಆ ನಲಿವಿನ ಪಾಲುದಾರರು ಈ ನಂಟರೇ(ಹತ್ತಿರದವರೆ). ಹಾಗಾಗಿ, ನಂಟರ ಮೇಲೆಯೇ ನಂಬಿಕೆ ಇರಿಸಲಾಗುತ್ತದೆ. 'ಏನೇ ಕಶ್ಟ ಬಂದರೂ ನಮ್ಮ ಅಣ್ಣ ಇದ್ದಾನೆ' ಇಲ್ಲವೆ 'ನಮ್ಮ ಚಿಕ್ಕಪ್ಪ ಇದ್ದಾರೆ' ಹೀಗೆ ಸಾಮಾನ್ಯವಾಗಿ ಮಂದಿ ಹೇಳುವುದುಂಟು. ಇವೆಲ್ಲವೂ 'ಹತ್ತಿರದವರ' ಅಂದರೆ ನಣ್-ಟರ ಮೇಲೆ ಇರಿಸಿರುವ 'ನಮ್-ಬಿಕೆ'ಯಿಂದಲೇ. ಹಾಗಾಗಿ ನಂಟರಿಗೂ ಮತ್ತು ನಂಬಿಕೆಗೂ ತಳಕು ಹಾಕಲಾಗುತ್ತದೆ. ನಂಬಿಕೆಯಂದರೇನೆ ನಂಟರು ಎನ್ನುವಶ್ಟರ ಮಟ್ಟಿಗೆ ಸಮಾಜದಲ್ಲಿ ಇದು ಬೇರೂರಿದೆ. ಹಾಗಾದರೆ ನಂಬು, ನಂಬಿಕೆ ಎಂಬ ಪದಗಳು ಕೂಡ 'ನಣ್-ಟು' ಎಂಬ ಪದದಲ್ಲಿರುವ ನಣ್  ಇಂದಾನೆ ಬಂದಿರಬಹುದೆಂದು ಹೇಳಲು ಬರುತ್ತದೆ. ನಂಬು Ka. nambu, (K.2) ನೆಮ್ಮು nemmu to confide, trust, believe; ನಂಬಿಕೆ nambike, ನಂಬಿಗೆ nambige,  nembuge confidence [DED 3600]

ಯಾರ ಮೇಲೆ  ಒಲವು(ಪ್ರೀತಿ) ಇದೆಯೋ, ಯಾರ ಮೇಲೆ ನಂಬಿಕೆಯಿದೆಯೊ ಅವರು ಎಂದು ಸುಳ್ಳು-ಸಟೆ ಆಡುವುದಿಲ್ಲ. ಅಂದರೆ ಒಲವು, ನಂಬಿಕೆ ಗಳಿಸುವೆಡೆ ಸತ್ಯ/ದಿಟವೂ ಇರಲೇಬೇಕಾಗುತ್ತದೆ. ಅಂದರೆ 'ನನ್-ನಿ'(truth) ಇರಲೇಬೇಕಾಗುತ್ತದೆ. ಸತ್ಯ/ದಿಟ ಇಲ್ಲದೆಡೆ ಒಲವು ಮೂಡುವುದಿಲ್ಲ. ಮೂಡಿದರು ಅದು ಹಲಗಾಲ ಉಳಿಯುವುದಿಲ್ಲ. ಹಾಗೆ ನೋಡಿದರೆ ನನ್ನಿ ಎಂಬುದಕ್ಕೆ ಒಲವು,ಅಕ್ಕರೆ ಮತ್ತು ದಿಟ ಎಂಬ ಹುರುಳುಗಳಿವೆ. ಇವೆಲ್ಲ ನೋಡಿದಾಗ ನಣ್ಪು, ನಂಬಿಕೆ ಮತ್ತು ನನ್ನಿ ಇವೆಲ್ಲ ಒಂದೇ ಪದದಿಂದ ಬಂದು, ಸಮಾಜದ ನೆಲೆಯಲ್ಲಿ ಪಡೆದುಕೊಂಡ ಬೇರೆ ಬೇರೆ ರೂಪಗಳು(manifestations) ಎಂದು ಹೇಳಬಹುದು. ನನ್ನಿ Ka. nanni truth, love, affection [DED 3610]

Thursday, September 20, 2012

ನೆನ್ನೆ, ಮೊನ್ನೆ, ನಾಳೆ, ನಾಳಿದ್ದು

ಈ ಎಲ್ಲ ಪದಗಳನ್ನು ನೋಡಿದರೆ ತಿಳಿಯುವುದು ಇವುಗಳು ಯಾವುದೊ ಒಂದು ಪದದಿಂದ ಆಗಿರುವುದೆಂದು. ಬನ್ನಿ ನೋಡೋಣ

೧. ನೆರೆ+ನಾಳು = ನೆರ್ನಾಳು = ನೆನ್ನಾಳು => ನೆನ್ನೆ
೨. ಮುನ್+ನಾಳು = ಮುನ್ನಾಳು => ಮುನ್ನೆ=> ಮೊನ್ನೆ
೩. ಎದುರು+ನಾಳು = ನಾಳು+ಎದುರು => ನಾಳೆದುರು => ನಾಳೆ
೪. ನಾಳು+ಇರ್ದು = ನಾಳಿರ್ದು = ನಾಳಿದ್ದು => ನಾಡಿದ್ದು => ನಾಡದು

ಈ ಎಲ್ಲ ಪದಗಳಲ್ಲಿ ಬಂದಿರುವುದು ’ನಾಳು’ ಎಂಬುದು. ಈ ಪದಕ್ಕೆ ದಿನ, ದಿವಸ, ಹಗಲು, ಹೊತ್ತು ಎಂಬು ಹುರುಳುಗಳಿವೆ. Ka. nāḷ day, time; [DED 3656]

ಈಗ ಒಂದೊಂದಾಗಿ ನೋಡೋಣ:-

೧. ನೆನ್ನೆ
ನೆರೆನಾಳು ಎಂಬುವಲ್ಲಿರುವ ನೆರೆ ಮತ್ತು ನಾಳು ಎಂಬೆರಡು ಪದಗಳಿವೆ. ನಾಳು ಎಂಬುದಕ್ಕೆ ಈಗಾಗಲೆ ಹುರುಳನ್ನು ಕೊಡಲಾಗಿದೆ. ನೆರೆ ಎಂಬುದಕ್ಕೆ ಹತ್ತಿರ, ಅಕ್ಕಪಕ್ಕ ಎಂಬ ಹುರುಳುಗಳಿವೆ. Ka. nere n. adjoining, proximity, neighbourhood [DED 3770] .ಅಂದರೆ ಅಕ್ಕಪಕ್ಕದ ದಿನ ಅಂತಾಯಿತು. ಅಕ್ಕಪಕ್ಕದ ದಿನದಲ್ಲಿ ಒಂದನ್ನು ತೆಗೆದುಕೊಂಡರೆ ’ಹಿಂದೆ ಹೋದ ದಿನ’, ಹಿಂದಿನ ನಾಳು ಎಂದಾಯಿತು. ಇದನ್ನೇ ಅಲ್ಲವ ’ನೆನ್ನೆ’/'ನಿನ್ನೆ’ ಎನ್ನುವುದು. ಇಲ್ಲಿ ನೆನ್ನೆ=> ನಿನ್ನೆ ಆಗಿರುವುದರಲ್ಲಿ ಅಂತಹ ಅಚ್ಚರಿಯೇನು ಇಲ್ಲ. ನೆ ಮತ್ತು ನಿ ಯಲ್ಲಿರುವುದು ಎ ಮತ್ತು ಇ ಎಂಬ ತೆರೆಯುಲಿಗಳು. ಎ ಮತ್ತು ಇ ತೆರೆಯುಲಿಗಳು ’ಯ’ ಗುಂಪಿಗೆ ಸೇರಿವೆ. ಹೀಗೆ ಆಗುವುದು ಕನ್ನಡಕ್ಕೆ ತೀರ ಸಹಜ ಎನ್ನಬಹುದು. Ka. ninne yesterday, time lately passed [DED 3758]

. ಮೊನ್ನೆ
ಮುನ್ನಾಳು ಎಂಬುವಲ್ಲಿರುವ ಮುನ್ ಎಂಬ ಒಟ್ಟಿಗೆ ಈ ಹುರುಳುಗಳನ್ನು ಕೊಡಲಾಗಿದೆ. Ka. mun (muṃ), munnu that which is before, in front of, or preceding in space, that which is preceding in time, that which is towards a place (etc.), in front or onward, that which is following [DED 5020 (a)]
ಇದರಲ್ಲಿ ಗಮನಿಸಬೇಕಾಗಿರುವುದು that which is preceding in time ಎಂಬ ಹುರುಳನ್ನು. ಮುನ್ ಎಂಬುದು ’ಹೊತ್ತಿನಲ್ಲಿ ಬರುವ ಮುನ್ತನ’ಕ್ಕೊ ಬಳಸಬಹುದು. ಅಂದರೆ ಮುಂಚೆಯೇ ಬಂದ ನಾಳು, ಮುಂಚೆಯೇ ಆಗಿ ಹೋದ ನಾಳು ಎಂಬ ಹುರುಳನ್ನು ಇದು ಕೊಡುತ್ತದೆ. ಇಲ್ಲಿರುವ ಮುನ್ನೆ => ಮೊನ್ನೆ ಆಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ ಯಾಕಂದರೆ ಮು ಮತ್ತು ಮೊ ದಲ್ಲಿರುವ ’ಉ’ ಮತ್ತು ’ಒ’ ಎಂಬ ತೆರೆಯುಲಿಗಳು ’ವ’ ಗುಂಪಿಗೆ ಸೇರಿವೆ. Ka. monne day before yesterday; the other day, lately [DED 5020 (b)]

. ನಾಳೆ
ಎದುರ್ನಾಳು, ನಾಳೆದುರು ಎಂಬ ಕೂಡುಪದಗಳಲ್ಲಿರುವುದು ಎದುರು ಎಂಬುದಕ್ಕೆ ಈ ಹುರುಳುಗಳನ್ನು ಕೊಡಲಾಗಿದೆ. Ka. idir, idaru, iduru, edaru, edir, edur that which is opposite, the front, in front, ಇದರಲ್ಲಿ the front, in front ಎಂಬ ಹುರುಳುಗಳು ಇಲ್ಲಿ ಹೊಂದುತ್ತವೆ. ನಾಳೆ ಎಂದರೆ ಎದುರು ಇರುವ ನಾಳು, ಎದುರ್ಗೊಳ್ಳಬೇಕಾದ ನಾಳು. ಈವೊತ್ತಿನಲ್ಲಿ ನಿಂತು ನೋಡಿದಾಗ ನಾಳೆ ಎಂಬುದರ ಈ ಹುರುಳು ತಿಳಿಯಾಗುತ್ತದೆ/ಸ್ಪಶ್ಟವಾಗುತ್ತದೆ. ಆದರೆ ಇಲ್ಲಿ ಗಮನಿಸಬೇಕಾಗಿರುವುದು:-

ಎದುರ್+ನಾಳು = ಎದುರ್ನಾಳು => ಎನ್ನಾಳು ಅಂತ ಆಗಬೇಕಾಗಿತ್ತು ಆದರೆ

ನಾಳು +ಎದುರ್ = ನಾಳೆದುರು => ನಾಳೆ ಅಂತ ಆಗಿದ್ದೇಕೆ ಎಂಬುದಕ್ಕೆ ಸರಿಯಾದ ಉತ್ತರ ಹೇಳಲಾಗದು. ಪದಗಳು ತಮ್ಮ ಹುಟ್ಟು ಪಡೆಯುವಲ್ಲಿ ಎಕ್ಕಸೆಕ್ಕತನ(randomness) ಹೊಂದಿಯೇ ಇರುತ್ತವೆ. ಅದಕ್ಕೆ ನುಡಿಯರಿಗರು ಹೀಗೆ ಹೇಳುತ್ತಾರೆ - ನುಡಿಯರಿಮೆಯಲ್ಲಿ ಕಟ್ಟಲೆಯಂಬುದಿಲ್ಲ, ಇರುವುದೆಲ್ಲ ಒಲವುಗಳೇ. ಇಲ್ಲವೆ ಕಟ್ಟಲೆಯೆಂಬುದಿದ್ದರೆ ಅದಕ್ಕೆ ಹೊರತುಗಳು ಇದ್ದೇ ಇರುತ್ತವೆ. ನಾಳೆ ಎಂಬುದು ಆದಕ್ಕೆ ಸರಿಯಾದ ಎತ್ತುಗೆಯಾಗಿದೆ. Ka. nāḷe the very next day, tomorrow; nāḍadu, nāḍidu, nāḍiddu, nāḷiddu, nāḷirdu the day after tomorrow. [DED 3656]

. ನಾಳಿದ್ದು
ಇದಕ್ಕೆ ನಾಡದು, ನಾಡಿದು, ನಾಡಿದ್ದು, ನಾಳಿರ್ದು ಎಂಬ ಹಲವು ರೂಪಗಳಿವೆ. ಇದರಲ್ಲಿ ನಾಳಿರ್ದು ಎಂಬ ಪದವೇ ಹಳೆಯದು ಎಂದು ತೋರುತ್ತದೆ ಯಾಕಂದರೆ,

ನಾಳು+ಇರ್-ದು ಎಂಬುವಲ್ಲಿರುವ ’ಇರ್’ ಎಂಬ ಪದಕ್ಕೆ ಕಿಟ್ಟೆಲ್ ಅವರು ತಮ್ಮ ಪದನೆರಕೆಯಲ್ಲಿ ’pulling, dragging near or away' ಎಂಬ ಹುರುಳುಗಳನ್ನು ಕೊಟ್ಟಿದ್ದಾರೆ. ಈ ’ಇರ್’ ಎಂಬ ಪದವು ಹಳಗನ್ನಡದ ’ಇೞ್’ ಎಂಬ ಪದದಿಂದ ಬಂದಿದೆ. ಹಾಗಾದರೆ ನಾಳೆಯೆಡೆಗೆ ತೆವಳಿಕೊಂಡು ಬರುತ್ತಿರುವ ನಾಳು, ನಾಳೆಗೆ ಹತ್ತಿರದ ನಾಳು, ನಾಳೆಯ ಕಡೆಗೆ ಎಳೆಯುತ್ತಿರುವ ನಾಳು, ನಾಳಿರ್-ದು ಎಂದು ಅರಿತುಕೊಳ್ಳಬಹುದು. ಇನ್ನು ’ರ್’ಕಾರವಾದ ಮೇಲೆ ’ತ’ಕಾರ/’ದ’ಕಾರ ಬಂದೆಡೆಯಲ್ಲಿ ’ರ’ಕಾರವು ಬಿದ್ದು ಹೋಗಿ ತ್/ದ್ ಇಮ್ಮಡಿಯಾಗುವುದು ಹೊಸಗಾಲದ ಕನ್ನಡದ ಒಲವುಗಳಲ್ಲಿ ಒಂದು. ಇದಕ್ಕೆ ಕೆಲವು ಎತ್ತುಗೆಗಳನ್ನು ನೋಡಬಹುದು:-
೧. ಬರ್-ತಾ ಇದೆ => ಬತ್ತಾ ಇದೆ
೨. ಅರ್ತಿಗೆ => ಅತ್ತಿಗೆ
೩. ಬಿರ್ದಿನ => ಬಿದ್ದಿನ

ಹಾಗಾಗಿ ನಾಳಿರ್ದು => ನಾಳಿದ್ದು ಆಗಿರುವುದರಲ್ಲಿ ಅಚ್ಚರಿಯೇನಿಲ್ಲ. Ka. nāḍadu, nāḍidu, nāḍiddu, nāḷiddu, nāḷirdu the day after tomorrow. [DED 3656]

ಇನ್ನು ನಾಡದು, ನಾಡಿದ್ದು, ನಾಡಿದು ಅಂದರೆ ಳ ಕಾರ ಡ ಕಾರ(ಇಲ್ಲವೆ ಣ ಕಾರ) ಕ್ಕೆ ತಿರುಗಿರುವುದು. ಇದನ್ನು ನಾವು ಕನ್ನಡ ನುಡಿಹಿನ್ನಡವಳಿ(ನುಡಿಚರಿತ್ರೆ)ಯಲ್ಲಿ ಹೆಚ್ಚು ನೋಡಬಹುದು:-
೧. ನೊಳ => ನೊಣ
೨. ಕಾಳು => ಕಾಡು (ಕಾಳ್ಗಿಚ್ಚು => ಕಾಡ್ಗಿಚ್ಚು)
೩. ಕುಳಿರ್ => ಕುಣ್-ಡ್-ರು ( sit down)

ಕೊಸರು: ನೆನ್ನೆ(<ನೆನ್ನಾಳು), ಮೊನ್ನೆ(<ಮುನ್ನಾಳು) ಎಂಬುವಲ್ಲಿ 'ಳ' ಕಾರ ಬಿದ್ದುಹೋಗಿರುವುದು ಅಚ್ಚರಿಯೇನಲ್ಲ.  ಕನ್ನಡದ ಕೆಲವು ಒಳನುಡಿಗಳಲ್ಲಿ ಹೀಗೆ ಆಗಿರುವುದರ ಕುರಿತು ಇಲ್ಲೊಂದು ಮಿಂಬರಹ ಬರೆದಿದ್ದೆ.

ನೆರವು

ಕನ್ನಡದಲ್ಲಿ ಎರಡು ಬೇರೆ ಬೇರೆ ಹುರುಳುಗಳನ್ನು ಕೊಡುವ ’ನೆರವು’ಗಳಿವೆ

೧. ಅವನಿಗೆ ಅವನ ಗೆಳೆಯರ ನೆರವು ಸರಿಯಾದ ಹೊತ್ತಿಗೆ ದೊರೆಯಿತು
೨. ಇವರ ಮದುವೆಯನ್ನು ನೆರವೇರಿಸಲು (ನೆರವು+ಏರಿಸಲು) ನಿಕ್ಕಿಪಡಿಸಲಾಗಿದೆ.

ನೆರವು೧:
ನೆರ, ನೆರವು, ನೆರೆವು Ka. nera, neravu, nerevu being next to, nearness, joining, assistance; ನೆರಪು ನೆರಹು ನೆರಯಿಸು, ನೆರಸು, ನೆರೆಪು, ನೆರೆವು nerapu, nerahu, nerayisu, nerasu, nerepu, nerevu to bring or put together, join, collect  [DED 3770]
ಇದರಿಂದ ತಿಳಿಯುವುದೇನೆಂದರೆ ನೆರವು ಅಂದರೆ ಒಂದು ಗೂಡಿಸುವುದು, ಒಂದು ಕಡೆ ಜೋಡಿಸುವುದು. ಆದರೆ ಏನನ್ನು ಜೋಡೀಸುವುದು? ಅದಕ್ಕೆ ಉತ್ತರ ’ಕಯ್ ಜೋಡಿಸುವುದು’. ನೆರವು ಅಂದರೂ ಒಂದೇ ಕಯ್ ಜೋಡಿಸು/ಕೂಡಿಸು ಅಂದರೂ ಒಂದೇ. ಯಾವುದೇ ಕೆಲಸ ಮಾಡುವಾಗ ’ಕಯ್ಗಳನ್ನು ಜೋಡಿಸುವುದು’ ಮುಕ್ಯ. ಹೆಚ್ಚು ಕಯ್ಗಳು ಕೂಡಿದರೆ ಕೆಲಸವು ಸಲೀಸಾಗಿ, ಬೇಗ ಆಗುತ್ತದೆ. ಹಾಗಾಗಿ ನೆರವು ಕೊಡು ಎಂದರೆ ಕಯ್ ಜೋಡಿಸು, ಕಯ್ ಹತ್ತಿರ ತರುವುದು ಎಂಬುದೇ ಸರಿಯಾದ ವಿವರಣೆ. ಇದನ್ನೆ DEDಲ್ಲಿ ಕೊಟ್ಟಿರುವ ಈ ಮೇಲಿನ ಹುರುಳುಗಳು ಹೇಳುತ್ತಿವೆ.

 
ನೆರವು ೨:
ನೆಱೆ, Ka. neṟe (neṟed-, neṟad-) to become entire, full, complete, accomplished, ready,perfect, mature, arrive at the age of menstruating, be realized, occur, suffice; n. completeness, maturity, etc.; adv. completely, perfectly; ನೆಱತೆ neṟate fullness, completeness; ನೆಱಪು neṟapu complete; ನೆಱಯಿಸು neṟayisu to make complete, supply;ನೆಱಯಿಸು neṟavu, neṟavaṇige, neṟevaṇige fullness, completeness;ನೆಱೆಯುವಿಕೆ neṟeyuvike menstruation to take place.[DED 3682]
ಇಲ್ಲಿ ಕೊಟ್ಟಿರುವ ಹಾಗೆ ಪೂರ್ಣತೆ, ಪೂರ್ಣವಾಗುವುದು, ತುಂಬುವುದು ಎಂಬ ಹುರುಳುಗಳನ್ನು ಹೊಂದಿದೆ.

ಆದರೆ DED 3682 ಮತ್ತು DED 3770 ಇವುಗಳನ್ನು ನಂಟಿಸಲಾಗಿದೆ ( DED 3672 ನೋಡಿ). ಅಂದರೆ ನೆರವು೧ ಮತ್ತು ನೆರವು೨ ಇವುಗಳ ನಡುವೆ ನಂಟು ಇದೆ ಎಂದು ಬಗೆಯಬಹುದು. ಅಂದರೆ ಒಂದು ಕೆಲಸವನ್ನು ಪೂರ್ಣಗೊಳಿಸಬೇಕಾದರೆ (ನೆರವು೨) ಹಲವು ಮಂದಿಯ ಸಹಾಯ(ನೆರವು೧) ಬೇಕೇ ಬೇಕಾಗುತ್ತದೆ. ಕೆಲಸ ನೆರವೇರಿಸುವುದಕ್ಕೂ( ನೆರವು೨) ಬೇರೆಯವರಿಂದ ನೆರವು(ನೆರವು೧) ಪಡೆದುಕೊಳ್ಳುವುದಕ್ಕೂ ನಂಟಿದೆ ಅಂದ ಹಾಗಾಯಿತು.

ಇದರಿಂದ ತಿಳಿಯುವುದೇನೆಂದರೆ ’ಬಳಕೆಯ ನೆಲೆ’ಯಲ್ಲಿರುವ ನಂಟುಗಳು (ಅಂದರೆ ಕೆಲಸ ಪೂರ್ಣಗೊಳಿಸುವುದು ಮತ್ತು ಕೆಲಸಕ್ಕೆ ನೆರವು ತೆಗೆದುಕೊಳ್ಳುವುದು ನಂಟಿಕೊಂಡಿವೆ) ಆಯಾ ಪದಗಳ ಹುರುಳುಗಳನ್ನೂ ನಂಟಿಸುತ್ತವೆ. ಬಳಕೆಯ ನೆಲೆಯಲ್ಲಿ ಹೀಗೆ ಪದಗಳಿಗೆ ಹುರುಳುಗಳನ್ನು ಬೆಸೆಯುವ ಒಂದು ಕ್ರಮ/ಒಲವು ತಾನಾಗಿಯೇ ಬೆಳೆದುಬಂದಿದೆ. ಈ ಒಲವುಗಳನ್ನು ತಿಳಿಯುವುದರಿಂದ ಪದಗಳನ್ನು ಹುಟ್ಟಿಸುವಾಗ ನೆರವಾಗಬಲ್ಲುವು ಅಲ್ಲದೆ ಹುಟ್ಟಿಸುವ ಪದಗಳು ಬಳಕೆಯ ನೆಲೆಗೆ ಹೆಚ್ಚು ಹೊಂದಿಕೊಳ್ಳಬಹುದು. ಇದರಿಂದ ಹುಟ್ಟಿಸಿದ ಪದಗಳು ಚೆನ್ನಾಗಿ ನೆಲೆಗೊಳ್ಳಬಹುದು.

ಮಲೆಕುಡಿಯ

ಮಲೆಕುಡಿಯರು ಕರ್ನಾಟಕದ ತೆಂಪಡುವಣ ಬೆಟ್ಟಗಳಲ್ಲಿ ನೆಲೆಸಿರುವ ರಯ್ತರು. ಅವರಿಗೆ ಆ ಹೆಸರು ಬರಲು
ಕಾರಣವೇನು ಎಂದು ನೋಡಿದಾಗ

ಮಲೆಕುಡಿಯ = ಮಲೆ + ಕುಡಿಯ = ಬೆಟ್ಟ + ಆರಂಬಕಾರ , ಅಂದರೆ ಬೆಟ್ಟಪ್ರದೇಶಗಳಲ್ಲಿ ಆರಂಬವನ್ನು
(ಬೇಸಾಯವನ್ನು) ಮಾಡುವವರೆ ಮಲೆಕುಡಿಯರು.

ಒಕ್ಕಲಾಗಿ, ಉಳುಮೆ/ಆರಂಬ ಮಾಡುವವರರೆಲ್ಲರೂ ಒಕ್ಕಲಿಗರೇ/ಕುಡಿಯರೇ. ಆದರೂ ಇವರು ಬೆಟ್ಟ
ಪ್ರದೇಶಗಳಲ್ಲಿ ಉಳುಮೆ ಮಾಡುವುದರಿಂದ ಇವರಿಗೆ 'ಮಲೆ' ಎಂಬುದು ಪರಿಚೆ/ಗುಣ ಪದವಾಗಿ
ಸೇರಿಕೊಂಡಿದೆ. ಹಾಗಾಗಿ ಇವರ ಕುಳದ ಹೆಸರು 'ಮಲೆಕುಡಿಯ' ಎಂದಾಗಿದೆ.

ಮಲೆ
Ka. male mountain, forest;[DED 4742]

ಕುಡಿಯ
Ka. kuḍiya, kuḍu
śūdra, farmer [DED 1655]
 

Tuesday, September 11, 2012

ತಮಿಳು

  ನಮಗೆ ನಾವೇ ಹೆಸರು ಇಟ್ಟುಕೊಳ್ಳುವುದಿಲ್ಲ. ಇಟ್ಟುಕೊಳ್ಳುವುದು ಬೇಕಾಗಿಲ್ಲ. ಯಾರೇ ಅದರು ಅವರಿಗೆ ತಮ್ಮ ಗುರುತಿಗೆ ಯಾವ ಹೆಸರು ಬೇಕಾಗಿರುವುದಿಲ್ಲ. ಆದರೆ ಬೇರೆಯವರು ಒಂದು ವ್ಯಕ್ತಿಯನ್ನು, ಒಂದು ಗಿಡವನ್ನು, ಒಂದು ಮರವನ್ನು ಇಲ್ಲವೆ ಒಂದು ಊರನ್ನು ಗುರುತಿಸಲು ಒಂದು ಹೆಸರು ಕೊಡಬೇಕಾಗುತ್ತದೆ/ಕೊಡುತ್ತಾರೆ. ಅದಕ್ಕಾಗಿಯೇ 'ಕೊಟ್ಟ ಹೆಸರು'(given name) ಎಂದು ದಾಕಲೆಗಳಲ್ಲಿ ಬಳಸುವುದುಂಟು. ಮಾವಿನ ಮರಕ್ಕೆ ಹಾಗೆ ಕರೆಯುತ್ತಾರೆಂದು ಅದಕ್ಕೇನಾದರೂ ಗೊತ್ತೆ ? ಮನುಶ್ಯನು ತನಗಾಗಿ ಮಾಡಿಕೊಂಡ ಸವ್ಕರ್ಯಗಳಲ್ಲಿ ಇದೂ ಒಂದು.

ಇದೇ ದೂಸರನ್ನು ಮುಂದಿಟ್ಟುಕೊಂಡು 'ತಮಿಳ್' ಎಂಬ ಪದದ ಬಗ್ಗೆ ಉಂಕಿಸಿದಾಗ,

ತೆನ್ + ಮೊಳಗು => ತೆನ್ಮೊಳಗು => ತೆಮ್ಮೊಳಗು => ತೆಮ್ಮೊಳಿ

ತೆನ್/ತೆಂಕು ಅಂದರೆ ಕನ್ನದ, ತಮಿಳೆರಡರಲ್ಲೂ ದಕ್ಶಿಣ, south ಎಂದೇ ಹುರುಳು. ತೀರ ಹಳೆಯ ಕಾಲದಿಂದಲೂ
ಕರ್ನಾಟಕದ ಇಲ್ಲವೇ ಕನ್ನಡಿಗರ ನೆಲದ ದಕ್ಶಿಣಕ್ಕೆ ಇದ್ದುದು ತಮಿಳರೇ. ಮಲೆಯಾಳವೂ ಕೂಡ ತಮಿಳಿನಿಂದ ಒಡೆದು ಬಂದ ಒಂದು ನುಡಿ ಎಂಬುದನ್ನು ಇಲ್ಲಿ ನಾವು ಗಮನಿಸಬಹುದು. ಅಂದರೆ ಈಗಿನ ಕೇರಳ ಮತ್ತು ತಮಿಳು ನಾಡು ಸೇರಿದರೆ ಕರ್ನಾಟಕದಿಂದ ದಕ್ಶಿಣಕ್ಕೆ ಬರೀ ತಮಿಳೇ ಇತ್ತು ಎಂಬುದು ತಿಳಿಯುತ್ತದೆ.
3449 Ta. teṉ south, southern region; Ka. teṅ-gāli south wind; teṅka, teṅkal, teṅku, tembu, ṭeṅkalu, ṭeṅku the south [DED 3449]
ಮೊಳಗು ಎಂದರೆ 'ಇನಿತದ ಪರೆಗಳಿಂದ ಬರುವ ಸದ್ದು'(ಸಂಗೀತ ವಾದ್ಯಗಳ ಸದ್ದು) ಎಂಬ ಹುರುಳು ಇದೆ. ಈಗಲೂ ಕನ್ನಡಿಗರು ತಮಿಳಿನ/ತಮಿಳರ ಬಗ್ಗೆ ತಮ್ಮಲ್ಲಿ ಮಾತಾಡಿಕೊಳ್ಳುವಾಗ 'ಅದೇನೊ ಇಂಡ್ರ, ಪಂಡ್ರ ಅಂತ ತಮಿಳಿನಲ್ಲಿ ಮಾತಾಡಿದ' ಅಂತ ಹೇಳುವುದುಂಟು. ಅಂದರೆ ಕನ್ನಡಿಗರಿಗೆ ತಮಿಳು ತಿಳಿಯದ ಬಾಶೇ . ಆ ಬಾಶೆಯನ್ನು ಗುರುತು ಹಿಡಿದುಕೊಳ್ಳಲು ಅವರು ಗಮನಿಸಿದ್ದು ಕೆಲವು ಸದ್ದುಗಳು (ಇಂಡ್ರ, ಪಂಡ್ರ). ಈ ಸದ್ದುಗಳ ಮೂಲಕವೇ ಅದು ತಮಿಳು ಎಂದು ಅವರು ತಿಳಿದುಕೊಳ್ಳುತ್ತಿದ್ದರು.
Ka. mor̤agu to sound as certain musical instruments, roar, thunder, play certain instruments; n. sound of certain musical instruments, roaring, thunder.
Ta. mor̤i (-v-, -nt-) to say, speak; n. word, saying, language [DED 4989]

ಈಗ ಈ ಎರಡು ಪದಗಳನ್ನು ಕೂಡಿಸಿ ನೋಡಿದರೆ 'ತೆನ್ಮೊಳಿ'. ಅಂದರೆ ಕರ್ನಾಟಕದ ದಕ್ಶಿಣದಿಂದ ಬಂದವರು ಮಾತನಾಡಿಕೊಳ್ಳುವ ಒಂದು ಸದ್ದು ಇಲ್ಲವೆ 'ದಕ್ಶಿಣದ ಸದ್ದು', 'ತೆಂಕಿನ ಸದ್ದು' ಎಂಬುದಾಗಿ  ಕನ್ನಡಿಗರು ತಮಿಳು ನುಡಿಯನ್ನು ಕರೆದಿರಬೇಕು. ಮುಂದೆ ಆದೇ 'ತಮಿಳು' ಎಂದಾಯಿತು.

ತಮಿಳರೇ ತಮ್ಮ ನುಡಿಗೆ ತಮ್+ಮೊಳಿ (=ತನ್ನ ನುಡಿ) ಎಂದು ಹೆಸರು ಇಟ್ಟಿಕೊಂಡಿರಬಹುದಲ್ಲವೆ ಎಂಬ ಕೇಳ್ವಿ ಬರಬಹುದು. ಹಾಗೆ ಆಗಿರುವುದಕ್ಕೆ ಎಡೆ ಕಡಿಮೆ ಏಕೆಂದರೆ 'ತಮ್ಮ ಹೆಸರನ್ನು ತಾವೇ ಇಟ್ಟುಕೊಳ್ಳುವುದಿಲ್ಲ/ಇಟ್ಟುಕೊಳ್ಳಬೇಕಾಗಿಲ್ಲ' ಎಂಬ ತತ್ವಕ್ಕೆ ಅದು ಎದುರಾಗಿದೆ.

Monday, September 10, 2012

ಮಲಗು

ಮಲಗುವುದು ದಿನಾಲು ಮಾಡುವ ಕೆಲಸಗಳಲ್ಲಿ ಬಲು ತಲೆಮೆಯದ್ದು. 'ಮಲಗು' ಎಂಬುದಕ್ಕೆ ಹಲವು ತರದ ಬಳಕೆಗಳಿವೆ

೧. ಅವನು ಕೋಣೆಗೆ ಹೋಗಿ ಮಲಗಿದನು.
೨. ಅದನ್ನು ಮಲಗಿಸಬೇಡ. ನೆಟ್ಟಗೆ ನಿಲ್ಲಿಸು!
೩. ತಾಯಿಯು ತನ್ನ ಮಗುವನ್ನು ಮಲಗಿಸಿದಳು.
೪. ಅವನು ಬಂದು ಇವರ ವ್ಯಾಪಾರವನ್ನು ಮಲಗಿಸಿಬಿಟ್ಟನು.

ಮಲಗುವುದು ಎಂದರೆ ವಾರೆಯಾಗಿ ಒರಗಿಕೊಳ್ಳುವುದು ಇಲ್ಲವೆ ನೆಟ್ಟಗಿದ್ದ ಮಯ್ಯನ್ನು ಒಂದೆಡೆಗೆ ಡೊಂಕಾಗಿ ಬಗ್ಗಿಸಿ ಅದೇ ಸ್ತಿತಿಯಲ್ಲಿ ಇರುವುದು.

ಮಾಲು/ವಾಲು ಎಂಬುದಕ್ಕೆ ವಾಟ, ಡೊಂಕು, ಕೆಳಕ್ಕೆ ಜಾರುವುದು ಎಂಬ ಹುರುಳುಗಳಿವೆ. ಮಲಗಿದಾಗ ಮಯ್ ಕೂಡ ಒಂದೆಡೆಗೆ ವಾಲಿಕೊಳ್ಳುವುದನ್ನು/ಜಾರಿಕೊಳ್ಳುವುದನ್ನು ಗಮನಿಸಬಹುದು.

ಹಾಗಾಗಿ,

ಮಾಲು <=> ವಾಲು <=> ಮಲಗು - ಈ ಪದಗಳೆಲ್ಲ ಒಂದಕ್ಕೊಂದು ನಂಟಿರುವುದೇ ಎಂದು ಇದರಿಂದ ತಿಳಿಯುತ್ತದೆ. ಉಲಿಕೆಯಲ್ಲೂ ಕೂಡ ಈ ಪದಗಳಲ್ಲಿರುವ ಹೋಲಿಕೆ ಎದ್ದು ಕಾಣುತ್ತದೆ. ಇದಲ್ಲದೆ ತಮಿಳಿನಲ್ಲಿ ’ಮಲಗು’ ಎಂಬ ಪದವನ್ನೇ ಹೋಲುವ ’ಮಲರ್ತ್ತು’ ಎಂಬ ಪದಕ್ಕೂ ’ಕುಸ್ತಿಯಲ್ಲಿ ಎದುರಾಳಿಯ ಬೆನ್ನನ್ನು ನೆಲಕ್ಕೆ ಮುಟ್ಟಿಸುವುದು’ ಎಂಬ ಹುರುಳಿದೆ.

ಮಲಗು, ಮಲಂಗು Ka. malagu, malaṅgu to recline, lie down, rest, incline, bend (intr., as full ears of paddy, etc.); n. pillow, cushion. [DED 4735]


ಮಾಲು, ಮಾಲಿಸು Ka. mālu to bend; māla, mālu sloping, slanting, slope, descent;mālisu to look obliquely, turn the eye and cast a look from the corner, bend to one side (as a post, etc.), behold for a long time. [DED 4825]


ವಾಲು, ಓಲು, ವಾಲುವಿಕೆ Ka. vālu, ōlu to bend, slope, slant; vāluvike sloping, descending [DED 5369]


ಮಲರ್ತ್ತು Ta. malarttu (malartti-)to throw on one's back as in wrestling [DED 4740]-

ತವರು

ತವರು ಎಂದರೆ ಏನೋ ಒಂದು ಸೆಳೆತ ಇದ್ದೇ ಇರುತ್ತದೆ. ತವರಿನಿಂದ ದೂರವಿದ್ದರಂತು ಈ ಸೆಳೆತ ಇನ್ನು ಹೆಚ್ಚು. ತವರು ಮನೆ, ತವರೂರು, ತವರುನಾಡು ಹೀಗೆ ತವರಿನ ಸೆಳೆತ ಬೇರೆ ಬೇರೆ ಮಟ್ಟಗಳಲ್ಲಿದ್ದರೂ ಅಲ್ಲಿ ಇರುವುದು ಅದೇ 'ತನ್ನವರ' ಸೆಳೆತ. ಇದೇನಿದು ತನ್ನವರು ಮತ್ತು ತವರು ಹೇಳುವುದಕ್ಕು ಮತ್ತು ಕೇಳುವುದಕ್ಕೂ ಹೆಚ್ಚು-ಕಡಿಮೆ ಒಂದೇ ತರ ಇದೆಯಲ್ಲ ಅಂತ ಅನಿಸೇ ಅನಿಸುವುದು. ಹಾಗಾದರೆ

ತನ್+ಅವರು = ತನ್ನವರು  = ತಂವರು
ತಮ್+ಅವರು = ತಮ್ಮವರು  = ತಂವರು


ಪದದ ನಡುವಿನಲ್ಲಿ ಅಂದರೆ ಮೊದಲ ಬರಿಗೆಯಾದ ಮೇಲೆ ಬರುವ ಮೂಗುಲಿ ಬಿದ್ದು ಹೋಗಿರುವ ಎತ್ತುಗೆಗಳು ಕನ್ನಡದಲ್ಲಿ ಹಲವಿವೆ:-

ದಾಂಟು => ದಾಟು
ಸೋಂಕು => ಸೋಕು
ನೂಂಕು => ನೂಕು
ಮಂಕರಿ => ಮಕರಿ => ಮಕ್ರಿ


ಅಂದಮೇಲೆ ತಂವರು => ತವರು ಆಗಿರುವುದಕ್ಕೆ ಎಡೆಯಿದೆ.

ತಮರ್, ತವರ್ Ka. tamar, tavar those who are his, hers or theirs, one's own people [DED 3612

Wednesday, September 5, 2012

ತೇರು

ಈಗಲೂ ಹಲವು ಊರುಗಳಲ್ಲಿ ದೇವರ ತೇರು ನಡೆಸುವುದು ವಾಡಿಕೆ.  'ತೇರ ಏರಿ ಅಂಬರದಾಗೆ ನೇಸರ ನಗುತಾನೆ' ಎಂಬುದು ಕಬ್ಬಿಗರ ಸಾಲು. ಕಾದಾಟಗಳಲ್ಲಿ ತೇರನ್ನು ಏರಿ ಬಿಲ್ಲಿಗೆ ಅಂಬುಗಳನ್ನು ಹೂಡಿ ಎದುರಾಳಿಯನ್ನು ಎದುರಿಸುವುದನ್ನು ನಾವು ಪುರಾಣ ಮತ್ತು ಹಿನ್ನಡವಳಿಗಳಲ್ಲಿ ನೋಡಬಹುದು.
ಏರು ಎಂಬುದಕ್ಕೆ ಮೇಲೆ ಹತ್ತು, ಎತ್ತರಿಸು ಎಂಬ ಹುರುಳುಗಳಿವೆ.  ಇದಲ್ಲದೆ ಕಾದಾಟದಲ್ಲಿ ಎದುರಾಗು ಎಂಬ ಹುರುಳೂ ಕೂಡ ಇದೆ. ಯಾವ ತಾವು/ಎಡೆ/ಜಾಗ ತಾನು/ತಾ ಏರಿರುವುದು, ಯಾವ ತಾವಿನಲ್ಲಿ ತಾನು/ತಾ ನಿಂತು ಎದುರಾಳಿಗಳನ್ನು ಎದುರಿಸಬಹುದೊ ಅದೇ  'ತಾ ಏರು'=> ತೇರು ಆಗಿದೆ.

ಹೀಗೆ ಏರಿಸುವುದಕ್ಕೆ ದೂಸರುಗಳಿವೆ. ದೇವರ ತೇರು ಬಲು ಎತ್ತರದಲ್ಲಿದ್ದರೆ ಅದನ್ನು ನೋಡಲು ಬರುವ ಮಂದಿಗೂ ಅನುಕೂಲ ಮತ್ತು ಗೆಂಟಿನಿಂದಲೂ ತೇರನ್ನು ನೋಡಲು ಬರುತ್ತದೆ. ಇನ್ನು ಕಾದಾಟಗಳಲ್ಲಿ ಎದುರಾಳಿಯನ್ನು ಸರಿಯಾಗಿ ಕಾಣಲು ಕೂಡ ಎತ್ತರದ ಇಕ್ಕೆ/ಜಾಗ/ಎಡೆ ಬೇಕಾಗುತ್ತದೆ. ಇಲ್ಲಿ ಬರೀ ಎತ್ತರದ ಎಡೆಗಳಿದ್ದರೆ ಸಾಕಾಗುವುದಿಲ್ಲ. ಅದು ಕದಲುತ್ತಲೂ ಇರಬೇಕಾಗುತ್ತದೆ. ಹೀಗೆ ಎತ್ತರಿಸಿದ ಮತ್ತು ಕದಲುತ್ತಿರುವುದಕ್ಕೆ 'ತೇರು'(ತಾ+ಏರು) ಎಂದು ಕರೆಯಲಾಗಿದೆ.

ಏರು  Ka. ēṟu to rise, increase, ascend, mount, climb; n. rising, etc., rising ground; [DED 916]
ಏರ್ Ka. ēṟ to meet in battle, oppose; n. state of meeting and opposing, [ DED 906]

ಅವಲಕ್ಕಿ

ಅವಲಕ್ಕಿಯಿಂದ ಮಾಡಲಾಗುವ ತಿಂಡಿಗಳು ಹಲವಿವೆ. ಅವಲಕ್ಕಿ ಉಪ್ಪಿಟ್ಟು, ಅವಲಕ್ಕಿ ಪಾಯಸ, ಅವಲಕ್ಕಿ ಕಾರ ಅಲ್ಲದೆ ಹಲವು ಕುರುಕ್ ತಿಂಡಿಗಳಲ್ಲು ಅವಲಕ್ಕಿಯನ್ನು ಬಳಸಲಾಗುತ್ತದೆ. ಅವಲಕ್ಕಿಯಲ್ಲಿ ಗಟ್ಟಿ ಅವಲಕ್ಕಿ ಮತ್ತು ತೆಳು ಅವಲಕ್ಕಿ(ಪೇಪರ್ ಅವಲಕ್ಕಿ) ಎಂಬ ಎರಡು ಬಗೆಯಿದೆ. ಹಾಗಾದರೆ ಅವಲಕ್ಕಿ ಎಂದರೇನು?

ಅವಲಕ್ಕಿ = ಅವಲ್+ಅಕ್ಕಿ = ಬಡಿದ ಅಕ್ಕಿ, ಕುಟ್ಟಿದ ಅಕ್ಕಿ, ಅಮುಕಿದ ಅಕ್ಕಿ ಎಂಬ ಹುರುಳನ್ನು ನೋಡಬಹುದು.
ಅವಲ್, ಅವಲ್-ಅಕ್ಕಿ aval pound, beat; n. pounding, beating in a mortar; (also aval-akki) rice bruised and crushed [DED 2391]

ಅಮರ್(ಅಮರ್ದು ಎಂದು ಹಳೆಗನ್ನಡದಲ್ಲಿ ಬಳಕೆಯಲ್ಲಿದೆ), ಅಮುಗು, ಅವುಗು, ಅಮುಕು, ಅಮಿಕು, ಅವುಕು, ಅವುಂಕು. Ka. amar to seize firmly, embrace; amugu, avugu to yield to pressure (as the surface of a ripe fruit or tumour); amuku, amiku, avuku, avuṅku to press or hold firmly, squeeze, trouble; avuṅku pressing or holding firmly; [DED 169]

ಈ ಅವಲ್ ಎಂಬುದೇ 'ಅಮರ್'/ಅವುಂಕು ಎಂಬ ಪದದಿಂದ ಬಂದಿರಬಹುದು ಯಾಕಂದರೆ ಕನ್ನಡದಲ್ಲಿ
ಮ -> ವ ಆಗುವ, ರ್ -> ಲ್ ಆಗುವ  ಕೆಲವು ಎತ್ತುಗೆಗಳನ್ನು ಕೊಡಬಹುದು.

ಅಮುಕು => ಅವುಕು
ಪುಂಡರೀಕ => ಪುಂಡಲೀಕ

ಹಾಗಾಗಿ ಅಮರ್ => ಅವರ್ => ಅವಲ್ ಆಗಿರುವುದನ್ನು ನಾವು ಮನಗಾಣಬಹುದು.
ಒಟ್ಟಿನಲ್ಲಿ ಅವಲಕ್ಕಿ ಅಂದರೆ  ಒತ್ತಿದ ಅಕ್ಕಿ, ಬಡಿದ ಅಕ್ಕಿ, ಅಮುಕಿದ ಅಕ್ಕಿ ಎಂದು ಸುಳುವಾಗಿ ಅರಿತುಕೊಳ್ಳಬಹುದು.

Monday, September 3, 2012

ಉಸಿರು

ನಾವು ಬದುಕಿದ್ದೇವೆ ಎನ್ನುವುದಕ್ಕೆ ಉಸಿರಾಡುತ್ತಿದ್ದೇವೆ ಎಂಬುದೇ ಗುರುತು. ಹಾಗಾದರೆ ಉಸಿರು ಎನ್ನುವುದಕ್ಕೆ ಕಾರಣವೇನು ಎಂದು ನೋಡಿದಾಗ:-

ಯಾರೇ ಆಗಲಿ ತುಂಬ ದಣಿವಾದಾಗ ಇಲ್ಲವೆ ಕೇಡಿನಿಂದ ಪಾರಾಗಿ ಮನಸ್ಸಿಗೆ ನೆಮ್ಮದಿ ತೆಗೆದುಕೊಳ್ಳುವಾಗ ’ಉಸ್ಸ್....!!!" ಎಂದು ಹೇಳುವುದುಂಟು. ಹಾಗೆ ಹೇಳುವಾಗ ನಿಟ್ಟುಸಿರು ಹೊರಬರುತ್ತದೆ. ಉಸಿರಿನ ಇರುವಿಕೆಯನ್ನು ರಾಚುವಂತೆ ನಮಗೆ ತೋರಿಸುವುದು ’ಉಸ್’ ಎಂದು ಸದ್ದು ಮಾಡಿದಾಗಲೇ ಅಲ್ಲವೆ. ಹಾಗಾಗಿ ಹೀಗೆ ಉಸಿರಿನ ಇರುವಿಕೆಯನ್ನು ಎತ್ತಿ ತೋರುವುದೇ ’ಉಸ್’ ಎಂಬ ಸದ್ದು. ಈ ಸದ್ದಿನಿಂದಲೇ ಉಸಿರ್ ಎಂಬ ಪದ ಏಕೆ ಬಂದಿರಬಾರದೆಂದು ಯಾರಿಗಾದರೂ ಅನ್ನಿಸದೇ ಇರದು. ಇದನ್ನೇ ದ್ರಾವಿಡ ಪದನೆರಕೆಯಲ್ಲಿ ಕೊಡಲಾಗಿದೆ:=-

ಉಸ್, ಊಸ್, ಹುಸ್, ಹೋಸ್ Ka. us, ūs, hus, hōssound used in sighing when tired [DED 573]
ಉಸ್ +ಇರ್ = ’ಉಸ್’ ಎಂಬದ್ದು = ’ಉಸ್’ ಎನ್ನುವ ತಾವು = ಉಸಿರ್ => ಉಸುರ್ => ಉಸ್ರು

ಉಸಿರ್, ಉಸುರ್, ಉಸುರು Ka. usir, usur, usuru breath, life, taking breath, caesura; usalu breath [DED 645]
ಇನ್ನು ’ರ’ ಕಾರವು ಹಲವು ಆಡುನುಡಿಗಳಲ್ಲಿ ’ಲ’ಕಾರವಾಗಿರುವುದನ್ನು ಗಮನಿಸಬಹುದು . ಎತ್ತುಗೆಗೆ: ಎರಡು=> ಎಲ್ಡು.
ಹಾಗೆ ಉಸುರು => ಉಸುಲು => ಉಸಲು ಆಗಿದೆ. ಮುಂದೆ ಇದು ’ಉಲಿಮಾರು’(metathesis) ಹೊಂದಿ ಉಸುಲು => ಸೂಲು ಆಗಿರಬಹುದು.

ಇಶ್ಟೆಲ್ಲ ’ಉಸ್’ ಎಂಬ ಸದ್ದಿನಿಂದ ಉಂಟಾದ ಪದಗಳಾದರೆ ಇದೇ ಹುರುಳಿರುವ ’ಸೂಲು’ ಎಂಬ ಒರೆಯ ಬೇರು ಕೊಂಚ ಬೇರೆಯಾದ ’ಸುಯ್’ ಎಂಬ ಸದ್ದೇ ಆಗಿದೆ.

ಸುಯ್, ಸುಯಿ , ಸೂಯ್, ಸುಯಿಲ್, ಸುಯಿಲು, ಸುಯ್ಲು, ಸೂಲು 
Ka. suy, suyi, sūy   
to breathe, sigh; n. breath, a sigh; suyil, suyilu, suylu, sūy, sūlu breath, a sigh.
[DED 2680]

ಈ ಮೇಲಿನ ಪದಗಳಿಂದ ನಾವು ತಿಳಿದುಕೊಳ್ಳಬಹುದಾದ ವಿಶಯವೇನೆಂದರೆ ಪದಗಳಿಗೂ ಮತ್ತು ನಾವು ಉಂಟು ಮಾಡುವ ಸದ್ದುಗಳಿಗೂ ಹತ್ತಿರದ ನಂಟಿದೆ. ನಾವು ಉಂಟು ಮಾಡುವ ಸದ್ದುಗಳನ್ನು ಗಮನಿಸಿದಾಗ ನಾವು ಬಳಸುವ ಪದಗಳ ಹುಟ್ಟನ್ನು ತಿಳಿದುಕೊಳ್ಳಬಹುದು. 

ತೋಟ

ತೋಟ ಎಂದೊಡನೆ ಬಗೆ(ಮನಸ್ಸು) ತಂಪಾಗುವುದು ಸಹಜ. ಬೆಂಗಳೂರನ್ನು ತೋಟಗಳ ಊರು ಎಂದು ಕರೆಯುತ್ತಾರೆ. ಹಳ್ಳಿಗಳಿಗೆ ಹೋದರೆ ತೆಂಗಿನ ತೋಟ, ಮಾವಿನ ತೋಟ ಕಾಣಬಹುದಾದರೆ ಹೊಳಲುಗಳಲ್ಲಿ ಕಯ್ತೋಟ, ಹೂದೋಟ ಕಾಣಬಹುದು.
ತೋಟ, ತೋಂಟ  tōṭa, tōṇṭa garden - [DED 3549]
ತೋಡು Ka. tōḍu dig, excavate a hole, burrow [DED 3549]
. ಯಾವುದೇ ತೋಟ ಮಾಡುವುದಕ್ಕೆ ಮುಂಚೆ ನೆಲವನ್ನು ಹದಗೊಳಿಸಬೇಕು. ಹದಗೊಳಿಸಲು ಮೊದಲು ನೆಲವನ್ನು ಅಗೆದು ಮಣ್ಣನ್ನು ತೋಡಬೇಕು. ಹೀಗೆ ತೋಡಿ ತೋಡಿ ಮಾಡಿದ್ದೇ 'ತೋಟ' ಆಯಿತು.

ತೋಡು=> ತೋಟ . ಹಾಗಾಗಿ, ದ್ರಾವಿಡ ಪದನೆರಕೆಯಲ್ಲೆ ಇವೆರಡು ಪದಗಳನ್ನು ಮೇಲೆ ತೋರಿಸಿದ ಹಾಗೆ ನಂಟಿಸಲಾಗಿದೆ.
ಹೀಗೆ ತೋಡು ಎಂಬ ಎಸಕಪದದಿಂದ 'ತೋಟ' ಎಂಬ ಹೆಸರು ಪದವಾಗಿರುವ ತೆರಕ್ಕೆ ಹಲವು ಎತ್ತುಗೆಗಳನ್ನು ಕೊಡಬಹುದು.
-------------------------
 ಎಸಕ ಪದ - ಹೆಸರು ಪದ
-------------------------
    ಆಡು       - ಆಟ
    ಓಡು       - ಓಟ
   ನೋಡು    - ನೋಟ
   ಮಾಡು     - ಮಾಟ
   ಕಾಡು      - ಕಾಟ