ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Tuesday, September 25, 2012

ನಂಟು, ನಂಬು, ನನ್ನಿ

ಈ ಮೂರು ಪದಗಳನ್ನು ಒಟ್ಟಿಗೆ ನೋಡಿದಾಗ ಇವಲ್ಲಿ ಕೆಲವು ಹೋಲಿಕೆಗಳನ್ನು ಗಮನಿಸಬಹುದು. ಅದೇನೆಂದರೆ ಅವೆಲ್ಲವೂ
  * 'ನ' ಎಂಬ ಉಲಿಯಿಂದ/ಬರಿಗೆಯಿಂದ ಸುರುವಾಗುತ್ತವೆ
  *  ಈ ಪದಗಳಲ್ಲಿರುವ ಎರಡನೆ ಉಲಿಯು ಮೂಗುಲಿಯಾಗಿದೆ

ಈ ಪದಗಳನ್ನೇ ಹೀಗೆ ಬಿಡಿಸಿ ಬರೆಯಬಹುದು:-
   ನಣ್-ಟು
   ನಮ್-ಬು
   ನನ್-ನಿ

'ನಣ್'(ನಣ್ಣು) ಎಂಬ ಈ ಬೇರುಪದವೇ ಎಲ್ಲ ಪದಗಳಲ್ಲಿ ಕಾಣುವುದು. ಹಾಗಾದರೆ ಈ ಎಲ್ಲ ಪದಗಳು 'ನಣ್ಣು' ಎಂಬ ಬೇರಿನಿಂದ ಬಂದಿದೆಯೇ ಎಂಬುದನ್ನು ನೋಡೋಣ.

ತಮಿಳಿನಲ್ಲಿ ನಣ್ಣು ಎಂಬುದಕ್ಕೆ ಈ ಹುರುಳನ್ನು ಕೊಡಲಾಗಿದೆ.

ನಣ್ಣು Ta. naṇṇu (naṇṇi-) to draw near, approach, reach, be attached to [DED 3588]
ಅಂದರೆ  ಹತ್ತಿರ ತರು, ಹತ್ತಿರ ಬರು, ಅಂಟಿಕೊಂಡಿರು ಎಂಬ ಹುರುಳುಗಳಿವೆ. ಅದೇ ಹುರುಳು ಕನ್ನಡದಲ್ಲೇ ಇದೆ ಎಂದು ಈ ಕೆಳಗಿನ ಪದಗಳನ್ನು ಮತ್ತು ಹುರುಳುಗಳನ್ನು ನೋಡಿದಾಗ ಅನ್ನಿಸದೇ ಇರದು.
ನಣ್ಟು, ನೆಣ್ಟು Ka. naṇṭu, neṇṭu relationship, friendship; ನಣ್ಟ naṇṭa, ನೆಣ್ಟ neṇṭa relative, kinsman, friend; ನಣ್ಟತನ naṇṭatana, ನೆಣ್ಟತನ neṇṭatana, ನೆಣ್ಟರ್ತನ naṇṭartana, ನಣ್ಟಸ್ತಿಕೆ naṇṭastike, ನಣ್ಟಿಕೆ naṇṭike relationship; ನಣ್ಪುnaṇpu, ನೆಣ್ಪು neṇpu friendship, affection, love, favour, confidential relationship, familiarity, intimacy, relationship, delightfulness, charm, pleasantness, agreeability [DED 3588]

ಹಾಗಾದರೆ ನಣ್ಟ(ನಣ್+ಟ) ಅಂದರೆ 'ಹತ್ತಿರದವರು'. ಅದು ನೆತ್ತರಿನ ಮೂಲಕ ಹತ್ತಿರವಾದವರು (ಅಂದರೆ ಅಣ್ಣ, ತಮ್ಮ, ಅಕ್ಕ, ತಂಗಿ, ಅಮ್ಮ, ಅಪ್ಪ, ಚಿಕ್ಕಪ್ಪ, ಚಿಕ್ಕಮ್ಮ, ಸೋದರತ್ತೆ, ಸೋದರಮಾವ ಎಂಬ ರಕ್ತ ಸಂಬಂದಿಗಳು) ಇಲ್ಲವೆ ಗೆಳೆತನದ ಮೂಲಕ ಹತ್ತಿರವಾದವರು, ಹತ್ತಿರಬಂದವರು. ಯಾವಾಗಲೂ ದೂರದಲ್ಲಿರುವ ಆಳಿನ(ವ್ಯಕ್ತಿಯ)  ಬಗ್ಗೆ ಅಶ್ಟು ಒಲವು, ಅಕ್ಕರೆ ಮತ್ತು ನಂಬಿಕೆ ಬರುವುದಿಲ್ಲ. ಹತ್ತಿರದಲ್ಲಿರುವವರ ಮೇಲೆಯೇ ಒಲವು, ಗೆಳೆತನ, ನಂಬಿಕೆ ಹೆಚ್ಚು. ಹಾಗಾಗಿ ಹತ್ತಿರವಾಗುವುದನ್ನೇ 'ನಣ್-ಟು' ಎಂದು ಹುರುಳಾರೆ ಕರೆಯಲಾಗಿದೆ. ಹತ್ತಿರವಾಗುವವರನ್ನು 'ನಂಟರು' ಎಂದು ಕರೆಯಲಾಗಿದೆ.

ಮನುಶ್ಯನಿಗೆ ಕಶ್ಟ ಬಂದಾಗ ನೆರವಾಗುವವರು ಇಲ್ಲವೆ ನೆರವು ಕೇಳುವುದು ಈ ನಂಟರನ್ನೇ. ನಲಿವಿನ ಹೊತ್ತಿನಲ್ಲೂ ಆ ನಲಿವಿನ ಪಾಲುದಾರರು ಈ ನಂಟರೇ(ಹತ್ತಿರದವರೆ). ಹಾಗಾಗಿ, ನಂಟರ ಮೇಲೆಯೇ ನಂಬಿಕೆ ಇರಿಸಲಾಗುತ್ತದೆ. 'ಏನೇ ಕಶ್ಟ ಬಂದರೂ ನಮ್ಮ ಅಣ್ಣ ಇದ್ದಾನೆ' ಇಲ್ಲವೆ 'ನಮ್ಮ ಚಿಕ್ಕಪ್ಪ ಇದ್ದಾರೆ' ಹೀಗೆ ಸಾಮಾನ್ಯವಾಗಿ ಮಂದಿ ಹೇಳುವುದುಂಟು. ಇವೆಲ್ಲವೂ 'ಹತ್ತಿರದವರ' ಅಂದರೆ ನಣ್-ಟರ ಮೇಲೆ ಇರಿಸಿರುವ 'ನಮ್-ಬಿಕೆ'ಯಿಂದಲೇ. ಹಾಗಾಗಿ ನಂಟರಿಗೂ ಮತ್ತು ನಂಬಿಕೆಗೂ ತಳಕು ಹಾಕಲಾಗುತ್ತದೆ. ನಂಬಿಕೆಯಂದರೇನೆ ನಂಟರು ಎನ್ನುವಶ್ಟರ ಮಟ್ಟಿಗೆ ಸಮಾಜದಲ್ಲಿ ಇದು ಬೇರೂರಿದೆ. ಹಾಗಾದರೆ ನಂಬು, ನಂಬಿಕೆ ಎಂಬ ಪದಗಳು ಕೂಡ 'ನಣ್-ಟು' ಎಂಬ ಪದದಲ್ಲಿರುವ ನಣ್  ಇಂದಾನೆ ಬಂದಿರಬಹುದೆಂದು ಹೇಳಲು ಬರುತ್ತದೆ. ನಂಬು Ka. nambu, (K.2) ನೆಮ್ಮು nemmu to confide, trust, believe; ನಂಬಿಕೆ nambike, ನಂಬಿಗೆ nambige,  nembuge confidence [DED 3600]

ಯಾರ ಮೇಲೆ  ಒಲವು(ಪ್ರೀತಿ) ಇದೆಯೋ, ಯಾರ ಮೇಲೆ ನಂಬಿಕೆಯಿದೆಯೊ ಅವರು ಎಂದು ಸುಳ್ಳು-ಸಟೆ ಆಡುವುದಿಲ್ಲ. ಅಂದರೆ ಒಲವು, ನಂಬಿಕೆ ಗಳಿಸುವೆಡೆ ಸತ್ಯ/ದಿಟವೂ ಇರಲೇಬೇಕಾಗುತ್ತದೆ. ಅಂದರೆ 'ನನ್-ನಿ'(truth) ಇರಲೇಬೇಕಾಗುತ್ತದೆ. ಸತ್ಯ/ದಿಟ ಇಲ್ಲದೆಡೆ ಒಲವು ಮೂಡುವುದಿಲ್ಲ. ಮೂಡಿದರು ಅದು ಹಲಗಾಲ ಉಳಿಯುವುದಿಲ್ಲ. ಹಾಗೆ ನೋಡಿದರೆ ನನ್ನಿ ಎಂಬುದಕ್ಕೆ ಒಲವು,ಅಕ್ಕರೆ ಮತ್ತು ದಿಟ ಎಂಬ ಹುರುಳುಗಳಿವೆ. ಇವೆಲ್ಲ ನೋಡಿದಾಗ ನಣ್ಪು, ನಂಬಿಕೆ ಮತ್ತು ನನ್ನಿ ಇವೆಲ್ಲ ಒಂದೇ ಪದದಿಂದ ಬಂದು, ಸಮಾಜದ ನೆಲೆಯಲ್ಲಿ ಪಡೆದುಕೊಂಡ ಬೇರೆ ಬೇರೆ ರೂಪಗಳು(manifestations) ಎಂದು ಹೇಳಬಹುದು. ನನ್ನಿ Ka. nanni truth, love, affection [DED 3610]

No comments:

Post a Comment