ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Monday, September 3, 2012

ಉಸಿರು

ನಾವು ಬದುಕಿದ್ದೇವೆ ಎನ್ನುವುದಕ್ಕೆ ಉಸಿರಾಡುತ್ತಿದ್ದೇವೆ ಎಂಬುದೇ ಗುರುತು. ಹಾಗಾದರೆ ಉಸಿರು ಎನ್ನುವುದಕ್ಕೆ ಕಾರಣವೇನು ಎಂದು ನೋಡಿದಾಗ:-

ಯಾರೇ ಆಗಲಿ ತುಂಬ ದಣಿವಾದಾಗ ಇಲ್ಲವೆ ಕೇಡಿನಿಂದ ಪಾರಾಗಿ ಮನಸ್ಸಿಗೆ ನೆಮ್ಮದಿ ತೆಗೆದುಕೊಳ್ಳುವಾಗ ’ಉಸ್ಸ್....!!!" ಎಂದು ಹೇಳುವುದುಂಟು. ಹಾಗೆ ಹೇಳುವಾಗ ನಿಟ್ಟುಸಿರು ಹೊರಬರುತ್ತದೆ. ಉಸಿರಿನ ಇರುವಿಕೆಯನ್ನು ರಾಚುವಂತೆ ನಮಗೆ ತೋರಿಸುವುದು ’ಉಸ್’ ಎಂದು ಸದ್ದು ಮಾಡಿದಾಗಲೇ ಅಲ್ಲವೆ. ಹಾಗಾಗಿ ಹೀಗೆ ಉಸಿರಿನ ಇರುವಿಕೆಯನ್ನು ಎತ್ತಿ ತೋರುವುದೇ ’ಉಸ್’ ಎಂಬ ಸದ್ದು. ಈ ಸದ್ದಿನಿಂದಲೇ ಉಸಿರ್ ಎಂಬ ಪದ ಏಕೆ ಬಂದಿರಬಾರದೆಂದು ಯಾರಿಗಾದರೂ ಅನ್ನಿಸದೇ ಇರದು. ಇದನ್ನೇ ದ್ರಾವಿಡ ಪದನೆರಕೆಯಲ್ಲಿ ಕೊಡಲಾಗಿದೆ:=-

ಉಸ್, ಊಸ್, ಹುಸ್, ಹೋಸ್ Ka. us, ūs, hus, hōssound used in sighing when tired [DED 573]
ಉಸ್ +ಇರ್ = ’ಉಸ್’ ಎಂಬದ್ದು = ’ಉಸ್’ ಎನ್ನುವ ತಾವು = ಉಸಿರ್ => ಉಸುರ್ => ಉಸ್ರು

ಉಸಿರ್, ಉಸುರ್, ಉಸುರು Ka. usir, usur, usuru breath, life, taking breath, caesura; usalu breath [DED 645]
ಇನ್ನು ’ರ’ ಕಾರವು ಹಲವು ಆಡುನುಡಿಗಳಲ್ಲಿ ’ಲ’ಕಾರವಾಗಿರುವುದನ್ನು ಗಮನಿಸಬಹುದು . ಎತ್ತುಗೆಗೆ: ಎರಡು=> ಎಲ್ಡು.
ಹಾಗೆ ಉಸುರು => ಉಸುಲು => ಉಸಲು ಆಗಿದೆ. ಮುಂದೆ ಇದು ’ಉಲಿಮಾರು’(metathesis) ಹೊಂದಿ ಉಸುಲು => ಸೂಲು ಆಗಿರಬಹುದು.

ಇಶ್ಟೆಲ್ಲ ’ಉಸ್’ ಎಂಬ ಸದ್ದಿನಿಂದ ಉಂಟಾದ ಪದಗಳಾದರೆ ಇದೇ ಹುರುಳಿರುವ ’ಸೂಲು’ ಎಂಬ ಒರೆಯ ಬೇರು ಕೊಂಚ ಬೇರೆಯಾದ ’ಸುಯ್’ ಎಂಬ ಸದ್ದೇ ಆಗಿದೆ.

ಸುಯ್, ಸುಯಿ , ಸೂಯ್, ಸುಯಿಲ್, ಸುಯಿಲು, ಸುಯ್ಲು, ಸೂಲು 
Ka. suy, suyi, sūy   
to breathe, sigh; n. breath, a sigh; suyil, suyilu, suylu, sūy, sūlu breath, a sigh.
[DED 2680]

ಈ ಮೇಲಿನ ಪದಗಳಿಂದ ನಾವು ತಿಳಿದುಕೊಳ್ಳಬಹುದಾದ ವಿಶಯವೇನೆಂದರೆ ಪದಗಳಿಗೂ ಮತ್ತು ನಾವು ಉಂಟು ಮಾಡುವ ಸದ್ದುಗಳಿಗೂ ಹತ್ತಿರದ ನಂಟಿದೆ. ನಾವು ಉಂಟು ಮಾಡುವ ಸದ್ದುಗಳನ್ನು ಗಮನಿಸಿದಾಗ ನಾವು ಬಳಸುವ ಪದಗಳ ಹುಟ್ಟನ್ನು ತಿಳಿದುಕೊಳ್ಳಬಹುದು. 

3 comments:

  1. (ಇಲ್ಲಿ ಹಾಕಬೇಕಿದ್ದ ಟಿಪ್ಪಣಿ ಮರೆತು ಫೇಸ್ ಬುಕ್ ನಲ್ಲಿ ಹಾಕಿದ್ದೆ - ಮತ್ತೆ ಕತ್ತರಿಸಿ ಅಂಟಿಸಿದ್ದೇನೆ)


    ನೀವು ಪದಗುಟ್ಟನ್ನು ಬಿಡಿಸುತ್ತಿರುವುದು ಒಳ್ಳೇ ವಿಷಯವೇ - ಆದರೆ ಇಲ್ಲಿ ನೀವು ಇನ್ನೂ ಹೆಚ್ಚು ಹರಹಿನಲ್ಲಿ ನೋಡಿದರೆ ಈ ಗುಟ್ಟುಗಳು ಇನ್ನೂ ಚೆನ್ನಾಗಿ ಬೆಳಕು ಕಾಣುತ್ತವೆ ಅಂತ ನನ್ನೆಣಿಕೆ. ಏಕೆಂದರೆ ಯಾವುದೇ ನುಡಿಯಲ್ಲಿ, ಹೆಚ್ಚು ಹೆಚ್ಚು ಒಂದೇ ರೀತಿಯ ಪದಗಳನ್ನು ನೋಡಿದಾಗ, ಅವುಗಳಲ್ಲಿ ಆಗುವ ಬದಲಾವಣೆಗಳ ಮಾದರಿಯನ್ನು (ಬರೀ ಒಂದೇ ಪದವನ್ನು ನೋಡುವಾಗ ಕಾಣುವುದುದಕ್ಕಿಂದ ಹೆಚ್ಚಾಗಿ) ಗುರುತಿಸಬಹುದು.

    ಉದಾಹರಣೆಗೆ, ನೀವಿಲ್ಲಿ ಉಸ್ ಎಂಬ ಶಬ್ದ ಸೂಚಿಯಾಗಿ ಉಸಿರು ಬಂದಿದೆ ಅಂತ ಹೇಳಿದ್ದೀರ. ಆದರೆ, ಹಳೆಗನ್ನಡದಿಂದ (ಅಥವ ಅದಕ್ಕಿಂತ ಹಿಂದೆ ಕನ್ನಡ ತಮಿಳುಗಳು ಕವಲಾಗುವುದಕ್ಕೆ ಮೊದಲಿನಿಂದ) ಹೊಸಗನ್ನಡಕ್ಕೆ ಬರುವಾಗ, ಯ ಕಾರವು ಸ ಕಾರಕ್ಕೆ ಬದಲಾಗುವ ಒಂದು ಕ್ರಮವನ್ನು ನಾವು
    ಗಮನಿಸಬಹುದು.

    ನನಗೆ ನೆನಪಾದ ಕೆಲವನ್ನು ಇಲ್ಲಿ ಹಾಕಿದ್ದೇನೆ:

    ಉಸಿರ್/ಉಸಿರು - ಉಯಿರು (ಎರಡನೇ ಪದ ತಮಿಳಿನಲ್ಲಿ ಬಳಕೆಯಲ್ಲಿದೆ)

    ಹೆಸರ್/ ಹೆಸರು - ಪೆಯರ್ (ಎರಡನೇ ಪದ ತಮಿಳಿನಲ್ಲಿ ಬಳಕೆಯಲ್ಲಿದೆ)

    ಬಸಿರ್/ಬಸಿರು - ವಯರ್ (ಎರಡನೇ ಪದ ತಮಿಳಿನಲ್ಲಿ ಬಳಕೆಯಲ್ಲಿದೆ)

    ಹುಸಿ - ಪೊಯ್ (ಹಳೆಗನ್ನಡದಲ್ಲಿ ಬಳಕೆ ಇದೆ ಅಂತ ನೆನಪು, ತಮಿಳಿನಲ್ಲಿ ಈಗಲೂ ಇದೆ)

    ಹಸಿರು - ಪಯಿರು (ಎರಡೂ ಪದಗಳು ಸ್ವಲ್ಪ ಬೇರೆ ಬೇರೆ ಅರ್ಥದಲ್ಲಿ ಕನ್ನಡದಲ್ಲಿಯೇ ಬಳಕೆಯಲ್ಲಿವೆ)

    ಇನ್ನು ಇದೇ ಸಾಲಿಗೇ ಸೇರಬಹುದಾಗ ಇನ್ನೂ ಕೆಲವು : (ಖಡಾಖಂಡಿತವಾಗಿ ಹೇಳಲಾರೆ)

    ಮಾಸು- ಮಾಯು (ಎರಡೂ ಪದಗಳೂ ಸುಮಾರು ಒಂದೇ ಅರ್ಥದಲ್ಲಿ ದಿನಬಳಕೆಯಲ್ಲಿದೆ)

    ಹಸನು - ವಯನು ?(ಎರಡೂ ಪದಗಳೂ ಸುಮಾರು ಒಂದೇ ಅರ್ಥದಲ್ಲಿ ದಿನಬಳಕೆಯಲ್ಲಿದೆ ಇದು ಸರಿಯಾದ ಉದಾಹರಣೆಯೇ ಅಲ್ಲವೇ ಅನ್ನುವುದರಲ್ಲಿ ನನಗೆ ಸ್ವಲ್ಪ ಅನುಮಾನವಿದೆ)

    ಹಾಸು - ಹಾಯು (ಎರಡೂ ಪದಗಳೂ ಸುಮಾರು ಒಂದೇ ಅರ್ಥದಲ್ಲಿ ದಿನಬಳಕೆಯಲ್ಲಿದೆ)

    ಮೊಸರು - ಮೊಯರು (ಮೋರು ಅಂತ ತಮಿಳಿನಲ್ಲಿದೆ ಈಗ )

    ಕಾಸು - ಕಾಯು (ಇಲ್ಲಿ ಕಾಯಿಸು ವಿನ ಕುಗ್ಗಿದ ರೂಪ ಕಾಸು ಇದ್ದರೂ ಇರಬಹುದು)

    ಇವೆಲ್ಲ ನೋಡಿದಾಗ, ಉಸ್+ಇರ್ = ಉಸ್ ಎಂಬದ್ದು = ಉಸ್ ಎಂಬುವ ತಾವು = ಉಸಿರ್ = ಉಸುರ್ => ಉಸ್ರು ಅನ್ನುವ ನಿಮ್ಮ ಲೆಕ್ಕಾಚಾರ ಏಕೋ ಸರಿಯಾಗಿಲ್ಲವೋ ಅನ್ನುವ ಅನುಮಾನವಿದೆ.

    ನೀವು ನಿಮ್ಮ ಬ್ಲಾಗ್ ನಲ್ಲಿ ಹಾಕಿರುವ ಅಲ್ಲಗಳೆತದಲ್ಲಿ (disclaimer) "ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು" ಅಂತ ಹಾಕಿದ್ದೀರ.

    ಹಾಗಾಗಿ, ಒಂದಾದರೂ ಗುಟ್ಟನ್ನ ನಾನೂ ಬಿಚ್ಚಿಡೋಣ ಅನ್ನಿಸಿ ಸ್ವಲ್ಪ ವಿವರವಾಗೇ ಬರೆದಿದ್ದೇನೆ. :)

    ReplyDelete
  2. ಹಂಸಾನಂದಿಗಳೇ,

    ತಮ್ಮ ಮಾರುಲಿಗೆ ನನ್ನಿ.

    ಕೆಲವು ಬೊಟ್ಟುಗಳು:-
    ೧. ಮೊದಲಿಗೆ ಉಯಿರ್ ಎಂಬುದು ಹಳೆಗನ್ನಡದಲ್ಲೂ ಕೂಡ ಇರಲಿಲ್ಲ... ಹಳೆಗನ್ನಡದಲ್ಲೂ ಉಸಿರ್/ಉಸುರ್ ಎಂದೇ ಇತ್ತು. ಕನ್ನಡದಲ್ಲಿ ಉಯಿರ್ ಇತ್ತು ಅಂತ ಕಿಟ್ಟೆಲ್ ಅವರ ಪದನೆರಕೆಯಾಗಲಿ, ದ್ರಾವಿಡ ಪದನೆರಕೆಯಾಗಲಿ ಹೇಳುವುದಿಲ್ಲ
    ೨. ನೀವು ಉಯಿರ್ => ಉಸಿರ್ ಅಂದರೆ ಉಯಿರ್ ಇಂದಾನೆ ಉಸಿರ್ ಆಗಿದೆ ಅಂತ ಅಂದುಕೊಂಡಿದ್ದೀರ ಅನ್ಸುತ್ತೆ. ಹಾಗೆ ಹೇಳುವುದಕ್ಕೆ ನೀವು ದೂಸರು ಕೊಟ್ಟಿಲ್ಲ. ಉಸಿರ್ ಇಂದಾನೆ ಉಯಿರ್ ಆಗಿರುವುದಕ್ಕೂ ಎಡೆಯಿದೆ. ಎತ್ತುಗೆಗೆ ಕನ್ನಡದ ಎಂಟು ಇಂದಾನೇ ತಮಿಳಿನಲ್ಲಿ ಎಟ್ಟು ಆಗಿದೆ, ಕನ್ನಡದ ಕೆಂಪು ಇಂದಾನೆ ತಮಿಳಿನಲ್ಲಿ ಚಿವಪ್ಪು(ಸಿವಪ್ಪು) ಆಗಿದೆ.
    ೩. ಇನ್ನು ಪಯಿರ್ ಮತ್ತು ಪಸಿರ್ ಎರಡೂ ಕನ್ನಡದಲ್ಲಿರಿವುದೇನೊ ದಿಟ ಆದರೆ ಪಸಿ(fresh, wet) ಯಾಗಿರುವುದೇ ಪಸಿರ್ ಇಲ್ಲವೇ ಪಯಿರ್; ಅಂದರೆ ಪಸಿರ್ ಮುಂದೆ ಬೇರೆ ಹುರುಳು ಪಡೆದು ಪಯಿರ್ ಆಗಿರಬಹುದು. ಹಾಗೆ ನೋಡಿದರೆ ’ಪಸಿ’ಯೇ ಪಯ್ ಗಿಂತ ಹೆಚ್ಚು ಹಳೆಯದು ಎಂದು ಇದರಿಂದ ತಿಳಿಯಬಹುದು

    ReplyDelete
  3. ನನ್ನ ಉದ್ದೇಶ ಹೋಲಿಕೆಯಿರುವ ಪದಗಳು ಹೇಗೆ ಬದಲಾಗಿವೆ ಎನ್ನುವುದೂ ಕೂಡ ಪದಗುಟ್ಟಿನ ಮುಖ್ಯ ಭಾಗ ಅನ್ನುವುದು - ಹಾಗಾಗಿ, ಒಂದೇ ಪದವನ್ನು ನೋಡಿ, ಹೀಗೇ ಅಂತ ಖಡಾಖಂಡಿತವಾಗಿ ಹೇಳೋಕಾಗಲ್ಲ. ಇಂತಹ ಇಲ್ಲಿ ಉಸಿರೇ ಉಯಿರಿಗೆ ಕಾರಣವಾಗಿರಬಹುದಾದರೂ, ಅಥವಾ ಉಯಿರೇ ಉಸಿರಿಗೆ ಮೂಲವಾದರೂ, ಆ ಗುರಿಯಲ್ಲಿ ಹೆಚ್ಚೇನೂ ಬದಲಾಗದು.

    ReplyDelete