ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Thursday, September 20, 2012

ನೆರವು

ಕನ್ನಡದಲ್ಲಿ ಎರಡು ಬೇರೆ ಬೇರೆ ಹುರುಳುಗಳನ್ನು ಕೊಡುವ ’ನೆರವು’ಗಳಿವೆ

೧. ಅವನಿಗೆ ಅವನ ಗೆಳೆಯರ ನೆರವು ಸರಿಯಾದ ಹೊತ್ತಿಗೆ ದೊರೆಯಿತು
೨. ಇವರ ಮದುವೆಯನ್ನು ನೆರವೇರಿಸಲು (ನೆರವು+ಏರಿಸಲು) ನಿಕ್ಕಿಪಡಿಸಲಾಗಿದೆ.

ನೆರವು೧:
ನೆರ, ನೆರವು, ನೆರೆವು Ka. nera, neravu, nerevu being next to, nearness, joining, assistance; ನೆರಪು ನೆರಹು ನೆರಯಿಸು, ನೆರಸು, ನೆರೆಪು, ನೆರೆವು nerapu, nerahu, nerayisu, nerasu, nerepu, nerevu to bring or put together, join, collect  [DED 3770]
ಇದರಿಂದ ತಿಳಿಯುವುದೇನೆಂದರೆ ನೆರವು ಅಂದರೆ ಒಂದು ಗೂಡಿಸುವುದು, ಒಂದು ಕಡೆ ಜೋಡಿಸುವುದು. ಆದರೆ ಏನನ್ನು ಜೋಡೀಸುವುದು? ಅದಕ್ಕೆ ಉತ್ತರ ’ಕಯ್ ಜೋಡಿಸುವುದು’. ನೆರವು ಅಂದರೂ ಒಂದೇ ಕಯ್ ಜೋಡಿಸು/ಕೂಡಿಸು ಅಂದರೂ ಒಂದೇ. ಯಾವುದೇ ಕೆಲಸ ಮಾಡುವಾಗ ’ಕಯ್ಗಳನ್ನು ಜೋಡಿಸುವುದು’ ಮುಕ್ಯ. ಹೆಚ್ಚು ಕಯ್ಗಳು ಕೂಡಿದರೆ ಕೆಲಸವು ಸಲೀಸಾಗಿ, ಬೇಗ ಆಗುತ್ತದೆ. ಹಾಗಾಗಿ ನೆರವು ಕೊಡು ಎಂದರೆ ಕಯ್ ಜೋಡಿಸು, ಕಯ್ ಹತ್ತಿರ ತರುವುದು ಎಂಬುದೇ ಸರಿಯಾದ ವಿವರಣೆ. ಇದನ್ನೆ DEDಲ್ಲಿ ಕೊಟ್ಟಿರುವ ಈ ಮೇಲಿನ ಹುರುಳುಗಳು ಹೇಳುತ್ತಿವೆ.

 
ನೆರವು ೨:
ನೆಱೆ, Ka. neṟe (neṟed-, neṟad-) to become entire, full, complete, accomplished, ready,perfect, mature, arrive at the age of menstruating, be realized, occur, suffice; n. completeness, maturity, etc.; adv. completely, perfectly; ನೆಱತೆ neṟate fullness, completeness; ನೆಱಪು neṟapu complete; ನೆಱಯಿಸು neṟayisu to make complete, supply;ನೆಱಯಿಸು neṟavu, neṟavaṇige, neṟevaṇige fullness, completeness;ನೆಱೆಯುವಿಕೆ neṟeyuvike menstruation to take place.[DED 3682]
ಇಲ್ಲಿ ಕೊಟ್ಟಿರುವ ಹಾಗೆ ಪೂರ್ಣತೆ, ಪೂರ್ಣವಾಗುವುದು, ತುಂಬುವುದು ಎಂಬ ಹುರುಳುಗಳನ್ನು ಹೊಂದಿದೆ.

ಆದರೆ DED 3682 ಮತ್ತು DED 3770 ಇವುಗಳನ್ನು ನಂಟಿಸಲಾಗಿದೆ ( DED 3672 ನೋಡಿ). ಅಂದರೆ ನೆರವು೧ ಮತ್ತು ನೆರವು೨ ಇವುಗಳ ನಡುವೆ ನಂಟು ಇದೆ ಎಂದು ಬಗೆಯಬಹುದು. ಅಂದರೆ ಒಂದು ಕೆಲಸವನ್ನು ಪೂರ್ಣಗೊಳಿಸಬೇಕಾದರೆ (ನೆರವು೨) ಹಲವು ಮಂದಿಯ ಸಹಾಯ(ನೆರವು೧) ಬೇಕೇ ಬೇಕಾಗುತ್ತದೆ. ಕೆಲಸ ನೆರವೇರಿಸುವುದಕ್ಕೂ( ನೆರವು೨) ಬೇರೆಯವರಿಂದ ನೆರವು(ನೆರವು೧) ಪಡೆದುಕೊಳ್ಳುವುದಕ್ಕೂ ನಂಟಿದೆ ಅಂದ ಹಾಗಾಯಿತು.

ಇದರಿಂದ ತಿಳಿಯುವುದೇನೆಂದರೆ ’ಬಳಕೆಯ ನೆಲೆ’ಯಲ್ಲಿರುವ ನಂಟುಗಳು (ಅಂದರೆ ಕೆಲಸ ಪೂರ್ಣಗೊಳಿಸುವುದು ಮತ್ತು ಕೆಲಸಕ್ಕೆ ನೆರವು ತೆಗೆದುಕೊಳ್ಳುವುದು ನಂಟಿಕೊಂಡಿವೆ) ಆಯಾ ಪದಗಳ ಹುರುಳುಗಳನ್ನೂ ನಂಟಿಸುತ್ತವೆ. ಬಳಕೆಯ ನೆಲೆಯಲ್ಲಿ ಹೀಗೆ ಪದಗಳಿಗೆ ಹುರುಳುಗಳನ್ನು ಬೆಸೆಯುವ ಒಂದು ಕ್ರಮ/ಒಲವು ತಾನಾಗಿಯೇ ಬೆಳೆದುಬಂದಿದೆ. ಈ ಒಲವುಗಳನ್ನು ತಿಳಿಯುವುದರಿಂದ ಪದಗಳನ್ನು ಹುಟ್ಟಿಸುವಾಗ ನೆರವಾಗಬಲ್ಲುವು ಅಲ್ಲದೆ ಹುಟ್ಟಿಸುವ ಪದಗಳು ಬಳಕೆಯ ನೆಲೆಗೆ ಹೆಚ್ಚು ಹೊಂದಿಕೊಳ್ಳಬಹುದು. ಇದರಿಂದ ಹುಟ್ಟಿಸಿದ ಪದಗಳು ಚೆನ್ನಾಗಿ ನೆಲೆಗೊಳ್ಳಬಹುದು.

No comments:

Post a Comment