ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Tuesday, October 30, 2012

ಅಕ್ಕಿ

ಅಕ್ಕಿಯೆಂಬುದು ನಮ್ಮ ಊಟ-ತಿಂಡಿಗಳಲ್ಲಿ ಹೆಚ್ಚು ಬಳಸುವ ದಾನ್ಯ. ಎಶ್ಟೊ ಮಂದಿಗೆ ಏನು ತಿಂದರೂ ಒಂದು ತುತ್ತು ಅನ್ನ ತಿನ್ನದಿದ್ದರೆ ಮನ ತಣಿಯುವುದಿಲ್ಲ. ಅಕ್ಕಿಯ ಮತ್ತು ಅದರಿಂದ ಮಾಡುವ ’ಅನ್ನ’ದ ಮೇಲೆ ಹಲವು ಗಾದೆಮಾತುಗಳು ನಿಂತಿವೆ.

೧. ಅಕ್ಕಿ ಮೇಲೂ ಆಸೆ , ನಂಟರ ಮೇಲೂ ಒಲವು
೨. ಅನ್ನ ತಿಂದ ಮನೆಗೆ ಕನ್ನ ಹಾಕಬಾರದು

ಇದಲ್ಲದೆ ಹಲವು ಬಗೆಯ ಅಕ್ಕಿಗಳು ಇಲ್ಲವೆ ಅಕ್ಕಿಯ ಹಾಗೆ ಕಾಣುವ ಬೀಜ ಇಲ್ಲವೆ ದಾನ್ಯಗಳು ಇವೆ. ಕಿಟ್ಟೆಲ್ ಪದನೆರಕೆಯಿಂದ:-

ಅವಲಕ್ಕಿ = ಅವಲ್+ಅಕ್ಕಿ
ಏಲಕ್ಕಿ = ಏಲ+ಅಕ್ಕಿ, ಯಾಲಕ್ಕಿ = ಯಾಲ+ಅಕ್ಕಿ(cardamom)
ಬಿದಿರಕ್ಕಿ = ಬಿದಿರು+ಅಕ್ಕಿ
ಸಬ್ಬಕ್ಕಿ = ಸಬ್ಬ(?)+ಅಕ್ಕಿ
ಕುದಕಲಕ್ಕಿ = ಕುದಕಲ್+ಅಕ್ಕಿ, ಕುಸಲಕ್ಕಿ =ಕುಸಲ್+ಅಕ್ಕಿ
ಬೆಣತಕ್ಕಿ = ಬೆಣತ್+ಅಕ್ಕಿ = ಬೆಳತ್+ಅಕ್ಕಿ ( ಬಿಳಿ ಅಕ್ಕಿ)
ಕೇಸಕ್ಕಿ= ಕೇಸ್+ಅಕ್ಕಿ
ಜೀರಾಸಣ್ಣಕ್ಕಿ, ದಪ್ಪಕ್ಕಿ, ದೇವಮಲ್ಲಿಗೆಯಕ್ಕಿ, ದೊಡ್ಡ ಬಯ್ರ್ ಅಕ್ಕಿ, ಪುಟ್ಟರಾಜಕ್ಕಿ, ಬಗಡೆಯಕ್ಕಿ,
ನವಣೆಯಕ್ಕಿ, ಸಾಮೆಯಕ್ಕಿ, ಹಾರಕದಕ್ಕಿ

ಹಾಗಾದರೆ ’ಅಕ್ಕಿ’ ಎಂಬ ಪದದ ಗುಟ್ಟೇನು ಎಂದು ನೋಡಿದಾಗ:-

ಅರಿ+ಕೆ = ಅರಿಕೆ (ಅರಿ ಎಂಬ ಎಸಕಪದಕ್ಕೆ ’ಕೆ’ ಎಂಬ ಒಟ್ಟನ್ನು ಸೇರಿಸಿ ಅರಿಕೆ ಎಂಬ ಹೆಸರುಪದ ಮಾಡಲಾಗಿದೆ)

ಅರಿ ಎಂಬುದಕ್ಕೆ ಕನ್ನಡದಲ್ಲಿ ’ತುಂಡು ಮಾಡು’, ’ಕತ್ತರಿಸು’ ಎಂಬ ಹುರುಳಿದೆ. Ka. ಅರಿ ari (ಅರಿದ್ arid-) to cut or lop off; n. cutting off, gnawing as vermin, a handful or more of corn cut at one stroke; ಅರಿಸು arisu to cause to cut off; ಅರಿವಾಳ್ arivāḷ, ಅರುವಾಳ್ aruvāḷ sickle.ಅಂದರೆ ಕುಡುಗೋಲು [DED 212]
ಕನ್ನಡಿಗರು(ಒಟ್ಟಂದದಲ್ಲಿ ದ್ರಾವಿಡ ನುಡಿಯಾಡುವವರು) ಮೊದಮೊದಲು ಉಳುಮೆಯನ್ನು ಮಾಡಿ ಬತ್ತದ ಬೆಳೆ ತೆಗೆದು ಈ ರೀತಿ ಕತ್ತರಿಸಿ ಇಲ್ಲವೆ ’ಕಟಾವು’ ಮಾಡಿ ಮೊದಮೊದಲು ಪಡೆದ ದಾನ್ಯ ಈ ’ಅಕ್ಕಿ’ಯೇ ಇರಬೇಕು. ಹಾಗಾಗಿ ’ಅರಿಕೆ’ ಎಂಬುದು ಹೆಸರು ಪದವಾಗಿ ಅದಕ್ಕೆ ’ಕತ್ತರಿಸಿದ್ದು’ ಇಲ್ಲವೆ ’ಕಟಾವು ಮಾಡಿ ತೆಗೆದದ್ದು’ ಹುರುಳಿದೆ. ಕನ್ನಡ ನುಡಿ ಹಿನ್ನಡವಳಿಯನ್ನು ಗಮನಿಸಿದಾಗ ’ರ್’ ಕಾರದ ಮುಂದೆ ಯಾವುದೇ ಮುಚ್ಚುಲಿಯು ಬಂದಾಗ ಈ ’ರ್’ ಕಾರವು ಬಿದ್ದು ಹೋಗಿ ಅದರ ಮುಂದಿನ ಮುಚ್ಚುಲಿಯು ಇಮ್ಮಡಿಯಾಗುತ್ತದೆ.

ಎತ್ತುಗೆಗೆ:
೧. ಸುರ್ಕು => ಸುಕ್ಕು, ಇರ್ಕು => ಇಕ್ಕು, ಉರ್ಕು => ಉಕ್ಕು, ಬೆರ್ಕು => ಬೆಕ್ಕು
೨. ಅರ್ಗಳ => ಅಗ್ಗಳ
೩. ಚುರ್ಚು => ಚುಚ್ಚು, ಮರ್ಚು=> ಮೆಚ್ಚು
೪. ಕರ್ತಲೆ => ಕತ್ತಲೆ
೫. ಉರ್ದು=> ಉದ್ದು, ಮರ್ದು => ಮದ್ದು

ಹಾಗೆಯೇ, ಅರಿಕೆ====ಮಾತಿನ ಸವೆತದಿಂದ ಇ’ಕಾರ ಬಿದ್ದು ಹೋಗಿ===> ಅರ್ಕೆ => ಅಕ್ಕೆ=> ಅಕ್ಕಿ

ಅಕ್ಕೆ => ಅಕ್ಕಿ ಆಗಿರುವುದು ಕನ್ನಡದ ಆಡುನುಡಿಯ ಮಟ್ಟಿಗೆ ಸಹಜವಾದುದೇ. ತೆಂಕು ಮತ್ತು ಬಡಗು ಕರ್ನಾಟಕದ ಆಡುನುಡಿಗಳಲ್ಲಿ ಬರಹಗನ್ನಡದ ಪದದ ಕೊನೆಯಲ್ಲಿರುವ ’ಎ’ಕಾರವು ’ಇ’ಕಾರಕ್ಕೆ ತಿರುಗಿದೆ.

ಎತ್ತುಗೆಗೆ :
ಮನೆ => ಮನಿ(house) - ಬಡಗು ಕರ್ನಾಟಕದಲ್ಲಿ ಮಾತ್ರ
ಬರೆ => ಬರಿ (write) - ತೆಂಕು ಮತ್ತು ಬಡಗು ಕರ್ನಾಟಕ

ಇದೆಲ್ಲಕ್ಕು ಇಂಬು ಕೊಡುವಂತೆ ನಡುವಣ ದ್ರಾವಿಡ ನುಡಿಗುಂಪಿಗೆ ಸೇರಿದ
*ಕೊಲಾಮಿ ನುಡಿಯಲ್ಲಿ Kol. ark- (arakt-) to harvest ಅಂದರೆ ಕಟಾವು/ಸುಗ್ಗಿ ಮಾಡು [DED 212]
*ನೈಕಿ(ಚಂದ) ನುಡಿಯಲ್ಲಿ Nk. (Ch.) ark- to cut paddy, harvest ಅಂದರೆ ಬತ್ತವನ್ನು ಕಡಿ ಇಲ್ಲವೆ ಸುಗ್ಗಿ ಮಾಡು [DED 212]
ನೈಕಿ ನುಡಿಯಲ್ಲಿ ನೇರವಾಗಿ ’ಬತ್ತವನ್ನು ಕಡಿ’ ಎಂಬ ಹುರುಳೇ ಇರುವುದರಿಂದ, ಮೇಲೆ ಹೇಳಿರುವ ’ಅಕ್ಕಿ’ಯ ಪದಗುಟ್ಟಿಗೆ ಇನ್ನಶ್ಟು ಆನೆಬಲವನ್ನು ಒದಗಿಸುತ್ತದೆ. ಇಂಗ್ಲಿಶಿನ ’rice' ಕೂಡ ’ಅರಿಕೆ’(ಅರಿಸಿ arici) ಯಿಂದ ಬಂದಿರಬಹುದು.

 

Saturday, October 27, 2012

ತೊಂಬತ್ತು

ಬಿಡಿಸಿಕೆ:-
          ತೊಮ್+ಪತ್ತು = ತೊಂಬತ್ತು

ಕಿಟ್ಟೆಲ್ ಅವರ ಇಂಗ್ಲಿಶ್-ಕನ್ನಡ ಪದನೆರಕೆಯಿಂದ:-
          ತೊಮ್= previous, before (ಹಿಂದಿರುವುದು, ಮುಂಚೆಯಿರುವುದು)

ನೂರಕ್ಕೆ ಎಶ್ಟು ಮುಂಚೆಯಿರುವುದು/ಹಿಂದಿರುವುದು ತೊಂಬತ್ತು ? ಎಂಬ ಕೇಳ್ವಿ ಹಾಕಿಕೊಂಡರೆ ನೂರಕ್ಕೆ ’ಹತ್ತು’ ಹಿಂದಿರುವುದು ಯಾವುದು ಅದೇ ’ ತೊಂಬತ್ತು’ ಎಂಬ ಹುರುಳನ್ನು ಕೊಡುತ್ತದೆ Ka. tom-battu
ninety. Koḍ. tom-badï ninety. Tu. soṇpa ninety  [DED 3532]

ತಮಿಳಿನಲ್ಲಿ ಇದು ಕೊಂಚ ಬದಲಾಗಿದೆ. ’ಹತ್ತ’ರ ಬದಲು ’ನೂರು’ ಬಂದಿದೆ. ಅಂದರೆ ನೂರಕ್ಕೆ ಹಿಂದಿರುವುದೇ ’ತೊಣ್ಣೂರು’(=ninety=ತೊಂಬತ್ತು) Ta.  toṇ-ṇūṟu ninety [DED 3532]
  ಇಲ್ಲೆಲ್ಲ ’ತೊಮ್’ (ಕನ್ನಡ ಮತ್ತು ಕೊಡಗು ನುಡಿಗಳಲ್ಲಿ) ಎಂಬ ಮುನ್ನೊಟ್ಟು ಬಳಕೆಯಾಗಿದೆ. ತುಳುವಿನಲ್ಲಿ ಸೊಣ್ಆಗಿದೆ; ತಮಿಳಿನಲ್ಲಿ ’ತೊಣ್’ ಆಗಿದೆ.

Thursday, October 25, 2012

ಕಾವಲು

ಕಾವಲು ಎಂಬುದು ಮಂದಿಯಾಳ್ವಿಕೆಯ ಈ ಕಾಲದಲ್ಲಿ ಹೆಚ್ಚು ತಲೆಮೆಯನ್ನು ಪಡೆದಿರುವ ಪದ. ಈಗ ಮಂದಿಯ ಕಾವಲಿಗೆ 'ಕಾವಲು ಪಡೆ'(police force) ಇದೆ. ಮಕ್ಕಳಿಗೆ ಅವರ ತಾಯ್ತಂದೆಯರು ಕಾವಲಿದ್ದಾರೆ. ತಂಗಿಗೆ ಅಣ್ಣನ ಕಾವಲು. ಕೆಲವರಿಗೆ ಗೆಳೆಯರ ಕಾವಲು. ದೇಶದ ಗಡಿಗಳಲ್ಲಿ ಪಡೆಯ ಕಾವಲು.  ಹಳ್ಳಿಗಳಲ್ಲಿ ದನ, ಎಮ್ಮೆ, ಕುರಿಗಳನ್ನು 'ಕಾಯು'ವುದು - ಹೀಗೆ ಈ 'ಕಾವಲು' ಹಲವು ನೆಲೆಗಳಲ್ಲಿ ಹರಡಿಕೊಂಡಿದೆ.

ಕಾ kā (kād-), ಕಾಯ್ kāy (kād-/kāyd-), ಕಾಯಿ kāyi (kāyid-) to guard, protect, keep, save, tend, watch, keep in check;
ಕಾಯು kāyu (kād-) id., to wait; kāyisu to make guard, watch;
ಕಾಪು, ಕಾಹು kāpu, kāhu guarding, protecting, preserving, that which preserves;
ಕಾಪಾಡು kāpāḍu to guard, take care of;
ಕಾಯಿ, ಕಾಹಿ kāyi, kāhi person who tends, watches, guards;
ಕಾಯಿಕೆ kāyike guarding, etc.;
ಕಾವಲ್, ಕಾವಲ, ಕಾವಲಿ, ಕಾವಲು kāval, kāvala, kāvali, kāvalu guarding, protecting, watching, a guard, custody, place where anything is guarded [DED 1416]

ಆದರೆ ಯಾವುದೇ ವಸ್ತು ಇಲ್ಲವೆ ವ್ಯಕ್ತಿಯನ್ನು ಕಾಯುವಾಗ ಆ ವ್ಯಕ್ತಿ/ವಸ್ತುವನ್ನು ಕವಿಯಬೇಕಾಗುತ್ತದೆ. ಎತ್ತುಗೆಗೆ ತಾಯಿ ಇಲ್ಲವೆ ತಂದೆಯು ಮಗುವನ್ನು ತೋಳಿನಿಂದ ಬಳಸಿ ತಬ್ಬಿ ಮಕ್ಕಳಿಗೆ ಕಾವಲನ್ನು ಒದಗಿಸುತ್ತಾರೆ. ಹಾಗಾಗಿ ಮಗುವಿಗೆ ಹೊರಗಿನ ಚಳಿ, ಬಿಸಿಲು ಮತ್ತು ಇನ್ನಾವುದೇ ವಸ್ತುವಿನಿಂದ ಉಂಟಾಗುವ ತೊಂದರೆಯಿಂದ ಮಗುವನ್ನು ರಕ್ಶಿಸುತ್ತಾರೆ. ಅಶ್ಟೆ ಏಕೆ ಬಟ್ಟೆ/ಬೆಚ್ಚುಡುಪುಗಳನ್ನು ಉಡುವುದು ಕೂಡ ಬಿಸಿ, ಮಳೆ ಮತ್ತು ಚಳಿ ಮತ್ತಿತರೆ ಹೊರಗಿನವುಗಳಿಂದ ಮಯ್ಯನ್ನು ಪೊರೆಯುವುದಕ್ಕೇ ಅಲ್ಲವೆ?

ಇದರಿಂದ ತಿಳಿಯುವುದೇನೆಂದರೆ ಕಾಯುವುದಕ್ಕೆ ಇಲ್ಲವೆ ಕಾವಲಿಗೆ ಈ 'ಕವಿಯುವ' ಆಗುಹ ಇರಲೇಬೇಕು. ಕವಿಯದೇ/ಆವರಿಸದೆ(without covering) ಯಾವುದೇ ವಸ್ತು/ವ್ಯಕ್ತಿಯನ್ನು ಕಾಯುವುದು(ಕಾವಲು ಕೊಡುವುದು) ಆಗುವುದೇ ಅಲ್ಲ ಅತವಾ ಅದಕ್ಕೆ ಅರ್ತವೇ ಇಲ್ಲ. ಹಾಗಾಗಿ 

          ಕವಿ => ಕಾಪು=> ಕಾಹು=> ಕಾವಲ್ => ಕಾವಲು

ಕವಿಯುವುದರಿಂದಲೇ ಕಾಯುವುದು ಸಾದ್ಯವಾಗುವ ಕಾರಣ  'ಕಾವಲು' ಎಂಬ ಪದ 'ಕವಿ'ಯಿಂದ ಬಂದಿರಬೇಕು. ಹಾಗಾಗಿ ಕವಿ ಎಂಬುದಕ್ಕೆ ಕೊಟ್ಟಿರುವ ಹುರುಳುಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ.
ಕಪ್ಪು kappu to cover; spread, extend, overspread, surround;
ಕವಿ kavi to cover, overspread, come upon, rush upon, attack; n. a rushing upon, etc.;
ಕವಿಚು, ಕವಚು, ಕವುಚು kavicu, kavacu, kavucu to put upon, cause to come upon, etc.;
ಗವಸಣಿ, ಗವಸಣಿಕೆ, ಗವಸಣಿಗೆ gavasaṇi, gavasaṇike, gavasaṇige a cover, wrapper, case; gavasaṇisu to cover, wrap [DED 1221]

Monday, October 22, 2012

ರೊಟ್ಟಿ

  'ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ' ಎಂದಾಗ ಬಾಯಲ್ಲಿ ನೀರೂರುವುದು ಸಹಜ. ಇದಲ್ಲದೆ ಅಕ್ಕಿ ರೊಟ್ಟಿ, ಜೋಳದ ರೊಟ್ಟಿಯೂ ಕೂಡ ಮಾಡಲಾಗುತ್ತದೆ. ರೊಟ್ಟಿ ಬಡವರ ಮನೆಯ ತಿಂಡಿಯೂ ಹವ್ದು , ಉಳ್ಳವರ ತಿಂಡಿಯೂ ಹವ್ದು.
ಹಾಗಾದರೆ ರೊಟ್ಟಿಗೆ ಆ ಹೆಸರು ಬರಲು ಕಾರಣವೇನು ಎಂದು ಹುಡುಕಿದಾಗ

[DED 664]
ಉರುಳ್, ಉರಳು, ಉರಟು, ಉರಂಟು, ಉರುಟು, ಉರುಂಟು, ಉರ್ಟು, ಉರ್ಳು, ಉಳ್ಳು, ಉಂಟು uruḷ, uraḷu, uraṭu, uraṇṭu, uruṭu, uruṇṭu, urṭu, urḷu, uḷḷu, uṇṭu to roll, roll down, revolve, be turned over;
ಉಳುತು uḷutu to roll;
ಉರಳಿ, ಉರುಳಿ, ಉರ್ಳಿ, ಉಳ್ಳ, ಉಳ್ಳೆ, ಒಳ್ಳಿ uraḷi, uruḷi, urḷi, uḷḷa, uḷḷe, oḷḷi a ball, bulb, round vessel of earth or metal;
ಉರುಳು, ಉರುಟು, ಉರುಂಟು,ಉರ್ಳು, ಉರಲ್, ಉರ್ಲು uruḷu, uruṭu, uruṇṭu, urḷu, ural, urlu rolling, roundness;
ಉರಣೆ uraṇe roller for moving logs;
ಉರುಳಿಕೆ uruḷike rolling, revolving;
ಉರುಳಿಚು, ಉರುಳಿಸು, ಉರುಳ್ಚು uruḷicu, uruḷisu, uruḷcu to cause to roll, etc.;
ಉಟ್ಟು uṭṭu round stone used as an anchor, an anchor;
ಉಣ್ಡೆ uṇḍe a round mass or ball (e.g. of raw sugar, tamarind, clay, cowdung);

ಈ ಮೇಲಿನ ಪದಗಳನ್ನು ನೋಡಿದರೆ  ಉರುಟು ಎಂಬ ಪದಕ್ಕೆ  ಉರುಳುವುದು(rolling) ಇಲ್ಲವೆ ದುಂಡುತನ(roundness) ಎಂಬ ಹುರುಳಿದೆ ಎಂಬುದು ತಿಳಿಯುವುದು.

ಈಗ ರೊಟ್ಟಿಯನ್ನು ಹೇಗೆ ಮಾಡುತ್ತಾರೆ ಮತ್ತು ರೊಟ್ಟಿ ಯಾವ ಪರಿಜ(ಆಕಾರ)ಲ್ಲಿರುತ್ತದೆ ಎಂಬುದನ್ನು ನೋಡೋಣ:-
ಹಿಟ್ಟನ್ನು ತೆಗೆದುಕೊಂಡು ಮಣೆಯ ಮೇಲೆ ಹಾಕಿ ಲಟ್ಟಣಿಗೆಯನ್ನು ಹಿಟ್ಟಿನ ಮೇಲೆ ಅಮುಕಿ ಉರುಳಿಸಬೇಕು(means rolling). ಹೀಗೆ ಮತ್ತೆ ಲಟ್ಟಣಿಗೆಯನ್ನು ಉರುಳಿಸುವುದರಿಂದ ಹಿಟ್ಟು ತೆಳುವಾಗಿ ರೊಟ್ಟಿಯ ಪರಿಜಿಗೆ ಅಂದರೆ ದುಂಡಗೆ ಆಗುತ್ತದೆ. ಹಾಗಾಗಿ ಹೀಗೆ ಉರುಳಿಸಿ ಉರುಳಿಸಿ ಮಾಡಿದುದನ್ನು  'ಉರುಟಿ'(one which is rolled) ಎನ್ನಲು ಆಗುತ್ತದೆ.
    ಉರುಟು +ಇ  = ಉರುಟಿ

ಉರುಟಿ ಅಂದರೆ ಉರುಟಿಸಿ ಉರುಟಿಸಿ ಮಾಡಿದ್ದು.
ಉರುಟಿ ಅಂದರೆ ಉರುಟಾಗಿ ಇರುವುದು ಅಂದರೆ ದುಂಡಗೆ(round) ಇರುವುದು.

ಈಗ ಉಲಿಕದಲಿಕೆಯ ಬಗ್ಗೆ ನೋಡೋಣ. ಕನ್ನಡದಲ್ಲಿ(ಇಲ್ಲವೆ ದ್ರಾವಿಡ ನುಡಿಗಳಲ್ಲಿ )ಉಲಿಕದಲಿಕೆಯಾದಾಗ
   "ಪದದ ಮೊದಲಲ್ಲಿರುವ ತೆರೆಯುಲಿಯು ಬಿದ್ದು ಹೋಗುತ್ತದೆ. ಮತ್ತು  ಅದೇ ಗುಂಪಿನ ಉದ್ದ ತೆರೆಯುಲಿ ಪದದ ಎರಡನೇ ಬರಿಗೆಗೆ ಅಂದರೆ ಮುಚ್ಚುಲಿಗೆ ಬಂದು ಸೇರಿಕೊಳ್ಳುತ್ತದೆ"

ಕನ್ನಡದಲ್ಲಿ 'ಯ' ಮತ್ತು 'ವ' ಗುಂಪು ಎಂದು ತೆರೆಯುಲಿಗಳನ್ನು ಗುಂಪಿಸಬಹುದೆಂದು ಈ ಮಿಂಬರಹದಲ್ಲಿ ತೋರಿಸಿಕೊಡಲಾಗಿದೆ. ಅದರ ಪ್ರಕಾರ :-
ಯ - ಇ, ಈ, ಎ, ಏ,
ವ - ಅ,ಆ, ಉ, ಊ, ಒ, ಓ

'ಉರುಟಿ' ಎಂಬುದನ್ನು ಉಲಿಕಂತೆಯ ರೂಪದಲ್ಲಿ ಬರೆದರೆ ಹೀಗಿರುತ್ತದೆ: 
    ಉ+ರ್+ಉ+ಟ್+ಇ

ಉಲಿಕದಲಿಕೆ ಆದ ಮೇಲೆ ಅಂದರೆ 'ಉ' ಕಾರ ಬಿದ್ದು ಹೋಗಿ ಅದರ 'ಉಲಿಕದಲಿಕೆಯ ಜೋಡಿ'ಯಾದ 'ಓ'ಕಾರ ಬಂದು ಸೇರುವುದು ಮುಂದಿನ ಮುಚ್ಚುಲಿಯ ಜೊತೆ
.
   _ + ರ್+ಓ+ಟ+ಇ

ಇದನ್ನು ಕೂಡಿಸಿ ಬರೆದಾಗ

         ರೋಟಿ  ಎಂದಾಗುತ್ತದೆ.

ಇನ್ನು ಕನ್ನಡದಲ್ಲಿ ನಾಲ್ಕು ಉಲಿಗಳ ಪದಗಳಲ್ಲಿ ಅಂದರೆ 'ಮುತೆಮುತೆ' ( ಮು=ಮುಚ್ಚುಲಿ, ತೆ=ತೆರೆಯುಲಿ) ಮಾದರಿಯ ಪದಗಳಲ್ಲಿ ಮಾರ್ಪಾಗುವಾಗ ಕೆಲವು ಒಲವುಗಳನ್ನು ಗಮನಿಸಬಹುದು

     ಮುತೆಮುತೆ <=> ಮುತೆಮುಮುತೆ         ತಾಟು      <=> ತಟ್ಟೆ
         ಕೇಡು      <=> ಕೆಟ್ಟು
         ನೀಳ       <=> ನಿಟ್ಟು
         ಆಡೆ        <=> ಅಟ್ಟೆ (leech)
         ಪಾಡಿ      <=> ಪಟ್ಟಿ  (village, hamlet)
         ಪಾಚಿ      <=> ಪಚ್ಚೆ

ಎಡದಲ್ಲಿ ಕೊಟ್ಟಿರುವ ಪದಗಳಲ್ಲಿ ತಾ, ಕೇ, ನೀ, ಆ, ಪಾ ಎಂಬಲ್ಲಿರುವ ಉದ್ದ ತೆರೆಯುಲಿಯು ಮರ್ಪಾಟಾದ ಮೇಲೆ ಗಿಡ್ಡವಾಗುತ್ತದೆ. ಹೀಗೆ ಗಿಡ್ದವಾಗುವುದರಿಂದ ಆಮೇಲೆ ಬರುವ ಮುಚ್ಚುಲಿ ಇಮ್ಮಡಿಯಾಗುತ್ತದೆ. ಹಾಗಾಗಿ ಮೇಲಿನ ಪದಗಳಲ್ಲಿ ಟ್ಟೆ, ಟ್ಟು, ಚ್ಚೆ ಎಂಬ ಎಂಬ ಉಲಿಕಂತೆಯನ್ನು ಗಮನಿಸಬಹುದು.
     
ಹಾಗೆಯೇ,
    ರೋಟಿ <=> ರೊಟ್ಟಿ   ಅಂತ ಆಗಿದೆ

Saturday, October 13, 2012

ಕಾವೇರಿ

ತೆಂಕು ಕರ್ನಾಟಕದ ಬಲು ತಲೆಮೆಯ ಹೊಳೆಯೇ ಕಾವೇರಿ. ಕಾವೇರಿ ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿದರೂ ಮಂಡ್ಯ, ಮಯ್ಸೂರು ಮತ್ತು ಬೆಂಗಳೂರು ಕಂಪಣಗಳಿಗೆ ಈ ಹೊಳೆಯ ನೀರು ಬಳಕೆಯಾಗುವುದು ಹೆಚ್ಚು. ಕಾವೇರಿಯನ್ನು ’ಉಸಿರುಹೊಳೆ’(ಜೀವನದಿ) ಎಂದೂ ಕರೆಯುವುದುಂಟು. ಹಾಗಾದರೆ ಕಾವೇರಿ ಎಂಬ ಹೆಸರು ಹೇಗೆ ಬಂತು?

ಮೊದಲು, ಪಡುವಣ ಬೆಟ್ಟಗಳಲ್ಲಿ ಕಾಣಸಿಗುವ ಈ ಮರದ ಹೆಸರುಗಳ ಬಗ್ಗೆ ನೋಡೋಣ:-

ಕನ್ನಡದಲ್ಲಿ ಕಾಜವಾರ, ಕಾಜಿವಾರ, ಕಾಸರ, ಕಾಸರಕ, ಕಾಸರ್ಕ, ಕಾಸಾರಕ, ಕಾಸ್ರ
ತುಳುವಿನಲ್ಲಿ ಕಾಯೆರ್
ಕೊರಗದಲ್ಲಿ ಕಾವೇರಿ (ಇದು ಗಮನಿಸಬೇಕಾದ ಪದ)
ತಮಿಳಿನಲ್ಲಿ ಕಾಂಜಿರಯ್, ಕಾಂಜಿರಮ್
ಮಲೆಯಾಳದಲ್ಲಿ ಕಾಂಇರಮ್

Ka. kājavāra, kājivāra, kāñjira, kāsara, kāsarka, kāsarike, kāsāraka, kāsra strychnine tree(Strychnos nux vomica)
Tu. kāyer&uring; Nux vomica.
Kor. (O.) kāvēri a kind of tree (= Tu. kāyer&uring;).
Ta. kāñcirai, kāñciram strychnine tree.
Ma. kāññiram Strychnos nux vomica.   [DED - 1434]

ಪ್ರಜಾವಾಣಿ ಸುದ್ದಿಹಾಳೆಯ ಬರಹವನ್ನು ನೋಡಿದರೆ ಪಡುವಣ ಬೆಟ್ಟದ ಮಳೆಕಾಡುಗಳಲ್ಲಿ ಈ ಗಿಡ/ಮರ ಬೆಳೆಯುವುದು ಎಂದು ಹೇಳಲಾಗಿದೆ. ಹಾಗೆ ನೋಡಿದರೆ ತಲಕಾವೇರಿಯು ಕೂಡ ಪಡುವಣ ಬೆಟ್ಟದ ಮಗ್ಗುಲಲ್ಲೇ ಇದೆ.

"ಪಶ್ಚಿಮಘಟ್ಟದ ಯಡಕುಮೇರಿ ಹಾಗೂ ಕಾಗಿನಹರೆ ಕಾಯ್ದಿರಿಸಿದ ದಟ್ಟ ಮಳೆಕಾಡಿನಲ್ಲಿ ಹಾಲೆ (ಅಲ್ಟೋನಿಯಾ ಸ್ಕೋಲೋರೀಸ್), ಕಾಸರ್ಕ (ಸ್ಟ್ರಿಕ್ಟನೆಸ್ ನೆಕ್ಸೋಮಿಕಾ), ಬೋಗಿ(ಹೋಪಿಯಾ ಪೋಂಗಾ) ಹೊಂಗೆ (ಹೊಂಗೇನಿಯಾ ಪಿನ್ನಾಟ) ಕಿರೋಲ್ ಬೋಗಿ, (ಹೋಪಿಯಾ ಫರ‌್ವಿಪ್ಲೋರಾ) ರಕ್ತದ ಮರ, ದೂಪದ ಮರ (ವೆಟೆರಿಯಾ ಇಂಡಿಕಾ) ಸಾಗವಾನಿ (ಟೆಕ್ಟೋನಾ ಗ್ರಾಂಡೀಸ್) ಕಾಡು ಶುಂಠಿ, ಕಾಡು ಸೊಪ್ಪು, ವಾಟೆ ಬಿದಿರು, ಚಕ್ರಾಣಿ, ಕಾಡು ಅಮೃತ ಬಳ್ಳಿ, ಕಾಡು ಮಾವು, ಗುಳಿಮಾವು, ನಂದಿ, .. ಹೀಗೆ ಸಾವಿರಾರು ಬಗೆಯ ಸಸ್ಯ ಸಂಪತ್ತು, ಔಷಧೀಯ ಗಿಡಮೂಲಿಕೆಗಳು ಇವೆ."

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ಮಳೆಕಾಡುಗಳ ಪಡುವಣಕ್ಕೆ ಅಂದರೆ ಕೇರಳದ ಕಡೆಗೆ ಹೋದರೆ ’ಕಾಸರಗೋಡು’ ಎಂಬ ಊರು ಸಿಗುತ್ತದೆ. ಹಾಗಾಗಿ ಪಡುವಣದ ಈ ಮಳೆ ಕಾಡುಗಳ ನಡುವೆ/ಹತ್ತಿರ ಈ ಹೆಸರಿನ ಊರುಗಳು ಇರಬಹುದು. ಇದಕ್ಕೆ ಈ ಕಾಸರ್ಕ ಎಂಬ ಈ ಮರವೇ ಕಾರಣವಾಗಿರಬಹುದು.  ಇದೇ ಕಾಡುಗಳಲ್ಲಿ ಹುಟ್ಟುವ ಈ ಹೊಳೆಗೆ ’ಕಾವೇರಿ’ ಎಂದು ಏಕೆ ಹೆಸರು ಬಂದಿರಬಾರದು ಅಂತ ಅನ್ನಿಸಿತು. ಮೇಲೆ ತಿಳಿಸಿದಂತೆ ಅಚ್ಚ ಕೊರಗ ನುಡಿಯಲ್ಲಿ ಕಾವೇರಿ ಅಂದರೆ ’ಒಂದು ತೆರದ ಮರ’ ಎಂಬ ಹುರುಳೇ ಇದೆ.

Wednesday, October 10, 2012

ಕಬ್ಬು

ಕಾವೇರಿ ಚಳುವಳಿಯಿಂದ ಮಂಡ್ಯ ತುಂಬ ಸುದ್ದಿಯಲ್ಲಿದೆ. ಮಂಡ್ಯ ಅಂದೊಡನೆ ನೆನಪಿಗೆ ಬರುವುದು ಕಬ್ಬು ಮತ್ತು ಸಕ್ಕರೆ ಕಯ್ಗಾರಿಕೆಗಳು. ಮಂಡ್ಯದಲ್ಲಿ ಹೆಚ್ಚು ಕಬ್ಬು ಬೆಳೆಯುವುದರಿಂದ ಇಲ್ಲಿ ಆಲೆಮನೆಗಳು(ಕಬ್ಬನ್ನು ಅರೆಯುವ ಮನೆ) ಕೂಡ ಹೆಚ್ಚಾಗಿವೆ. ಆಲೆಮನೆಗಳಲ್ಲಿ ಮಾಡುವ ಬಕೆಟ್ ಬೆಲ್ಲ ಕೂಡ ಹೆಸರುವಾಸಿಯಾಗಿದೆ. ನಾವು ದಿನಾಲು ಬಳಸುವ ಸಕ್ಕರೆ ಮತ್ತು ಬೆಲ್ಲಗಳನ್ನು ಮಾಡುವುದು ಈ ಕಬ್ಬಿನಿಂದಲೇ ಎಂಬುದು ಗೊತ್ತಿರುವುದು. ಹಾಗಾದರೆ ’ಕಬ್ಬು’ ಅಂತ ಅನ್ನುವುದು ಏತಕ್ಕೆ ಎಂದು ಉಂಕಿಸಿದಾಗ

ಕರ್ವು, ಕರ್ಬು, ಕಬ್ಬು Ka. karvu, karbu, kabbusugar-cane. [DED 1288]
ಕಬ್ಬಿನ ಬಲು ತಲೆಮೆಯ ಪರಿಚೆ(ಗುಣ)ಗಳಲ್ಲಿ ಗಟ್ಟಿತನ ಮತ್ತು ಸಿಹಿತನಗಳು. ಅಶ್ಟು ಸುಲಬವಾಗಿ ಕಬ್ಬನ್ನು ತುಂಡರಿಸಲು ಆಗದು. ಗಿಣ್ಣಿಗೆ ಸರಿಯಾಗಿ ಹೊಡೆದು ಆಮೇಲೆ ಸಿಪ್ಪೆಯನ್ನು ಸುಲಿದು ಇದನ್ನು ತಿನ್ನಬಹುದು. ಇದನ್ನು ತಿನ್ನಲು ಹಲ್ಲು ಗಟ್ಟಿಯಾಗಿರಬೇಕು. ಇಶ್ಟೆಲ್ಲ ಹೇಳಿದ ಮೇಲೆ ಇದರ ಗಟ್ಟಿತನವೇ ಈ ಹೆಸರು ತಂದು ಕೊಟ್ಟಿರಬಹುದೆಂದು ಅನ್ನಿಸದೇ ಇರದು.

ಕನ್ನಡದಲ್ಲಿ ’ಕರು’ ಎಂಬು ಇನ್ನೊಂದು ಪದವಿದೆ. ಕರುಮಾರಿಯಮ್ಮ, ಕರುನಾಡು ಎಂಬಲ್ಲಿರುವುದು ಈ ’ಕರು’ವೇ. ಇದಕ್ಕೆ ಇರುವ ಹುರುಳುಗಳು ಹೀಗಿವೆ.
Ka. kara, karu greatness, abundance, power.  [DED 1287]ಇದರಲ್ಲಿ ನಾವು ’power' ಎನ್ನುವ ಹುರುಳನ್ನು ಗಮನಿಸಿದರೆ ಗಟ್ಟಿಯಾದುದು, ಬಿರುಸಾದುದು, ಕಲ್ಲಿನಂತಾದುದು ಎಂಬುದನ್ನು ಗಮನಿಸಬಹುದು. ಇನ್ನು ದ್ರಾವಿಡ ನುಡಿಯೇ ಆದ ಮಲೆಯಾಳದಲ್ಲಿ ಇದಕ್ಕೆ ತಿಳಿಯಾಗಿ ಈ ಹುರುಳುಗಳೇ ಇವೆ. Ma. karu, kaṟu stout, hard; karuma hardness, strength of a man; [DED 1287] ಅಂದರೆ ಗಟ್ಟಿಯಾದುದು, ಬಿರುಸಾದುದು, ಕಲ್ಲಿನಂತಾದುದು ಎಂಬುದನ್ನು ಗಮನಿಸಬಹುದು. ಹಾಗಾಗಿ

ಕರು+ಪು = ಕರ್+ಪು = ಕರ್ವುಇದು ಹಳೆಗನ್ನಡದ ಪದ. ಇದನ್ನೆ ಹೊಸಗನ್ನಡಕ್ಕೆ ತಂದಾಗ ’ವ’ -> ’ಬ’ ಆಗಿರುವುದನ್ನು ಕಾಣಬಹುದು.

ಕರ್ವು => ಕವ್ವು => ಕಬ್ಬು

ಈ ರೀತಿ (ವ->ಬ) ಆಗಿರುವುದಕ್ಕೆ ಹಲವು ಎತ್ತುಗೆಗಳನ್ನು ಕೊಡಬಹುದು:-
ಕರ್+ಪೊನ್ = ಕರ್ವೊನ್ = ಕರ್ಬೊನ್ => ಕಬ್ಬಿಣ
ಪೆರ್+ಪುಲಿ => ಪೆರ್ವುಲಿ => ಪೆಬ್ಬುಲಿ => ಹೆಬ್ಬುಲಿ
ಪೆರ್+ಪಾವು => ಪೆರ್ವಾವು => ಪೆಬ್ಬಾವು => ಹೆಬ್ಬಾವು
ಈರ್+ಅವರ್ => ಈರ್ವರ್ => ಇಬ್ಬರ್

Sunday, October 7, 2012

ಕಣ್ಣು, ಕಿವಿ

ಮನುಶ್ಯನಿಗಿರುವ ಅರಿವಿನ ನೆರುಗಳಲ್ಲಿ (Sensory organs) ಬಲುತಲೆಮೆಯದ್ದು ಕಣ್ಣು ಮತ್ತು ಕಿವಿ. ಕಣ್ಣಿನಿಂದ ಕಾಣುವುದು ಇಲ್ಲವೆ ನೋಡುವುದು, ಕಿವಿಯಿಂದ ಕೇಳುವುದು ಇಲ್ಲವೆ ಆಲಿಸುವುದಕ್ಕೆ ಬರುತ್ತದೆ. ಕಣ್ಣಿಲ್ಲದವನಿಗೆ ಕುರುಡ ಮತ್ತು ಕಿವಿ ಕೇಳಿಸದವನಿಗೆ ಕಿವುಡ, ಕೆಪ್ಪ ಎಂಬ ಪದಗಳು ಇವೆ. ಹೀಗೆ ಅವುಗಳ ಕೆಲಸಗಳಲ್ಲಿರುವ ಹೋಲಿಕೆಯನ್ನು ಗಮನಿಸಿ ಅಂದರೆ ಹೊರಜಗತ್ತಿನೊಂದಿಗೆ ಒಡನಾಟ ನಡೆಸಲ ನೆರವಾಗುವ ಪರಿಚೆಯನ್ನು ಗಮನಿಸಿ ಅವನ್ನು ಅರಿವಿನ ನೆರುಗಳು ಎಂದು ಒಂದೇ ಸೂರಿನಡಿ ಅರಿಗರು ಗುರುತಿಸಿದ್ದಾರೆ. ಹಾಗೆಯೇ ಅವುಗಳ ಇಟ್ಟಳ(structure) ದಲ್ಲಿರುವ ಹೋಲಿಕೆಯ ಮೇಲೆ ಕಣ್ಣು, ಕಿವಿ ಪದಗಳು ಒಂದೇ ಪದಬೇರಿನಿಂದ ಬಂದಿದೆ ಎಂದು ಹೇಳಬಹುದು. - ಇವೆರಡರ ಇಟ್ಟಳದಲ್ಲಿ ಪುದುವಾದ(common) ಪರಿಚೆಯೊಂದಿದೆ. ಅದೇ ’ತೂತು’ (narrow opening) ..ಹೇಗೆ ? ಮುಂದೆ ನೋಡೋಣ

ಈ ಕಣ್ಣು ಮತ್ತು ಕಿವಿ ಎಂಬುದಕ್ಕೆ ಇರುವ ಹುರುಳುಗಳನ್ನು ನೋಡೋಣ
ಕಣ್ Ka. kaṇ
eye, small hole, orifice [DED 1559]
ಕಿವಿ, ಕಿಮಿ, ಕೆಮಿ Ka. kivi, kimi
(Hav.) kemi ear [DED1977]

ಕಿಂಡಿ, ಕನ್ನ  ಎಂಬ ಪದಗಳೂ ತೂತು ಎಂಬ ಹುರುಳನ್ನೇ ಹೊಂದಿದೆ
ಕಂಡಿ, ಕಿಂಡಿ, ಗಿಂಡಿ Ka. kaṇḍi, kiṇḍi, gaṇḍi chink, hole, opening [DED 1176] ಅಂದರೆ ತೂತು
ಕನ್ನ . Ka. kanna hole made by burglars in a housewall, chink. [DED 1412] ಅಂದರೆ ಕಳ್ಳರು ಕದಿಯುವಕ್ಕೆ ಮಾಡುವ ತೂತು.

ಕೊಡಗು ನುಡಿಯಲ್ಲಿ ಕಿಂಡಿ ಎಂದರೆ ಈ ಹುರುಳೂ ಉಂಟು- ಕಿಣ್ಡಿ Koḍ. kïṇḍi small metal vessel with spout ಅಂದರೆ ತೂತಿರುವ ಲೋಹದ ಪಾತ್ರೆ ಎಂಬ ಹುರುಳು

ಕಂಕಿ Ka. kaṅki, kaṅku an ear of jōḷa or sejje, [DED 1084] .ಅಂದರೆ ಜೋಳದ ಕಿವಿ ಇಲ್ಲವೆ ಜೋಳದ ತಿರುಳು.
ಕಣಮೆ, ಕಣವೆ, ಕಣಿಮೆ, ಕಣಿವೆ Ka. kaṇame, kaṇave, kaṇime, kaṇive narrow pass between two mountains, [DED1163] ಅಂದರೆ ಎರಡು ಬೆಟ್ಟಗಳ ನಡುವೆ ಇರುವ ಕಿರಿದಾದ/ಇಕ್ಕಟ್ಟಾದ ತಾವು. ಮೇಲಿನಿಂದ ನೋಡಿದರೆ ಇದು ತೂತೇ.

ಈ ಎಲ್ಲ ಪದಗಳನ್ನು ನೋಡಿದ ಮೇಲೆ ಕನ್ನಡದಲ್ಲಿ ಎರಡು ಪದಬೇರುಗಳಿವೆ ಎಂಬುದನ್ನು ಗಮನಿಸಬಹುದಾಗಿದೆ.

೧. ಕಣ್,ಕನ್, ಕಂ - ಇದರಿಂದ ಉಂಟಾದ ಕಣ್ಣು, ಕನ್ನ, ಕಂಡಿ ಎಂಬ ಪದಗಳು ಬಳಕೆಯ ನೆಲೆಯಲ್ಲಿವೆ
೨. ಕೆಮ್,ಕೆಂ - ಇದರಿಂದ ಉಂಟಾದ ಕೆಮಿ/ಕಿವಿ, ಕಿಂಡಿ ಎಂಬ ಪದಗಳು ಬಳಕೆಯ ನೆಲೆಯಲ್ಲಿವೆ

ಇವೆರಡಕ್ಕೂ ಇರುವ ಬೇರುಹುರುಳು(root meaning) ತೂತು ಇಲ್ಲವೆ ಇಕ್ಕಟ್ಟಾದ ಕಿರಿದಾದ ತೆರಹು ಎಂಬುದೇ ಆಗಿದೆ. ಹಾಗಾಗಿ ಕಣ್ಣು ಮತ್ತು ಕಿವಿಗಳು ಮನುಶ್ಯನ ಮಯ್ಯಲ್ಲಿರುವ ’ತೂತು’ಗಳೇ. ಹುರುಳಿನ ನೆಲೆಯಲ್ಲಿರುವ ಈ ತೂತುತನ ಉಲಿಕೆಯ ನೆಲೆಗೆ ಹರಡಿದೆ. ಕಣ್ ಮತ್ತು ಕೆಮಿ ಎಂಬ ಪದಗಳ ಉಲಿಕಂತೆಯನ್ನು ಬಿಡಿಸಿದ ರೂಪ ಹೀಗೆ ತೋರುವುದು.

ಕ್+ಅ+ಣ್
ಕ್+ಎ+ಮ್+ಇ

ಇಲ್ಲಿ ಗಮನಿಸಬೇಕಾದದ್ದು ಎರಡೂ ಪದಗಳೂ ಕ್ ಎಂಬ ಮುಚ್ಚುಲಿಯೊಂದಿಗೆ ಸುರುವಾಗಿ ಣ್,ಮ್ ಎಂಬ ಮೂಗುಲಿಯೊಂದಿಗೆ ಕೊನೆಗುಳ್ಳುತ್ತದೆ. ಮತ್ತೆ, ಆ ಪದಗಳ ಉಲಿಕೆಯಲ್ಲಿರುವ ಹೋಲಿಕೆಗಳು ಅವುಗಳ ಹುರುಳುಗಳಲ್ಲಿರುವ ಹೋಲಿಕೆಯನ್ನೇ ಎತ್ತಿ ತೋರಿಸುತ್ತವೆ ಎಂಬುದನ್ನು ಇದರಿಂದ ನಾವು ತಿಳಿಯಬಹುದು.

Friday, October 5, 2012

ಮಂಡ್ಯ

ಮಂಡ್ಯ ಜಿಲ್ಲೆಯು ಸಕ್ಕರೆ ನಾಡು, ಕಾವೇರಿ ಕೊಳ್ಳದ ನಡುನಾಡು ಎಂಬುದಲ್ಲದೆ ಮಂಡ್ಯ ಬೆಣ್ಣೆ, ಮಂಡ್ಯ ಬಕೀಟ್ ಬೆಲ್ಲ ಇವಕ್ಕೆಲ್ಲ ಹೆಸರಾಗಿದೆ. ಕಾವೇರಿ ಚಳುವಳಿಯ ತವರೂರೇ ಮಂಡ್ಯ. ಇಲ್ಲಿಂದ ಚಳುವಳಿಯ ಕಿಚ್ಚು ಹರಡುವುದು. ಹಾಗಾದರೆ 'ಮಂಡ್ಯ' ಎಂಬ ಹೆಸರು ಏಕೆ ಬಂತು ಎಂದು ಉಂಕಿಸಿದಾಗ

ಮಂಡೆ+ಯ => ಮಂಡೆಯ => ಮಂಡ್ಯ  ಅಂದರೆ ತಲೆಗೂದಲು ಹೆಚ್ಚಿರುವವನು, ಜಡೆಯನ್ನು ಹೊಂದಿರವವನು ಎಂಬ ಹುರುಳು ಬರುತ್ತದೆ. Ka. maṇḍe earthen vessel, head, skull, cranium, brain-pan, top portion as of palms, a standard of measure.[DED 4682]

ಹೀಗೆ 'ಯ' ಎಂಬ ಒಟ್ಟು ಸೇರಿಸಿ ಗಂಗುರುತಿನ(ಪುಲ್ಲಿಂಗ)ಪದಗಳನ್ನು ಪಡೆಯುವುದು ಕನ್ನಡದ ಒಂದು ಪರಿಚೆ(ಗುಣ):-
ಎರೆ+ಯ = ಎರೆಯ [ master, king, husband - DED 527]
ಒಡೆ+ಯ = ಒಡೆಯ [owner, lord, master, ruler - DED593]
ಗೆಳೆ+ಯ = ಗೆಳೆಯ [friend - DED2018]
ಹೊಲೆ+ಯ = ಹೊಲೆಯ [DED 4547]
ಮನ್ನೆ+ಯ = ಮನ್ನೆಯ [chieftain, commander -DED 4774 ]
ಮಲ್+ಯ = ಮಲ್ಯ [chief, principal- DED 4729 ]
ಮಯ್+ಯ = ಮಯ್ಯ (ಕುಳದ ಹೆಸರು)
ಕೆಲಸ+ಯ = ಕೆಲಸ್ಯ [ಕೆಲಸಿ = barber- DED 1971]

ಈ ತಲೆಗೂದಲು ಹೆಚ್ಚಿರುವವನು ಇಲ್ಲವೆ ಜಡೆ ಹೊಂದಿರುವವನು ಒಬ್ಬ ಜನಪದ ದೇವರು ಮತ್ತು ಮಂಡ್ಯ ಹೊಳಲಿನ ಹತ್ತಿರದಲ್ಲೇ ಮಂಡೆಯ್ಯನ ಗುಡಿ ಇರುವುದೆಂದು ಕೇಳಿದ್ದೇನೆ.  ಅದಲ್ಲದೆ ಹೊಸದುರ್ಗದ ಬಗ್ಗೆ ಇರುವ ಮಿಂದಾಣದಲ್ಲಿ ಈ ರೀತಿ ಕೊಡಲಾಗಿದೆ.

   "ಆಂಜನೇಯ ದೇವಾಲಯ, ಕೆಂಚಲಕ್ಕಮ್ಮನ ಗುಡಿ, *ಮಂಡೆಯ ಮಂಟಪ*, ಕೆಂಚರಾಯನ ಗುಡಿ ಮತ್ತು ಕಾಡರಾಯನ ಗುಡಿ, ಆಶ್ಚಾರರ ಗುಡಿ, ದೊಣೆಗಂಗಮ್ಮ, ಉಯ್ಯಾಲೆ ಕಂಬಗಳು, ಗಾಳಿ ಗೋಪುರ, ದೀಫಸ್ತಂಭಗಳೊಂದಿಗೆ ಪೂರ್ವಾಭಿಮುಖವಾಗಿ ಕ್ಷೇತ್ರ ಶೋಭಿಸುತ್ತಿದೆ."

ಲಕ್ಕಮ್ಮ, ಮಾರಮ್ಮ, ಬೆಟ್ಟದಪ್ಪ, ಮಲ್ಲಯ್ಯ, ಕಲ್ಲಯ್ಯ, ಬೀರಯ್ಯ ಈ ಕನ್ನಡ ಜನಪದ ದೇವರುಗಳ ತರದಲ್ಲೇ 'ಮಂಡೆಯ್ಯ/ಮಂಡೆಯ' ಎಂಬುದು ಕೂಡ ಒಂದು ಜನಪದ ದೇವರು. ಈ ಜನಪದ ದೇವರಿಂದ ಮಂಡ್ಯಕ್ಕೆ ಆ ಹೆಸರು ಬಂದಿದೆ. ಮಂಡೆಯ ಎಂಬ ಹೆಸರನ್ನೇ ಹೋಲುವ(ಹುರುಳಿನಲ್ಲೂ ಕೂಡ) ಮಂಟೆಸ್ವಾಮಿ, ಜಡೆಯ ಎಂಬ ಜನಪದ ದೇವರುಗಳಿವೆ. ಮಂಟೆಸ್ವಾಮಿಯ ಗುಡಿಗಳು ಮಂಡ್ಯ, ಕೊಳ್ಳೇಗಾಲ ಮತ್ತು ಚಾಮರಾಜನಗರದಲ್ಲಿ ತುಂಬಾ ಇವೆ. ತುಮಕೂರಿನ ತುರುವೇಕೆರೆ ಬಳಿಯ 'ಜಡೆಯ' ಹೆಸರಿನ ಊರು ಮಂಡ್ಯ ಜಿಲ್ಲೆಯ ಗಡಿಗೆ ಹತ್ತಿರದಲ್ಲೇ ಇದೆ.

ಹಾಗಾಗಿ ಜಡೆಯ ಅಂದರೂ ಒಂದೆ, ಮಂಡೆಯ ಅಂದರೂ ಒಂದೇ.  ಜಟೆ, ಜಡೆ, ಜಡಿ, ಜೆಡೆ Ka. jaṭe, jaḍe, jaḍi, jeḍe hair matted and twisted together, [DED 35