ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Friday, October 5, 2012

ಮಂಡ್ಯ

ಮಂಡ್ಯ ಜಿಲ್ಲೆಯು ಸಕ್ಕರೆ ನಾಡು, ಕಾವೇರಿ ಕೊಳ್ಳದ ನಡುನಾಡು ಎಂಬುದಲ್ಲದೆ ಮಂಡ್ಯ ಬೆಣ್ಣೆ, ಮಂಡ್ಯ ಬಕೀಟ್ ಬೆಲ್ಲ ಇವಕ್ಕೆಲ್ಲ ಹೆಸರಾಗಿದೆ. ಕಾವೇರಿ ಚಳುವಳಿಯ ತವರೂರೇ ಮಂಡ್ಯ. ಇಲ್ಲಿಂದ ಚಳುವಳಿಯ ಕಿಚ್ಚು ಹರಡುವುದು. ಹಾಗಾದರೆ 'ಮಂಡ್ಯ' ಎಂಬ ಹೆಸರು ಏಕೆ ಬಂತು ಎಂದು ಉಂಕಿಸಿದಾಗ

ಮಂಡೆ+ಯ => ಮಂಡೆಯ => ಮಂಡ್ಯ  ಅಂದರೆ ತಲೆಗೂದಲು ಹೆಚ್ಚಿರುವವನು, ಜಡೆಯನ್ನು ಹೊಂದಿರವವನು ಎಂಬ ಹುರುಳು ಬರುತ್ತದೆ. Ka. maṇḍe earthen vessel, head, skull, cranium, brain-pan, top portion as of palms, a standard of measure.[DED 4682]

ಹೀಗೆ 'ಯ' ಎಂಬ ಒಟ್ಟು ಸೇರಿಸಿ ಗಂಗುರುತಿನ(ಪುಲ್ಲಿಂಗ)ಪದಗಳನ್ನು ಪಡೆಯುವುದು ಕನ್ನಡದ ಒಂದು ಪರಿಚೆ(ಗುಣ):-
ಎರೆ+ಯ = ಎರೆಯ [ master, king, husband - DED 527]
ಒಡೆ+ಯ = ಒಡೆಯ [owner, lord, master, ruler - DED593]
ಗೆಳೆ+ಯ = ಗೆಳೆಯ [friend - DED2018]
ಹೊಲೆ+ಯ = ಹೊಲೆಯ [DED 4547]
ಮನ್ನೆ+ಯ = ಮನ್ನೆಯ [chieftain, commander -DED 4774 ]
ಮಲ್+ಯ = ಮಲ್ಯ [chief, principal- DED 4729 ]
ಮಯ್+ಯ = ಮಯ್ಯ (ಕುಳದ ಹೆಸರು)
ಕೆಲಸ+ಯ = ಕೆಲಸ್ಯ [ಕೆಲಸಿ = barber- DED 1971]

ಈ ತಲೆಗೂದಲು ಹೆಚ್ಚಿರುವವನು ಇಲ್ಲವೆ ಜಡೆ ಹೊಂದಿರುವವನು ಒಬ್ಬ ಜನಪದ ದೇವರು ಮತ್ತು ಮಂಡ್ಯ ಹೊಳಲಿನ ಹತ್ತಿರದಲ್ಲೇ ಮಂಡೆಯ್ಯನ ಗುಡಿ ಇರುವುದೆಂದು ಕೇಳಿದ್ದೇನೆ.  ಅದಲ್ಲದೆ ಹೊಸದುರ್ಗದ ಬಗ್ಗೆ ಇರುವ ಮಿಂದಾಣದಲ್ಲಿ ಈ ರೀತಿ ಕೊಡಲಾಗಿದೆ.

   "ಆಂಜನೇಯ ದೇವಾಲಯ, ಕೆಂಚಲಕ್ಕಮ್ಮನ ಗುಡಿ, *ಮಂಡೆಯ ಮಂಟಪ*, ಕೆಂಚರಾಯನ ಗುಡಿ ಮತ್ತು ಕಾಡರಾಯನ ಗುಡಿ, ಆಶ್ಚಾರರ ಗುಡಿ, ದೊಣೆಗಂಗಮ್ಮ, ಉಯ್ಯಾಲೆ ಕಂಬಗಳು, ಗಾಳಿ ಗೋಪುರ, ದೀಫಸ್ತಂಭಗಳೊಂದಿಗೆ ಪೂರ್ವಾಭಿಮುಖವಾಗಿ ಕ್ಷೇತ್ರ ಶೋಭಿಸುತ್ತಿದೆ."

ಲಕ್ಕಮ್ಮ, ಮಾರಮ್ಮ, ಬೆಟ್ಟದಪ್ಪ, ಮಲ್ಲಯ್ಯ, ಕಲ್ಲಯ್ಯ, ಬೀರಯ್ಯ ಈ ಕನ್ನಡ ಜನಪದ ದೇವರುಗಳ ತರದಲ್ಲೇ 'ಮಂಡೆಯ್ಯ/ಮಂಡೆಯ' ಎಂಬುದು ಕೂಡ ಒಂದು ಜನಪದ ದೇವರು. ಈ ಜನಪದ ದೇವರಿಂದ ಮಂಡ್ಯಕ್ಕೆ ಆ ಹೆಸರು ಬಂದಿದೆ. ಮಂಡೆಯ ಎಂಬ ಹೆಸರನ್ನೇ ಹೋಲುವ(ಹುರುಳಿನಲ್ಲೂ ಕೂಡ) ಮಂಟೆಸ್ವಾಮಿ, ಜಡೆಯ ಎಂಬ ಜನಪದ ದೇವರುಗಳಿವೆ. ಮಂಟೆಸ್ವಾಮಿಯ ಗುಡಿಗಳು ಮಂಡ್ಯ, ಕೊಳ್ಳೇಗಾಲ ಮತ್ತು ಚಾಮರಾಜನಗರದಲ್ಲಿ ತುಂಬಾ ಇವೆ. ತುಮಕೂರಿನ ತುರುವೇಕೆರೆ ಬಳಿಯ 'ಜಡೆಯ' ಹೆಸರಿನ ಊರು ಮಂಡ್ಯ ಜಿಲ್ಲೆಯ ಗಡಿಗೆ ಹತ್ತಿರದಲ್ಲೇ ಇದೆ.

ಹಾಗಾಗಿ ಜಡೆಯ ಅಂದರೂ ಒಂದೆ, ಮಂಡೆಯ ಅಂದರೂ ಒಂದೇ.  ಜಟೆ, ಜಡೆ, ಜಡಿ, ಜೆಡೆ Ka. jaṭe, jaḍe, jaḍi, jeḍe hair matted and twisted together, [DED 35

3 comments:

  1. ಮಾನ್ಯರೆ,
    ಮಂಡ್ಯ ಎಂಬ ಹೆಸರನ್ನು ಪುರಾಣ ಮುನಿಯ ಹೆಸರಿನಿಂದ ಗುರುತಿಸುವ ವಾದವೂ ಇದೆ. ಮಾಂಡವ್ಯ ಮುನಿಯಿಂದ ಬಂದಿತೆಂದು ಹೇಳುತ್ತಾರೆ(ಮನೋ ನಿಶ್ಚಯಂ ತು ಮಾಂಡವ್ಯಂ- ಗಾದೆ ಮಾತನ್ನೂ ಬಳಸುತ್ತಾರೆ).ಆ ಮುನಿಯ ಸಂಬಂಧಿಕರೂ ಕರ್ನಾಟಕದ ಹಲವಾರು ಕದೆಗಳಲ್ಲಿ ಇದ್ದಿರಬೇಕು. ದಕ್ಷಿಣ ಕನ್ನಡದ ಸುಳ್ಯ ಗುಂಡ್ಯ ಮೊದಲಾದ ಊರುಗಳ ಹೆಸರುಗಳ ಮೂಲಪುರುಷರೂ ಮಾಂಡವ್ಯನ ಈ ಸಂಬಂಧಿಕರೇ ಇರಬೇಕು!. ಸೂಳವ್ಯ. ಗುಂಡವ್ಯ ಇತ್ಯಾದಿ. ಸ್ಥಳನಾಮಗಳ ಮೂಲದ ಬಗ್ಗೆ ಊಹೆಗಳನ್ನಷ್ಟೇ ಮಾಡಬಹುದು. ಹೀಗೇ ಸರಿ ಎಂದು ಹೇಳುವ ಸ್ಥಿತಿ ಇಲ್ಲ.
    ಪಂಡಿತಾರಾಧ್ಯ

    ReplyDelete
  2. ಪಂಡಿತಾರಾದ್ಯರೆ,
    ಆದರೆ ತುಮಕೂರಿನಿಂದ ಚಾಮರಾಜನಗರದವರೆಗೂ ನೋಡಿದರೆ ಮಂಟೇಸ್ವಾಮಿಯ ಜನಪದ ಸಂಸ್ಕ್ರುತಿ ದಟ್ಟವಾಗಿದೆ. ಮಂಡ್ಯ ಜಿಲ್ಲೆಯಲ್ಲೇ ಮಂಟೇಸ್ವಾಮಿ(ಜಡೆಯಸ್ವಾಮಿ) ಯವರದೆಂದು ಹೇಳುವ ಗದ್ದುಗೆ(ಸಮಾದಿ) ಇದೆ. ಹಂಪಿ ಕನ್ನಡ ಪೆರ್ಕಲಿಮನೆಯವರು ಹೊರತಂದಿರುವ ’ಮಂಟೇಸ್ವಾಮಿ ಕಾವ್ಯ- ಸಾಂಸ್ಕ್ರುತಿಕ ಮುಕಾಮುಕಿ’ ಎಂಬ ಹೊತ್ತಿಗೆ ಓದಿ. ಮಂಟೇಸ್ವಾಮಿ ಇಲ್ಲವೆ ಜಡೆಯ ಎಂಬದಕ್ಕೂ ’ಮಂಡ್ಯ’ ಎಂಬ ಹೆಸರಿಗೂ ಹತ್ತಿರದ ನಂಟು ಇದೆ ಅಂತ ನನಗೆ ಬಲವಾಗಿ ಅನ್ನಿಸತೊಡಗಿದೆ.

    ReplyDelete
  3. ಮಂಡೆಯ ಅಥವ ಮಂಟೆಯ ಸಂಸ್ಕೃತಕರಣದ ರೂಪವೆ'ಮಾಂಡವ್ಯ' ಎಂದೂ ಗುರುತಿಸಬಹುದಾಗಿದೆ.
    ಹೀಗೊಂದು ಸಣ್ಣ ನುಡಿಗಟ್ಟು/ನಾಣ್ನುಡಿ "ತಲೆ ಬೋಳಾದೆಡೆ ಮುಂಡೆಗೆ ಹುಟ್ಟಿದವ,ಬೈತಲೆ ಇದ್ದೆಡೆ ಕತ್ತೆಗೆ ಹುಟ್ಟಿದವ, ಜಟೆ ಕಟ್ಟುವವನ್ ಪೊಲಯನಿಗೆ ಹುಟ್ಟಿದವ" ಎಂದು.
    ಮಂಡ್ಯ ಪ್ರಾಂತ್ಯ ಎಂದರೆ ಉತ್ತರದ ಜಡೆಮಾಯಸಂದ್ರ, ದಕ್ಷಿಣಕ್ಕೆ ಕೊಳ್ಳೆಗಾಲ, ಪೂರ್ವಕ್ಕೆ ಕಣ್ವ, ಪಶ್ಚಿಮಕ್ಕೆ ಹೇಮಾವತಿ ಗುರುತಿನೊಳಗಿನ ಮೂಲನಿವಾಸಿಗಳ ಅನ್ವೇಷಣೆ ನಡೆಸಿದರೆ ನಮಗೆ ಕಾಣುವವರೆ ಹೊಲಯರು ಮತ್ತು ಒಕ್ಕಲಿಗರು. ಮಂಟೇ ಸ್ವಾಮಿಯ ಊರು ಎಂಬುದು ನಿಜಕ್ಕೂ ವಿಶ್ವಾಸನೀಯ ಮಾಹಿತಿ.

    ಇದನ್ನು ಹೊರತು ಪಡಿಸಿದರೆ "ಮಧುರ ಮಂಡ್ಯ"ವತಿಯಿಂದ ಮುದ್ರಿಸಲಾದ ಮಂಡ್ಯದ ಬಗ್ಗೆಗಿನ ಮಾಹಿತಿಯಲ್ಲಿ ಮಂಡ್ಯವನ್ನು " ಮಂಟ-ಯ" ಎಂದು ನಿರ್ವಚನಗೊಳಿಸಲಾಗಿದೆ. ಹಾಗು ಅದಕ್ಕೆ ನಾಗರೀಕತೆಯ ಪೂರ್ವದ ವಾಸ ಸ್ಥಾನ ಎಂದು ವಿವರಿಸಲಾಗಿದೆ.
    ಆಡುಮಾತಿನಲ್ಲಿ ಮಂಟೇದ ಲಿಂಗಯ್ಯನಿಗೆ ಮಂಟ್- ಮಂಡ್ ಎಂಬುದು ಬಳಕೆಯಾದಂತೆ ಮಂಟು ಮಂಟ ಎಂಬ ಪದವನ್ನು ಕ್ರಿಯಾ ಪದದ ಅರ್ಥದಲ್ಲೂ ಬಳಸಲಾಗುತ್ತದೆ. "ಮಂಟಾಕ್ತಾವ್ನೆ" (ಮಂಟ್ ಹಾಕುತಿದ್ದಾನೆ) "ಮಂಟಾಕುಕೇಳು" (ಮಂಟ್ ಹಾಕಲು ಹೇಳು) ಇದರ ಅರ್ಥ ನೆಲ ಹದ ಮಾಡು. ವ್ಯವಸಾಯಕ್ಕೆ ಸಿದ್ಧ ಮಾಡು. ಉಳುಮೆ ಮಾಡು ಎಂದು ಅರ್ಥ. ಈ ಪ್ರದೇಶ ಮೂಲನಿವಾಸಿಗಳಾದ ಹೊಲಯರು ಮತ್ತು ಒಕ್ಕಲಿಗರ ಕುಲಕಸುಬು ಸಹ ಬೇಸಾಯವೆ ಎಂಬುದನ್ನು ಇಲ್ಲಿ ಕೂಡಿಸಬಹುದು.

    ReplyDelete