ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Saturday, October 13, 2012

ಕಾವೇರಿ

ತೆಂಕು ಕರ್ನಾಟಕದ ಬಲು ತಲೆಮೆಯ ಹೊಳೆಯೇ ಕಾವೇರಿ. ಕಾವೇರಿ ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿದರೂ ಮಂಡ್ಯ, ಮಯ್ಸೂರು ಮತ್ತು ಬೆಂಗಳೂರು ಕಂಪಣಗಳಿಗೆ ಈ ಹೊಳೆಯ ನೀರು ಬಳಕೆಯಾಗುವುದು ಹೆಚ್ಚು. ಕಾವೇರಿಯನ್ನು ’ಉಸಿರುಹೊಳೆ’(ಜೀವನದಿ) ಎಂದೂ ಕರೆಯುವುದುಂಟು. ಹಾಗಾದರೆ ಕಾವೇರಿ ಎಂಬ ಹೆಸರು ಹೇಗೆ ಬಂತು?

ಮೊದಲು, ಪಡುವಣ ಬೆಟ್ಟಗಳಲ್ಲಿ ಕಾಣಸಿಗುವ ಈ ಮರದ ಹೆಸರುಗಳ ಬಗ್ಗೆ ನೋಡೋಣ:-

ಕನ್ನಡದಲ್ಲಿ ಕಾಜವಾರ, ಕಾಜಿವಾರ, ಕಾಸರ, ಕಾಸರಕ, ಕಾಸರ್ಕ, ಕಾಸಾರಕ, ಕಾಸ್ರ
ತುಳುವಿನಲ್ಲಿ ಕಾಯೆರ್
ಕೊರಗದಲ್ಲಿ ಕಾವೇರಿ (ಇದು ಗಮನಿಸಬೇಕಾದ ಪದ)
ತಮಿಳಿನಲ್ಲಿ ಕಾಂಜಿರಯ್, ಕಾಂಜಿರಮ್
ಮಲೆಯಾಳದಲ್ಲಿ ಕಾಂಇರಮ್

Ka. kājavāra, kājivāra, kāñjira, kāsara, kāsarka, kāsarike, kāsāraka, kāsra strychnine tree(Strychnos nux vomica)
Tu. kāyerů Nux vomica.
Kor. (O.) kāvēri a kind of tree (= Tu. kāyerů).
Ta. kāñcirai, kāñciram strychnine tree.
Ma. kāññiram Strychnos nux vomica.   [DED - 1434]

ಪ್ರಜಾವಾಣಿ ಸುದ್ದಿಹಾಳೆಯ ಬರಹವನ್ನು ನೋಡಿದರೆ ಪಡುವಣ ಬೆಟ್ಟದ ಮಳೆಕಾಡುಗಳಲ್ಲಿ ಈ ಗಿಡ/ಮರ ಬೆಳೆಯುವುದು ಎಂದು ಹೇಳಲಾಗಿದೆ. ಹಾಗೆ ನೋಡಿದರೆ ತಲಕಾವೇರಿಯು ಕೂಡ ಪಡುವಣ ಬೆಟ್ಟದ ಮಗ್ಗುಲಲ್ಲೇ ಇದೆ.

"ಪಶ್ಚಿಮಘಟ್ಟದ ಯಡಕುಮೇರಿ ಹಾಗೂ ಕಾಗಿನಹರೆ ಕಾಯ್ದಿರಿಸಿದ ದಟ್ಟ ಮಳೆಕಾಡಿನಲ್ಲಿ ಹಾಲೆ (ಅಲ್ಟೋನಿಯಾ ಸ್ಕೋಲೋರೀಸ್), ಕಾಸರ್ಕ (ಸ್ಟ್ರಿಕ್ಟನೆಸ್ ನೆಕ್ಸೋಮಿಕಾ), ಬೋಗಿ(ಹೋಪಿಯಾ ಪೋಂಗಾ) ಹೊಂಗೆ (ಹೊಂಗೇನಿಯಾ ಪಿನ್ನಾಟ) ಕಿರೋಲ್ ಬೋಗಿ, (ಹೋಪಿಯಾ ಫರ‌್ವಿಪ್ಲೋರಾ) ರಕ್ತದ ಮರ, ದೂಪದ ಮರ (ವೆಟೆರಿಯಾ ಇಂಡಿಕಾ) ಸಾಗವಾನಿ (ಟೆಕ್ಟೋನಾ ಗ್ರಾಂಡೀಸ್) ಕಾಡು ಶುಂಠಿ, ಕಾಡು ಸೊಪ್ಪು, ವಾಟೆ ಬಿದಿರು, ಚಕ್ರಾಣಿ, ಕಾಡು ಅಮೃತ ಬಳ್ಳಿ, ಕಾಡು ಮಾವು, ಗುಳಿಮಾವು, ನಂದಿ, .. ಹೀಗೆ ಸಾವಿರಾರು ಬಗೆಯ ಸಸ್ಯ ಸಂಪತ್ತು, ಔಷಧೀಯ ಗಿಡಮೂಲಿಕೆಗಳು ಇವೆ."

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ಮಳೆಕಾಡುಗಳ ಪಡುವಣಕ್ಕೆ ಅಂದರೆ ಕೇರಳದ ಕಡೆಗೆ ಹೋದರೆ ’ಕಾಸರಗೋಡು’ ಎಂಬ ಊರು ಸಿಗುತ್ತದೆ. ಹಾಗಾಗಿ ಪಡುವಣದ ಈ ಮಳೆ ಕಾಡುಗಳ ನಡುವೆ/ಹತ್ತಿರ ಈ ಹೆಸರಿನ ಊರುಗಳು ಇರಬಹುದು. ಇದಕ್ಕೆ ಈ ಕಾಸರ್ಕ ಎಂಬ ಈ ಮರವೇ ಕಾರಣವಾಗಿರಬಹುದು.  ಇದೇ ಕಾಡುಗಳಲ್ಲಿ ಹುಟ್ಟುವ ಈ ಹೊಳೆಗೆ ’ಕಾವೇರಿ’ ಎಂದು ಏಕೆ ಹೆಸರು ಬಂದಿರಬಾರದು ಅಂತ ಅನ್ನಿಸಿತು. ಮೇಲೆ ತಿಳಿಸಿದಂತೆ ಅಚ್ಚ ಕೊರಗ ನುಡಿಯಲ್ಲಿ ಕಾವೇರಿ ಅಂದರೆ ’ಒಂದು ತೆರದ ಮರ’ ಎಂಬ ಹುರುಳೇ ಇದೆ.

1 comment:

  1. ಕೊಡವ ನುಡಿಯಲ್ಲಿ ಏನನ್ನುತ್ತಾರೆ?

    ReplyDelete