ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Tuesday, November 13, 2012

ರೇಗು

'ರೇಗು' ಎಂಬ ಪದವು ಹಲವು ನೆಲೆಗಳಲ್ಲಿ ಬಳಕೆಯಲ್ಲಿದೆ

೧. ಅವನನ್ನು ಹಾಗೆ ರೇಗಬೇಡ. 
೨. ಇವನ ಮೇಲೆ ಅವನು ರೇಗುತ್ತಿದ್ದ.

ಈ ಮೇಲಿನ ಸೊಲ್ಲುಗಳನ್ನು ಹೀಗೆ ಹೇಳಿದರೆ ಹುರುಳಿನಲ್ಲಿ ಕೊಂಚ ವ್ಯತ್ಯಾಸ ಆಗುತ್ತದೆ.
೧. ಅವನ ಮೇಲೆ ಹಾಗೆ ಎರಗಬೇಡ
೨. ಇವನ ಮೇಲೆ ಅವನು ಎರಗುತ್ತಿದ್ದ.

ಈಗ 'ಎರಗು' ಎಂಬ ಪದವನ್ನು ನೋಡೋಣ.
ಎರಗು Ka. eṟagu to bow, be bent, crouch, come down, alight, fall upon, attack, enter, join, accrue to; n. a bow, obeisance; eṟagisu to cause to bow, etc.; eṟaka coming down, etc.; eṟaguha bowing, coming down, perching, etc. [DED - 516]

ಎರಗು => ಬೇರೊಬ್ಬರ ಮಯ್ಯ ಮೇಲೆಯೇ ಎರಗಿ ಹೋಗುವುದು, ಬೇರೊಬ್ಬರ ಮೇಲೆ ಯಾವುದೇ ಕಯ್ದುಗಳಿಂದ 'ಎರಗು'ವುದು
ರೇಗು => ಮಾತಿನ ಮೂಲಕ ಬೇರೊಬ್ಬರ ಮೇಲೆ 'attack' ಮಾಡುವುದು.

'ಎರಗು' ಎಂಬುದನ್ನು 'ಉಲಿಕದಲಿಕೆ'ಗೆ(metathesis) ಒಳಪಡಿಸಿದರೆ.

ಎರಗು ===ಉಲಿಕದಲಿಕೆ ಆದಮೇಲೆ==> ರೇಗು ಆಗುತ್ತದೆ

ಯಾಕಂದರೆ,
ಕನ್ನಡದಲ್ಲಿ(ಇಲ್ಲವೆ ದ್ರಾವಿಡ ನುಡಿಗಳಲ್ಲಿ )ಉಲಿಕದಲಿಕೆಯಾದಾಗ
"ಪದದ ಮೊದಲಲ್ಲಿರುವ ತೆರೆಯುಲಿಯು ಬಿದ್ದು ಹೋಗುತ್ತದೆ. ಮತ್ತು ಅದೇ ಗುಂಪಿನ ಉದ್ದ ತೆರೆಯುಲಿ ಪದದ ಎರಡನೇ ಬರಿಗೆಗೆ ಅಂದರೆ ಮುಚ್ಚುಲಿಗೆ ಬಂದು ಸೇರಿಕೊಳ್ಳುತ್ತದೆ"

ಕನ್ನಡದಲ್ಲಿ 'ಯ' ಮತ್ತು 'ವ' ಗುಂಪು ಎಂದು ತೆರೆಯುಲಿಗಳನ್ನು ಗುಂಪಿಸಬಹುದೆಂದು ಈ ಮಿಂಬರಹದಲ್ಲಿ ತೋರಿಸಿಕೊಡಲಾಗಿದೆ. ಅದರ ಪ್ರಕಾರ :-
ಯ - ಇ, ಈ, ಎ, ಏ,
ವ - ಅ,ಆ, ಉ, ಊ, ಒ, ಓ

ಆದ್ದರಿಂದ 'ಎರಗು' ಎಂಬುವಲ್ಲಿರುವ 'ಎ' ಕಾರವು ಬಿದ್ದುಹೋಗಿ ಅದರೆ 'ಉದ್ದತೆರೆಯುಲಿಯು' ಮುಂದಿರುವ 'ರ'ಕಾರಕ್ಕೆ ಬಂದು ಸೇರಿಕೊಂಡಿದೆ.

ಎ+ರ್+ಅ+ಗ್+ಉ => _+ರ್+ಏ+ಗ್+ಉ => ರೇಗು

Tuesday, November 6, 2012

ರಟ್ಟು/ರೊಟ್ಟು

ರಟ್ಟು ಅಂದರೆ ಜಿ.ವಿ.ಅವರ ಪದನೆರಕೆಯಲ್ಲಿ ಕೊಟ್ಟಿರುವುದು

೧ ದಪ್ಪ ಬಟ್ಟೆ, ಒರಟು ಬಟ್ಟೆ
೨ ಪುಸ್ತಕಕ್ಕೆ ಹಾಕುವ ಮೇಲುಹೊದಿಕೆ
೩ ಬರೆಯು ವುದಕ್ಕೆ ಅನುಕೂಲವಾಗುವಂತೆ ಕಾಗದದ ಅಡಿಯಲ್ಲಿಟ್ಟುಕೊಳ್ಳುವ ದಪ್ಪನಾದ ಕಾಗದ, ಹಲಗೆ ಮುಂ.ವು
ರಟ್ಟು ಎಂಬುದು ದಪ್ಪನಾಗಿ, ಒರಟಾಗಿ, ಗಟ್ಟಿಯಾಗಿ ಇರುವುದು. ಹಾಗಾಗಿ 'ಒರಟು' ಎಂಬ ಪದವನ್ನು ತೆಗೆದುಕೊಳ್ಳೋಣ.
ಉರಟು, ಉರಟ, ಉರುಟ, ಉರುಟು, ಉಟ್ಟು, ಒರಟು, ಒರ್ಟು  uraṭu, uraṭa, uruṭa, ur(u)ṭu, uṭṭu, oraṭu, orṭu coarseness (of cloth, thread, hair), thickness, stoutness [ DED 649 ]

ಅದನ್ನು 'ಉಲಿಕದಲಿಕೆ'ಗೆ(metathesis) ಒಳಪಡಿಸಿದರೆ.

ಒರಟು ===ಉಲಿಕದಲಿಕೆ ಆದಮೇಲೆ==> ರೋಟು ಆಗುತ್ತದೆ

ಯಾಕಂದರೆ,
 ಕನ್ನಡದಲ್ಲಿ(ಇಲ್ಲವೆ ದ್ರಾವಿಡ ನುಡಿಗಳಲ್ಲಿ )ಉಲಿಕದಲಿಕೆಯಾದಾಗ
   "ಪದದ ಮೊದಲಲ್ಲಿರುವ ತೆರೆಯುಲಿಯು ಬಿದ್ದು ಹೋಗುತ್ತದೆ. ಮತ್ತು  ಅದೇ ಗುಂಪಿನ ಉದ್ದ ತೆರೆಯುಲಿ ಪದದ ಎರಡನೇ ಬರಿಗೆಗೆ ಅಂದರೆ ಮುಚ್ಚುಲಿಗೆ ಬಂದು ಸೇರಿಕೊಳ್ಳುತ್ತದೆ"

ಕನ್ನಡದಲ್ಲಿ 'ಯ' ಮತ್ತು 'ವ' ಗುಂಪು ಎಂದು ತೆರೆಯುಲಿಗಳನ್ನು ಗುಂಪಿಸಬಹುದೆಂದು ಈ ಮಿಂಬರಹದಲ್ಲಿ ತೋರಿಸಿಕೊಡಲಾಗಿದೆ. ಅದರ ಪ್ರಕಾರ :-
ಯ - ಇ, ಈ, ಎ, ಏ,
ವ - ಅ,ಆ, ಉ, ಊ, ಒ, ಓ

ಆದ್ದರಿಂದ 'ಒರಟು' ಎಂಬುವಲ್ಲಿರುವ 'ಒ' ಕಾರವು ಬಿದ್ದುಹೋಗಿ ಅದರೆ 'ಉದ್ದತೆರೆಯುಲಿಯು' ಮುಂದಿರುವ 'ರ'ಕಾರಕ್ಕೆ ಬಂದು ಸೇರಿಕೊಂಡಿದೆ.

ಒ+ರ್+ಅ+ಟ್+ಉ => _+ರ್+ಓ+ಟ್+ಉ => ರೋಟು

ಇನ್ನು ಕನ್ನಡದಲ್ಲಿ ನಾಲ್ಕು ಉಲಿಗಳ ಪದಗಳಲ್ಲಿ ಅಂದರೆ 'ಮುತೆಮುತೆ' ( ಮು=ಮುಚ್ಚುಲಿ, ತೆ=ತೆರೆಯುಲಿ) ಮಾದರಿಯ ಪದಗಳಲ್ಲಿ ಮಾರ್ಪಾಗುವಾಗ ಕೆಲವು ಒಲವುಗಳನ್ನು ಗಮನಿಸಬಹುದು
     ಮುತೆಮುತೆ <=> ಮುತೆಮುಮುತೆ    
        ತಾಟು      <=> ತಟ್ಟೆ
         ಕೇಡು      <=> ಕೆಟ್ಟು
         ನೀಳ       <=> ನಿಟ್ಟು
         ಆಡೆ        <=> ಅಟ್ಟೆ (leech)
         ಪಾಡಿ      <=> ಪಟ್ಟಿ  (village, hamlet)
         ಪಾಚಿ      <=> ಪಚ್ಚೆ

ಎಡದಲ್ಲಿ ಕೊಟ್ಟಿರುವ ಪದಗಳಲ್ಲಿ ತಾ, ಕೇ, ನೀ, ಆ, ಪಾ ಎಂಬಲ್ಲಿರುವ ಉದ್ದ ತೆರೆಯುಲಿಯು ಮರ್ಪಾಟಾದ ಮೇಲೆ ಗಿಡ್ಡವಾಗುತ್ತದೆ. ಹೀಗೆ ಗಿಡ್ದವಾಗುವುದರಿಂದ ಆಮೇಲೆ ಬರುವ ಮುಚ್ಚುಲಿ ಇಮ್ಮಡಿಯಾಗುತ್ತದೆ. ಹಾಗಾಗಿ ಮೇಲಿನ ಪದಗಳಲ್ಲಿ ಟ್ಟೆ, ಟ್ಟು, ಚ್ಚೆ ಎಂಬ ಎಂಬ ಉಲಿಕಂತೆಯನ್ನು ಗಮನಿಸಬಹುದು.
     
ಹಾಗೆಯೇ,
    ರೋಟು <=> ರೊಟ್ಟು   ಅಂತ ಆಗಿದೆ

ಕನ್ನಡ ಉಲಿಯೊಲವು 'ಒ'ಕಾರ ಮತ್ತು 'ಅ'ಕಾರವನ್ನು ಒಂದೇ ಗುಂಪಿಗೆ ('ವ' ಗುಂಪಿಗೆ) ಸೇರಿಸುವುದರಿಂದ
       ರೊಟ್ಟು => ರಟ್ಟು  ಆಗುವುದು ಸಹಜವಾಗಿದೆ.

ಇದಕ್ಕೆ ಮಿಂಬಲೆಯಲ್ಲಿ ದೊರೆತ ಬಳಕೆ ಸೊಲ್ಲುಗಳು:-
೧. ಮಿಡತೆ, ದುಂಬಿ ಇತ್ಯಾದಿ ಮನೆಯೊಳಗೆ ಬಂದರೆ ರೊಟ್ಟು (card board) ಇಂದ ಹೊಡೆದು ಹೊರಗಟ್ಟುತ್ತಿದ್ದೆವು
೨. ಪಕ್ಕಕ್ಕ ಗೌಡತಿ ಕುಂತು ಒಂದು ನೋಟಬುಕ್ ರಟ್ಟ ತಗೋಂಡು  ಗಾಳಿ ಹಾಕಕ್ಕಿ...