ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Wednesday, June 24, 2015

ಉತ್ತರಹಳ್ಳಿ, ಉತ್ರಳ್ಳಿ

ಕನ್ನಡ ನಾಡಿನಲ್ಲಿ ಊರುಗಳ ಹೆಸರುಗಳಲ್ಲಿ ಕನ್ನಡದ್ದೇ ಆದ ಪದಗಳು ಹೇರಳವಾಗಿ ದೊರೆಯುತ್ತವೆ. ಆದರೆ ಅದರಲ್ಲಿ ಸಂಸ್ಕ್ರುತ ಪದಗಳನ್ನು ಹುಡುಕುವ ಇಲ್ಲವೆ ಬಗೆಯುವ ಕೆಟ್ಟ ಚಾಳಿಯೊಂದು ನಮ್ಮಲ್ಲಿ ಬೆಳೆದುಬಂದಿದೆ. ಅಂದರೆ ಅದು ಮೊದಲು ಸಂಸ್ಕ್ರುತ ಪದವೇ ಆಗಿದ್ದು, ಮಂದಿ ಬಾಯಲ್ಲಿ ’ಅಪಬ್ರಂಶ’ಗೊಂಡು ಕನ್ನಡ ಪದವಾಗಿದೆ ಎಂದು ಹೆಚ್ಚಿನೆಡೆ ಹೇಳಲಾಗುತ್ತದೆ. ಆದರೆ ಇದು ನಮಗೆ(ಕನ್ನಡಿಗರು) ನಾವೇ ಮಾಡಿಕೊಳ್ಳುತ್ತಿರುವ ಮೋಸವಲ್ಲದೇ ಮತ್ತೇನಲ್ಲ. ಅಲ್ಲದೆ ಊರುಗಳ ಹೆಸರುಗಳನ್ನು ಸಂಸ್ಕ್ರುತಕ್ಕೆ ತಳುಕು ಹಾಕುವುದರ ಹಿಂದೆ ಕಟ್ಟುಕತೆಗಳಿರುವುದರಿಂದ ಆ ಬಿಡಿಸುವಿಕೆಗಳಲ್ಲಿ ’ವಸ್ತುನಿಶ್ಟ’ವಾದ ಚಿಂತನೆ ಇರುವುದಿಲ್ಲ. ಅಲ್ಲದೆ ಹಲವೆಡೆ ಸಂಸ್ಕ್ರುತ ಪದಗಳ ಮೂಲಕ ಹೆಸರುಗಳನ್ನು ಬಿಡಿಸಲು ಹೋಗಿ ಎಡವಟ್ಟುಗಳಾಗುತ್ತವೆ. ಅಂತಹ ಒಂದು ಹೆಸರು ’ಉತ್ತರಹಳ್ಳಿ’.

ಉತ್ತರಹಳ್ಳಿ ಎಂಬ ಜೋಡುಪದವನ್ನು ’ಉತ್ತರ’(ಸಂಸ್ಕ್ರುತದಲ್ಲಿ North ಎಂಬ ಹುರುಳಿದೆ) ಮತ್ತು ’ಹಳ್ಳಿ( ಕನ್ನಡದಲ್ಲಿ 'village' ಎಂಬ ಹುರುಳಿದೆ) ಎಂದು ಬಿಡಿಸಲಾಗುತ್ತಿದೆ. ಆದರೆ ಉತ್ತರಹಳ್ಳಿ ಎಂಬ ಊರು ಬೆಂಗಳೂರಿನ ತೆಂಕಿಗೆ (ದಕ್ಶಿಣಕ್ಕೆ) ಇದೆ. ಆದ್ದರಿಂದ ಈ ಬಿಡಿಸುವಿಕೆ ಗೊಂದಲಕ್ಕೆಡೆ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.  ಈ ಗೊಂದಲ ಬಿಡಿಸುವುದಾದರೂ ಹೇಗೆ ಎಂದು ಉಂಕಿಸಿದಾಗ ಕನ್ನಡದ್ದೇ ಆದ ಪದ ’ಉಳು’ ಎಂಬ ಪದ ಹೊಳೆಯಿತು.

ಉಳು (<ಉೞ್) Ka. ur̤ (ur̤t, utt-) id.; ur̤asu, ur̤isu, ur̤usu to cause to plough [DED 688]
ಈ ಉಳು ಎಂಬುದರ ಇನ್ನೊಂದು ರೂಪ ಉತ್/ಉತ್ತು.  ಇದು ಯಾವಾಗಲೂ  ಹಿಂಬೊತ್ತಿನ ರೂಪವಾಗಿ ಕಾಣಿಸಿಕೊಳ್ಳುತ್ತದೆ
ಎತ್ತುಗೆಗೆ,  ಉತ್ತು ಬಾಳುವವನ ಬಾಳು ಎತ್ತಲೂ ಲೇಸು  ಎಂಬ ನಾಣ್ಣುಡಿ ಬಳಕೆಯಲ್ಲಿದೆ. 

ಉಳುವವರು, ಉತ್ತುವರು ಎಂಬ ಹಲವಚನಗಳು ಬಳಕೆಯಲ್ಲಿದೆ.
ಎತ್ತುಗೆಗೆ:  ಮೊದಲ ಬಾರಿಗೆ ಬೂಮಿ ಉತ್ತವರು ಇವರೇ

 ’ಉತ್ತವರು’ ಎಂಬ ಪದವೇ ಮಾತಿನಲ್ಲಿ ’ಉತ್ತೋರು’ ಎಂದು ಆಗಲು ಅನುವಿದೆ. ಎತ್ತುಗೆಗೆ, ಬಂದೋರು(<ಬಂದವರು), ಹೋದೋರು(<ಹೋದವರು) ಎಂಬ ಬಳಕೆಗಳು ನಮ್ಮ ಮುಂದಿದೆ.  ಹಾಗಾಗಿ, ಉತ್ತೋರು ಎಂಬುದಕ್ಕೆ ’ಶಶ್ಟಿ ವಿಬಕ್ತಿ’ಯನ್ನು ಸೇರಿಸಿದರೆ, ಅಂದರೆ
ಉತ್ತೋರು +ಅ = ಉತ್ತೋರ (of farmers/tillers).

’ಉತ್ತೋರ’ ಎಂಬ ಪದಕ್ಕೆ ’ಹಳ್ಳಿ’ ಎಂಬ ಪದ ಸೇರಿದಾಗಿ ’ಉತ್ತೋರಹಳ್ಳಿ’ (A village of farmers/tillers) ಎಂದಾಗುವುದಕ್ಕೆ ಎಡೆಯಿದೆ.

ಉತ್ತೋರಹಳ್ಳಿ => ಉತ್ತರಹಳ್ಳಿ => ಉತ್ರಳ್ಳಿ

ಇದಲ್ಲದೆ, ಇನ್ನೊಂದು ಬಿಡಿಸಿಕೆಯನ್ನು ಇದಕ್ಕೆ ಕೊಡಬಹುದು. ನಾನು ಮೊದಮೊದಲು ಈ ಊರಿಗೆ ಬಂದಾಗ ನಾನು ಕಂಡಂತೆ ಇಲ್ಲಿ ಹೆಚ್ಚು ’ಉತ್ತರಣೆ’ ಗಿಡಗಳು ಕಂಡು ಬರುತ್ತಿತ್ತು. ಇದಕ್ಕೆ  ಉತ್ತರೇಣಿ, ಉತ್ತರಾಣಿ ಎಂಬ ಇನ್ನು ಹಲವು ಹೆಸರುಗಳಿವೆ.
ಹಾಗಾಗಿ, ಇದು ಉತ್ತರಣೆಯ ಹಳ್ಳಿಯಾಗಿದ್ದಿರಲೂ ಬಹುದು.
ಉತ್ತರಣೆ+ಹಳ್ಳಿ = ಉತ್ತರಣೆಹಳ್ಳಿ => ಉತ್ತರಹಳ್ಳಿ => ಉತ್ರಳ್ಳಿ

No comments:

Post a Comment